ಮಾಸ್ಟರ್‌ಗೆ ನಿಮಿಕಾ ನಾಯಕಿ

ಓಂ ಜೊತೆ ನಿಮಿಕಾ ಮತ್ತೊಂದು ಚಿತ್ರ

Team Udayavani, Jul 9, 2019, 3:03 AM IST

ಓಂ ಪ್ರಕಾಶ್‌ರಾವ್‌ ನಿರ್ದೇಶನದ “ರವಿಚಂದ್ರ’ ಚಿತ್ರದ ನಾಯಕಿ ನಿಮಿಕಾ ರತ್ನಾಕರ್‌ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ, ಆ ಚಿತ್ರವನ್ನೂ ಓಂ ಪ್ರಕಾಶ್‌ರಾವ್‌ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೌದು, ಈಗಾಗಲೇ “ರವಿಚಂದ್ರ’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಓಂ ಪ್ರಕಾಶ್‌ರಾವ್‌, ಇತ್ತೀಚೆಗಷ್ಟೇ “ಮಾಸ್ಟರ್‌’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು.

ಆ ಚಿತ್ರದಲ್ಲಿ ಆದಿತ್ಯ ಹೀರೋ ಎಂದು ಹೇಳಲಾಗಿತ್ತು. ಪಕ್ಕಾ ಆ್ಯಕ್ಷನ್‌ ಸಿನಿಮಾಗಳಿಗೆ ಸೈ ಎನಿಸಿಕೊಂಡಿರುವ ಓಂ ಪ್ರಕಾಶ್‌ರಾವ್‌, “ಮಾಸ್ಟರ್‌’ ಚಿತ್ರದಲ್ಲೂ ಆ್ಯಕ್ಷನ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈಗಾಗಲೇ “ಮಾಸ್ಟರ್‌’ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಆ ಚಿತ್ರದಲ್ಲಿ ಆದಿತ್ಯ ನಾಯಕ ಅನ್ನುವುದಷ್ಟೇ ಗೊತ್ತಿತ್ತು. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ, ಆ ಚಿತ್ರಕ್ಕೆ ಯಾರು ನಾಯಕಿಯರು ಎಂಬುದು ಗೊತ್ತಿರಲಿಲ್ಲ. ಈಗ ಆ ಚಿತ್ರಕ್ಕೆ ನಿಮಿಕಾ ರತ್ನಾಕರ್‌ ಆಯ್ಕೆಯಾಗಿದ್ದಾರೆ. ಇದೇ ಮೊದಲ ಸಲ ನಿಮಿಕಾ ಅವರು ಆದಿತ್ಯ ಆವರಿಗೆ ಜೋಡಿಯಾಗುತ್ತಿದ್ದಾರೆ. ಅಂದಹಾಗೆ, “ಮಾಸ್ಟರ್‌’ ಚಿತ್ರದಲ್ಲಿ ಆದಿತ್ಯ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆದಿತ್ಯ ಅವರ ಪತ್ನಿ ಪಾತ್ರದಲ್ಲಿ ನಿಮಿಕಾ ರತ್ನಾಕರ್‌ ಅವರು ಕಾಣಿಸಿಕೊಳ್ಳುತ್ತಿದ್ದಾರಂತೆ.

ಹಾಗಂದ ಮಾತ್ರಕ್ಕೆ ಇಲ್ಲಿ ಗ್ಲಾಮರಸ್‌ಗೆ ಜಾಗವೇ ಇಲ್ಲವೆಂದಲ್ಲ, ಓಂ ಪ್ರಕಾಶ್‌ರಾವ್‌ ಚಿತ್ರದಲ್ಲಿ ನಾಯಕಿಯರು ಗ್ಲಾಮರಸ್‌ ಆಗಿ ಕಾಣಲಿಲ್ಲವೆಂದರೆ, ಆ ಚಿತ್ರ ಪರಿಪೂರ್ಣವಾಗುವುದೂ ಇಲ್ಲ. ನಿಮಿಕಾ ಅವರನ್ನು ಈ ಚಿತ್ರದಲ್ಲಿ ನಿರ್ದೇಶಕರು ಗ್ಲಾಮರಸ್‌ ಆಗಿ ತೋರಿಸುತ್ತಿದ್ದಾರಂತೆ.

ಅದೇನೆ ಇರಲಿ, ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ನಿಮಿಕಾ, ಮೆಲ್ಲನೆ ಒಂದೊಂದೇ ಚಿತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬುದು ಈ ಹೊತ್ತಿನ ವಿಶೇಷ. ಈಗಾಗಲೇ ನಿಮಿಕಾ ಅವರು, ಓಂ ಪ್ರಕಾಶ್‌ರಾವ್‌ ನಿರ್ದೇಶನದ “ರವಿಚಂದ್ರ’ ಚಿತ್ರದಲ್ಲಿ ರವಿಚಂದ್ರನ್‌ ಮತ್ತು ಉಪೇಂದ್ರ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಆ ಚಿತ್ರದಲ್ಲಿ ಸೈ ಎನಿಸಿಕೊಂಡ ನಿಮಿಕಾ, ಪುನಃ ಓಂ ಪ್ರಕಾಶ್‌ರಾವ್‌ ನಿರ್ದೇಶನದ “ಮಾಸ್ಟರ್‌’ ಚಿತ್ರದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು, ನಿಮಿಕಾ ಈ ಹಿಂದೆ “ಕಾಶ್ಮೋರ’ ಎಂಬ ಚಿತ್ರದಲ್ಲಿ ನಟಿಸಿದ್ದು, ಅದೂ ಕೂಡ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ