ಹೇಳಿದ್ದೊಂದು ಮಾಡಿದ್ದೊಂದು

ಸೂಜಿದಾರ ಮೇಲೆ ಹರಿಪ್ರಿಯಾ ಅಸಮಾಧಾನ

Team Udayavani, May 15, 2019, 3:00 AM IST

“ನಿರ್ದೇಶಕರು ನನಗೆ ಹೇಳಿದ ಕಥೆಯನ್ನೇ ಸಿನಿಮಾ ಮಾಡಿದ್ದರೆ, ಸಿನಿಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಮತ್ತು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿತ್ತು ….’ ನಟಿ ಹರಿಪ್ರಿಯಾ ಹೀಗೆ ಹೇಳಿ ಒಂದು ಕ್ಷಣ ಮೌನವಾದರು. ಅಂದಹಾಗೆ, ಹರಿಪ್ರಿಯಾ ಹೇಳಿದ್ದು “ಸೂಜಿದಾರ’ ಸಿನಿಮಾ ಬಗ್ಗೆ. ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ “ಸೂಜಿದಾರ’ ಚಿತ್ರ ಕಳೆದ ವಾರ ತೆರೆಕಂಡಿದೆ.

ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರಲ್ಲೂ ಹರಿಪ್ರಿಯಾ ಅಭಿಮಾನಿಗಳು ಬೇಸರವಾಗಿದ್ದಾರಂತೆ. “ನಾವು ನಿಮ್ಮ ಪೋಸ್ಟರ್‌, ಸ್ಟಿಲ್‌ ನೋಡಿ ಸಿನಿಮಾಕ್ಕೆ ಹೋದರೆ ನಿಮ್ಮ ಪಾತ್ರವನ್ನೇ ಸರಿಯಾಗಿ ತೋರಿಸಿಲ್ಲ’ ಎನ್ನುತ್ತಿದ್ದಾರಂತೆ. ಇತ್ತೀಚೆಗೆ ಸಿನಿಮಾ ನೋಡಿದ ಹರಿಪ್ರಿಯಾ ಅವರಿಗೂ ಅದು ಹೌದೆನಿಸಿದೆ.

“ಸೂಜಿದಾರ’ ನಾನು ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಇವತ್ತಿಗೂ ಅದು ನನ್ನ ಸಿನಿಮಾನೇ. ಆದರೆ, ನಿರ್ದೇಶಕರು ನನಗೆ ಆರಂಭದಲ್ಲಿ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ನಾನು ತುಂಬಾ ಇಷ್ಟಪಟ್ಟು ಒಪ್ಪಿಕೊಂಡು. ಆ ನಂತರ ಸ್ಕ್ರಿಪ್ಟ್ ರಿಹರ್ಸನಲ್‌ಲ್ಲೂ ಮೂರು ದಿನ ಹೋಗಿದ್ದೆ. ಆಗ ಎಲ್ಲವೂ ಚೆನ್ನಾಗಿತ್ತು. ಮುಂದೆ ಅದೇನಾಯಿತೋ ಗೊತ್ತಿಲ್ಲ.

ಇತ್ತೀಚೆಗೆ ಸಿನಿಮಾ ನೋಡಿದಾಗ ನನಗೆ ಹೇಳಿದ ಕಥೆಗೂ ಮಾಡಿ ಕಥೆಗೂ ತುಂಬಾ ವ್ಯತ್ಯಾಸ ಕಾಣುತ್ತಿತ್ತು. ಸಿನಿಮಾ ನೋಡಿದ ನನ್ನ ಅಭಿಮಾನಿಗಳು “ನಿಮ್ಮ ಪಾತ್ರ ಇನ್ನೇನು ತೆರೆದುಕೊಳ್ಳುತ್ತದೆ ಎನ್ನುವಷ್ಟರಲ್ಲಿ ಮತ್ತೂಂದು ಪಾತ್ರ ಬರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು. ಇಡೀ ಸಿನಿಮಾದಲ್ಲಿ ನಾನೊಬ್ಬಳೇ ಇರಬೇಕೆಂದು ನಾನು ಯಾವತ್ತೂ ಬಯಸುವವಳಲ್ಲ.

ನಾನು ಗೆಸ್ಟ್‌ ಅಪಿಯರೆನ್ಸ್‌ ಅನ್ನು ಖುಷಿಯಿಂದ ಮಾಡುತ್ತೇನೆ. ಆದರೆ, ಹೇಳಿದ ಕಥೆಯೇ ಸಿನಿಮಾವಾದರೆ ಇನ್ನೂ ಚೆನ್ನಾಗಿರುತ್ತಿತ್ತು. ಒಳ್ಳೆಯ ಸಿನಿಮಾವಾಗಬೇಕು, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಬೇಕೆಂದು ಸಿನಿಮಾ ಮಾಡಿದಾಗ ಈ ರೀತಿಯಾದರೆ ಸಹಜವಾಗಿಯೇ ಬೇಸರವಾಗುತ್ತದೆ.

ಏನಾದರೂ ಬದಲಾವಣೆ ಮಾಡೋದಾದರೂ ನಮ್ಮ ಗಮನಕ್ಕೂ ತರಬಹುದಿತ್ತಲ್ಲಾ’ ಎನ್ನುವ ಹರಿಪ್ರಿಯಾ, “ಇವತ್ತಿಗೂ ಅದು ನನ್ನ ಸಿನಿಮಾ. ಅದರ ಮೇಲೆ ನನಗೆ ಪ್ರೀತಿ ಇದೆ. ಆದರೆ, ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತಲ್ಲ ಎಂಬ ಕಾಳಜಿಯೂ ಇದೆ’ಎನ್ನುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ