ರಿಲ್ಯಾಕ್ಸ್ ಮೂಡ್ನಲ್ಲಿ ಮಾನ್ವಿತಾ
ಬಿಝಿ ಕೆಲಸದಲ್ಲಿ ಸತ್ಯ
Team Udayavani, Jul 31, 2019, 3:01 AM IST
ಕೆಲ ತಿಂಗಳ ಹಿಂದಷ್ಟೆ ತನ್ನ ಚಿತ್ರೀಕರಣ ಕೆಲಸಗಳನ್ನು ಪೂರ್ಣಗೊಳಿಸಿರುವ “ರಿಲ್ಯಾಕ್ಸ್ ಸತ್ಯ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸದ್ಯ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ “ರಿಲ್ಯಾಕ್ಸ್ ಸತ್ಯ’ ಚಿತ್ರದ ರಿ-ರೆಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯ ಕೂಡ ಪೂರ್ಣಗೊಂಡಿದ್ದು, ಚಿತ್ರ ಡಿ.ಐ ಮತ್ತಿತರ ಕಾರ್ಯಗಳಲ್ಲಿ ಚಿತ್ರತಂಡ ನಿರತವಾಗಿದೆ.
ಎಲ್ಲಾ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ ವೇಳೆಗೆ “ರಿಲ್ಯಾಕ್ಸ್ ಸತ್ಯ’ನನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ. “ರೆಡ್ಡ್ರಾಗನ್ ಫಿಲಂಸ್’ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ “ರಿಲ್ಯಾಕ್ಸ್ ಸತ್ಯ’ ಚಿತ್ರದಲ್ಲಿ ಪ್ರಭು ಮುಂಡ್ಕುರ್, ಮಾನ್ವಿತಾ ಕಾಮತ್, ಉಗ್ರಂ ಮಂಜು, ಕಡ್ಡಿಪುಡಿ ಚಂದ್ರು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ನವೀನ್ ರೆಡ್ಡಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮತ್ತು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಯೋಗಿ ಛಾಯಾಗ್ರಹಣ, ಶ್ರೀಕಾಂತ್ ಗೌಡ ಸಂಕಲನ ಕಾರ್ಯವಿದೆ. ಚಿತ್ರಕ್ಕೆ ಆನಂದ್ ರಾಜ, ವಿಕ್ರಂ ಸಂಗೀತ ಸಂಯೋಜನೆಯಿದ್ದು, ಧನಂಜಯ ರಂಜನ್ ಸಾಹಿತ್ಯ ಮತ್ತು ಶಂಕರ್ ರಾಮನ್ ಸಂಭಾಷಣೆ, ವಿಕ್ರಂ ಮೋರ್ ಸಾಹಸ ಸಂಯೋಜನೆ ಇದೆ.