ಏ.27 ರಂದು “ಕೋಟಿಗೊಬ್ಬ 3′ ಲಿರಿಕಲ್ ವಿಡಿಯೋ ರಿಲೀಸ್
Team Udayavani, Apr 25, 2020, 10:35 AM IST
ಕೋವಿಡ್ 19 ಎಂಬ ಮಹಾ ಮಾರಿ ಇಡೀ ಮಾನವ ಸಂಕುಲವನ್ನೇ ಕಂಗಾಲಾಗಿಸಿದ್ದು ನಿಜ. ಎಲ್ಲಾ ಕ್ಷೇತ್ರದಂತೆ ಕನ್ನಡ ಚಿತ್ರರಂಗ ಕೂಡ ಸ್ಥಗಿತಗೊಂಡಿದ್ದು ಅಷ್ಟೇ ನಿಜ. ಚಿತ್ರಮಂದಿರಗಳು ಬಂದ್ ಆಗಿ, ಚಿತ್ರೀಕರಣ ಚಟುವಟಿಕೆಗಳಿಲ್ಲದೆ ಕಲರ್ಫುಲ್ ದುನಿಯಾ ಅಕ್ಷರಶಃ ದಂಗುಬಡಿದಂತಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ಪ್ರೇಮಿಗಳಿಗೆ ಅದರಲ್ಲೂ ನಟ ಸುದೀಪ್ ಅವರಅಭಿಮಾನಿಗಳಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ.
ಹೌದು, ಸೂರಪ್ಪ ಬಾಬು ನಿರ್ಮಾಣದ ಸುದೀಪ್ ಅಭಿನಯದ ಹೊಸ ಪ್ರತಿಭೆ ಶಿವ ಕಾರ್ತಿಕ್ ನಿರ್ದೇಶನ ಮಾಡಿರುವ “ಕೋಟಿಗೊಬ್ಬ 3 ‘ಸಿನಿಮಾವನ್ನು ಈ ಕೋವಿಡ್ 19 ಎಂಬ ಸಾಂಕ್ರಾಮಿಕ ಸೋಂಕು ಬರದೇ ಇದ್ದಿದ್ದರೆ, ಇದೇ ಏಪ್ರಿಲ್ 30 ರಂದು ಪ್ರೇಕ್ಷಕರ ಎದುರು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ಸೂರಪ್ಪ ಬಾಬು ಮತ್ತು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೋವಿಡ್ 19 ಸಮಸ್ಯೆ ಎದುರಾಗಿ, ಎಲ್ಲವೂ ಮುಂದಕ್ಕೆ ಹೋಗುವಂತಾಯಿತು.
ಈಗ ಈ ಚಿತ್ರದಿಂದ ನಿರ್ಮಾಪಕ ಸೂರಪ್ಪ ಬಾಬು ಅವರು ಒಂದು ಸಂತಸದ ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಅದೇನೆಂದರೆ, ಸುದೀಪ್ ಅಭಿನಯದ “ಕೋಟಿಗೊಬ್ಬ 3 ‘ ಚಿತ್ರ ಯಾವಾಗ ತೆರೆಗೆ ಬರುತ್ತೆ. ಟ್ರೇಲರ್ ಯಾವಾಗ ನೋಡಬಹುದು, ಹಾಡುಗಳನ್ನು ಯಾವಾಗ ಕೇಳಬಹುದು ಎಂದು ದಿನ ಎದುರು ನೋಡುತ್ತಿದ್ದವರಿಗೆ ಏಪ್ರಿಲ್ 27 ರಂದು ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.