ಒಲವೇ ಮಂದಾರ-2 ಹಿಂದೆ ಹೊಸಬರು

ಒಂದು ಮುತ್ತಿನ ಕಥೆ ಹೇಳಲಿದೆ ತಂಡ

Team Udayavani, Jul 9, 2019, 3:00 AM IST

ಕನ್ನಡದಲ್ಲಿ ಹಿಟ್‌ ಸಿನಿಮಾಗಳ ಶೀರ್ಷಿಕೆಗಳು ಪುನರ್ಬಳಕೆಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಈಗ ಮತ್ತೂಂದು ಹಿಟ್‌ ಚಿತ್ರದ ಶೀರ್ಷಿಕೆ ಸೇರಿದೆ. ಅದು “ಒಲವೇ ಮಂದಾರ’. ಹೌದು, ನಟ ಶ್ರೀಕಿ ಅಭಿನಯದ ಚಿತ್ರವಿದು. ಈ ಸಿನಿಮಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಈಗ ಇಲ್ಲೊಂದು ತಂಡ ಸೇರಿಕೊಂಡು “ಒಲವೇ ಮಂದಾರ-2 ‘ ಎಂಬ ಶೀರ್ಷಿಕೆಯಡಿ ಪಕ್ಕಾ ಲವ್‌ಸ್ಟೋರಿ ಚಿತ್ರ ಮಾಡಲು ಹೊರಟಿದೆ.

ಈ ಚಿತ್ರವನ್ನು ಎಸ್‌.ಆರ್‌.ಪಾಟೀಲ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಇದೀಗ ಬಂದ ಸುದ್ದಿ’ ಚಿತ್ರ ನಿರ್ದೇಶಿಸಿದ್ದ ಎಸ್‌.ಆರ್‌.ಪಾಟೀಲ್‌ ಅವರಿಗೆ ಇದು ಎರಡನೇ ಸಿನಿಮಾ. ಕಥೆ, ಚಿತ್ರಕಥೆ ಜವಾಬ್ದಾರಿ ಹೊತ್ತು ನಿರ್ದೇಶನಕ್ಕಿಳಿದಿದ್ದಾರೆ. ಇನ್ನು, ಚಿತ್ರಕ್ಕೆ ಸನತ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡು ಮೆಚ್ಚುಗೆ ಪಡೆದ “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರದ ಇಬ್ಬರು ನಾಯಕರ ಪೈಕಿ ಸನತ್‌ ಕೂಡ ಒಬ್ಬರಾಗಿ ಕಾಣಿಸಿಕೊಂಡಿದ್ದರು.

ಇದು ಸನತ್‌ಗೆ ಮೂರನೇ ಸಿನಿಮಾ. ಇನ್ನು “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದ ಚೇತನ್‌ರಾಜ್‌ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಹೇಳುವ ಚೇತನ್‌ರಾಜ್‌, “ಇದೊಂದು ಪಕ್ಕಾ ಲವ್‌ಸ್ಟೋರಿ. ಈ ಹಿಂದೆ ಬಂದಿದ್ದ “ಒಲವೇ ಮಂದಾರ’ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲವಾದರೂ, ಇದೂ ಕೂಡ ಪಕ್ಕಾ ಪ್ರೀತಿಯ ಕಥಾಹಂದರ ಹೊಂದಿರುವ ಚಿತ್ರ.

ಚಿತ್ರದ ಶೀಷಿರ್ಕೆಗೆ “ಒಂದು ಮುತ್ತಿನ ಕಥೆ’ ಎಂಬ ಟ್ಯಾಗ್‌ಲೈನ್‌ ಕೂಡ ಇದೆ. ಆ ಅಡಿಬರಹವೇ ಚಿತ್ರದೊಳಗಿರುವ ಹೂರಣದ ರುಚಿಯನ್ನು ತಿಳಿಸುತ್ತದೆ ‘ ಎನ್ನುತ್ತಾರೆ ಚೇತನ್‌ರಾಜ್‌. “ಐ ಲವ್‌ ಯು’ ಚಿತ್ರಕ್ಕೆ ಸಂಗೀತ ನೀಡಿರುವ ಡಾ.ಕಿರಣ್‌ ತೋಟಂಬೈಲು ಅವರು “ಒಲವೇ ಮಂದಾರ-2′ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿರಲಿದ್ದು, ಎಲ್ಲವೂ ಮೆಲೋಡಿ ಹಾಡುಗಳೆಂಬುದು ವಿಶೇಷ.

ಇನ್ನು, ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದು, ಆವರ ಆಯ್ಕೆ ಆಗಬೇಕಷ್ಟೆ. ಉಳಿದ ತಾರಾಬಳಗದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. ಆಗಸ್ಟ್‌ 5 ರ ಒಳಗೆ ಚಿತ್ರೀಕರಣ ಶುರುವಾಗಲಿದೆ. ಈಗಾಗಲೇ ಸಂಗೀತದ ಕೆಲಸ ಶುರುವಾಗಿದೆ. ಚಿತ್ರಕ್ಕೆ ಶ್ರೀದೇವಿ ಮಂಜುನಾಥ್‌ ಮಾತುಗಳನ್ನು ಪೋಣಿಸುತ್ತಿದ್ದಾರೆ. ತನ್ವಿಕ್‌ ಛಾಯಾಗ್ರಹಣವಿದೆ. ರಾಮನಗರ, ಮದ್ದೂರು, ಮಂಡ್ಯ, ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ. ಬಸವ ಕಂಬೈನ್ಸ್‌ ಬ್ಯಾನರ್‌ನಲ್ಲಿ “ಒಲವೇ ಮಂದಾರ-2′ ನಿರ್ಮಾಣವಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ