ಶಿವಣ್ಣನ ಹುಟ್ಟುಹಬ್ಬಕ್ಕೆ ಹೊಸ ಸರ್ಪ್ರೈಸ್…
Team Udayavani, Jun 24, 2020, 8:12 AM IST
ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಲಾಕ್ಡೌನ್ನಿಂದ ಚಿತ್ರೀಕರಣ ನಿಂತಿದೆ. ಈ ನಡುವೆಯೇ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಜುಲೈ 12 ರಂದು ಶಿವಣ್ಣ ಹುಟ್ಟು ಹಬ್ಬ. ಅವರ ಅಭಿಮಾನಿಗಳ ಪಾಲಿಗೆ ದೊಡ್ಡಹಬ್ಬ. ಪ್ರತಿ ವರ್ಷ ಅವರ ನಟನೆಯ ಸಿನಿಮಾಗಳು ಒಂದಲ್ಲ, ಒಂದು ರೀತಿಯಲ್ಲಿ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡುತ್ತಲೇ ಇದೆ.
ಈ ಬಾರಿ ಶಿವರಾಜ್ ಕುಮಾರ್ ಅವರ ಭಜರಂಗಿ 2 ಚಿತ್ರ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಮುಂದಾಗಿದೆ. ಈ ಬಗ್ಗೆ ಸ್ವತಃ ಚಿತ್ರತಂಡ ಟ್ವೀಟ್ ಮಾಡಿದೆ. ಇಷ್ಟು ದಿನ ಕೋವಿಡ್ ಮಹಾಮಾರಿಯಿಂದ ಏನೂ ಅಪ್ಡೆಟ್ ಕೊಡಲಿಲ್ಲ. ಭಜರಂಗಿ ಅಂದ್ರೇನೆ ದುಷ್ಟ ಶಕ್ತಿಗಳ ಹುಟ್ಟಡಗಿಸೋ ಹೆಸರು. ಕೆಟ್ಟದ್ದನ್ನೆಲ್ಲಾ ಸಂಹಾರ ಮಾಡಿ ಹೊಸ ಶಕ್ತಿಯೊಂದಿಗೆ ಬರುತ್ತಿದ್ದೇವೆ. ಫಸ್ಟ್ ಲುಕ್ ಎಲ್ಲಾ ಆಯ್ತು.
ಇವಾಗ ಹೊಸ ಸರ್ಪ್ರೈಸ್… ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು… ಎಂದು ಟ್ವೀಟ್ ಮಾಡುವ ಮೂಲಕ ಸಿನಿಮಾ ಬಗೆಗಿನ ಕುತೂಹಲ ಕಾಯ್ದಿರಿಸಿದೆ. ಭಜರಂಗಿ 2 ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಅವರಿಗೆ ಭಜರಂಗಿ ಹಾಗೂ ವಜ್ರಕಾಯ ಚಿತ್ರಗಳನ್ನು ನಿರ್ದೇಶಿಸಿದ್ದ ಹರ್ಷ ಅವರಿಗೆ ಶಿವಣ್ಣ ಜೊತೆ ಇದು ಮೂರನೇ ಸಿನಿಮಾ.
ಶಿವಣ್ಣ ಕೂಡಾ ಭಜರಂಗಿ 2ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್ ಹೊಸದಾಗಿದೆಯಂತೆ. ಇನ್ನು ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವುದರಿಂದ ಭಜರಂಗಿ 2 ಕೂಡಾ ಚಿತ್ರೀಕರಣಕ್ಕೆ ತಯಾರಿ ಮಾಡಿ ಕೊಳ್ಳುತ್ತಿದೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ.