ನಿಖಿಲ್‌ ಎಲ್ಲಿದ್ದೀಯಪ್ಪಾ ಪೋಸ್ಟರ್‌ ಬಂತು

Team Udayavani, May 16, 2019, 3:00 AM IST

ಇತ್ತೀಚೆಗಷ್ಟೇ “ಜೋಡೆತ್ತು’, “ಎಲ್ಲಿದ್ದೀಯಪ್ಪಾ’ ಮತ್ತು “ನಿಖಿಲ್‌ ಎಲ್ಲಿದ್ದೀಯಪ್ಪಾ’ ಚಿತ್ರ ಶೀರ್ಷಿಕೆ ನೋಂದಣಿಯಾದ ಕುರಿತು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. “ಎಲ್ಲಿದ್ದೀಯಪ್ಪಾ’ ಚಿತ್ರದ ಡಿಸೈನ್‌ ಕೂಡ ಹೊರಬಂದಿದ್ದರ ಬಗ್ಗೆಯೂ ತಿಳಿಸಲಾಗಿತ್ತು. ಈಗ ಹೊಸ ಸುದ್ದಿಗೆ “ನಿಖಿಲ್‌ ಎಲ್ಲಿದ್ದೀಯಪ್ಪಾ’ ಕೂಡ ಸೇರ್ಪಡೆಯಾಗಿದೆ.

ಅಂದರೆ, “ನಿಖಿಲ್‌ ಎಲ್ಲಿದ್ದೀಯಪ್ಪಾ’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್‌ ಡಿಸೈನ್‌ನಲ್ಲಿ ಇಂಡಿಯಾ ಗೇಟ್‌ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ನಡೆದು ಬರುತ್ತಿರುವ ಚಿತ್ರವಿದ್ದು, ಮೇಲ್ಭಾಗದಲ್ಲಿ ಸಂಸತ್‌ ಭವನದ ಚಿತ್ರವನ್ನು ಅಳವಡಿಸಲಾಗಿದೆ.

ಸದ್ಯಕ್ಕೆ ಈ “ನಿಖಿಲ್‌ ಎಲ್ಲಿದ್ದೀಯಪ್ಪಾ’ ಶೀರ್ಷಿಕೆಯೊಂದಿಗೆ ಡಿಸೈನ್‌ ಹೊಂದಿರುವ ಪೋಸ್ಟರ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೃಷ್ಣೇಗೌಡ ವಹಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರವನ್ನು ಅಶೋಕ್‌ ಕೆ.ಕಡಬ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರಕ್ಕೆ ಎ.ಟಿ.ರವೀಶ್‌ ಅವರು ಸಂಗೀತ ನೀಡುತ್ತಿದ್ದಾರೆ. ಸಿ.ಡಿ.ರಾಜು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸದ್ಯಕ್ಕೆ ಇದು ಪೋಸ್ಟರ್‌ನಲ್ಲಿರುವ ನಿರ್ಮಾಪಕ, ನಿರ್ದೇಶಕ ಹಾಗು ತಂತ್ರಜ್ಞರ ಹೆಸರು. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಯಾರೆಲ್ಲಾ ಇರುತ್ತಾರೆ. ಚಿತ್ರೀಕರಣ ಯಾವಾಗ ಶುರುವಾಗಲಿದೆ ಎಂಬ ಇತ್ಯಾದಿ ಮಾಹಿತಿ ಇಲ್ಲ.

ಲೋಕಸಭೆ ಚುನಾವಣೆ ವೇಳೆ ಹೆಚ್ಚು ಸದ್ದು ಮಾಡಿದ “ನಿಖಿಲ್‌ ಎಲ್ಲಿದ್ದೀಯಪ್ಪಾ’ ಮತ್ತು “ಜೋಡೆತ್ತು’ ಮಾತುಗಳು. ಅತೀ ಹೆಚ್ಚು ಕೇಳಲ್ಪಟ್ಟ ಈ ಪದಗಳೀಗ ಸಿನಿಮಾ ಶೀರ್ಷಿಕೆಗಳಾಗಿ, ಪೋಸ್ಟರ್‌ಗಳು ಹೊರಬಂದಿವೆ. ಈ ಶೀರ್ಷಿಕೆಯಡಿ ಸಿನಿಮಾ ಮಾಡಲು ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಮತ್ತು ಎ.ಗಣೇಶ್‌ ಅವರು ಸಜ್ಜಾಗಿದ್ದಾರೆ.

ಎಂ.ಜಿ.ರಾಮಮೂರ್ತಿ ಅವರು ತಮ್ಮ ಬ್ಯಾನರ್‌ನಲ್ಲಿ “ಜೋಡೆತ್ತು’ ಶೀರ್ಷಿಕೆ ನೋಂದಣಿ ಮಾಡಿಸಿಕೊಂಡರೆ, ಎ.ಗಣೇಶ್‌ ಅವರು “ಎಲ್ಲಿದ್ದೀಯಪ್ಪಾ’ ಶೀರ್ಷಿಕೆಯನ್ನು ಪಕ್ಕಾ ಮಾಡಿದ್ದಾರೆ. ಅಂದಹಾಗೆ, ಈ ಶೀರ್ಷಿಕೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಹಾಗು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿವೆ ಎಂಬುದು ವಿಶೇಷ.

ಅಂದಹಾಗೆ, “ನಿಖಿಲ್‌ ಎಲ್ಲಿದ್ದೀಯಪ್ಪಾ’ ಚಿತ್ರದ ಸ್ಕ್ರಿಪ್ಟ್ ಕೆಲಸ ಜೋರಾಗಿಯೇ ನಡೆಯುತ್ತಿದ್ದು, ಚುನಾವಣೆ ಸಮಯದಲ್ಲಿ ನಡೆದ ಘಟನೆಗಳು ಸೇರಿದಂತೆ ತೆರೆಮರೆಯಲ್ಲಿ ನಡೆದ ಅನೇಕ ವಿಷಯಗಳೂ ಇಲ್ಲಿರಲಿವೆ ಎಂಬುದು ಕೃಷ್ಣೇಗೌಡ ಅವರ ಮಾತು. ಈ ಚಿತ್ರದಲ್ಲಿ ಭಾ.ಮ.ಹರೀಶ್‌ ಅವರು ಮಾಜಿ ಸಿಎಂ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಬಿಟ್ಟರೆ, ಉಳಿದಂತೆ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ