ಸೂರಿ ಪಾಪ್‌ಕಾರ್ನ್ ಸೇರಿದ ನವೀನ್‌

Team Udayavani, Oct 2, 2018, 11:09 AM IST

ಸೂರಿ ನಿರ್ದೇಶನದ “ಪಾಪ್‌ಕಾರ್ನ್ ಮಂಕಿಟೈಗರ್‌’ ತಂಡಕ್ಕೆ ಒಬ್ಬೊಬ್ಬರೇ ಸೇರ್ಪಡೆಯಾಗುತ್ತಿದ್ದಾರೆ. ಧನಂಜಯ್‌ ಹಾಗೂ ಒಂದಷ್ಟು ರಂಗಭೂಮಿ ಕಲಾವಿದರನ್ನಿಟ್ಟುಕೊಂಡು ಸೂರಿ ಚಿತ್ರೀಕರಣ ಆರಂಭಿಸಿದ್ದಾರೆ. ಈಗ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದೆ. ಅದು ನವೀನ್‌. ಯಾವ ನವೀನ್‌ ಎಂದರೆ “ನಾಯಕ’ ಚಿತ್ರದ ನಾಯಕ ಹಾಗೂ ನಟಿ “ಜಾಕಿ’ ಭಾವನಾ ಪತಿ ಎನ್ನಬೇಕು.

ಹೌದು, ನವೀನ್‌ ಈಗ ಸೂರಿಯ “ಪಾಪ್‌ಕಾರ್ನ್’ ತಂಡ ಸೇರಿದ್ದಾರೆ. ಪಿ.ಸಿ.ಶೇಖರ್‌ ನಿರ್ದೇಶನದ “ನಾಯಕ’ ಚಿತ್ರವನ್ನು ನಿರ್ಮಿಸಿ, ನಟಿಸಿದ ನವೀನ್‌ ಆ ನಂತರ ನಟರಾಗಿ ಮುಂದೆ ಪ್ರಯತ್ನಿಸಲಿಲ್ಲ. ಬದಲಾಗಿ ನಿರ್ಮಾಪಕರಾಗಿ “ರೋಮಿಯೋ’ ಚಿತ್ರ ಮಾಡಿದ್ದರು. ಬಳಿಕ ತಮ್ಮದೇ ಬಿಝಿನೆಸ್‌ನಲ್ಲಿ ಬಿಝಿಯಾಗಿದ್ದ ನವೀನ್‌ ಈಗ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಅದು “ಪಾಪ್‌ಕಾರ್ನ್’ ಚಿತ್ರದ ಮೂಲಕ. 

ಎಲ್ಲಾ ಓಕೆ, ಚಿತ್ರದಲ್ಲಿ ನವೀನ್‌ ಪಾತ್ರವೇನು ಎಂದು ನೀವು ಕೇಳಬಹುದು. ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಸೂರಿ ಆಫ‌ರ್‌ ಕೊಟ್ಟಿದ್ದಾರೆ ಬಿಟ್ಟರೆ ಪಾತ್ರದ ಬಗ್ಗೆ ಇನ್ನೂ ಹೇಳಿಲ್ಲ. ಸೂರಿ ಏನೇ ಕೊಟ್ಟರೂ ಭಿನ್ನವಾಗಿರುತ್ತದೆ ಎಂಬ ನಂಬಿಕೆ ಕೂಡಾ ನವೀನ್‌ಗಿದೆ. ಮೂಲಗಳ ಪ್ರಕಾರ, ಚಿತ್ರದಲ್ಲಿ ನವೀನ್‌ ವಿಲನ್‌ ಆಗಿ ನಟಿಸಲಿದ್ದಾರಂತೆ. ಸೂರಿ ನಿರ್ದೇಶನದ “ಜಾಕಿ’ ಚಿತ್ರದ ಮೂಲಕ ಭಾವನಾ ಕನ್ನಡದಲ್ಲಿ ಬೇಡಿಕೆಯ ನಟಿಯಾದರು.

ಈಗ ಅವರ ಪತಿ ನವೀನ್‌, ಸೂರಿ ಕ್ಯಾಂಪ್‌ ಸೇರಿದ್ದಾರೆ. ಮುಂದೆ ಇವರ ಅದೃಷ್ಟ ಖುಲಾಯಿಸುತ್ತಾ ಕಾದು ನೋಡಬೇಕು. “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸುತ್ತಿದ್ದು, ಧನಂಜಯ್‌ ನಾಯಕರಾಗಿದ್ದಾರೆ. “ಟಗರು’ ಚಿತ್ರದ ಯಶಸ್ಸಿನ ನಂತರ ಈ ಜೋಡಿ ಮತ್ತೆ ಒಂದಾಗಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ