ಪೈಲ್ವಾನ್ – ರಾಬರ್ಟ್ ಸ್ಪೆಷಲ್ ಪೋಸ್ಟರ್ ಬಿಡುಗಡೆ
ಇಂದು, ನಾಳೆ ದಚ್ಚು-ಕಿಚ್ಚ ಅಭಿಮಾನಿಗಳಿಗೆ ಹಬ್ಬ
Team Udayavani, Jun 4, 2019, 3:00 AM IST
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಿಗೆ ಹೀಗೊಂದು ಸಂತಸದ ಸುದ್ದಿ… ಹೀಗೆಂದಾಕ್ಷಣ, ಇವರಿಬ್ಬರ ಸಿನಿಮಾಗಳು ಜೊತೆಯಲ್ಲೇ ಬಿಡುಗಡೆಯಾಗಬಹುದಾ? ಎಂಬ ಪ್ರಶ್ನೆ ಕಾಡಬಹುದು. ಆದರೆ, ವಿಷಯ ಅದಲ್ಲ, “ಪೈಲ್ವಾನ್’ ಮತ್ತು “ರಾಬರ್ಟ್’ ಚಿತ್ರಗಳ ಎಕ್ಸ್ಕ್ಲೂಸಿವ್ ಥೀಮ್ ಪೋಸ್ಟರ್ ರಿಲೀಸ್ ಆಗುತ್ತಿವೆ. ಅದೇ ಈ ಸ್ಟಾರ್ ಸಿನಿಮಾಗಳ ಸ್ಪೆಷಲ್.
ಹೌದು, ಸುದೀಪ್ ಅಭಿನಯದ “ಪೈಲ್ವಾನ್’ ಚಿತ್ರದ ಹೊಸ ಪೋಸ್ಟರ್ ಮಂಗಳವಾರ (ಇಂದು) ಬಿಡುಗಡೆಯಾದರೆ, ಬುಧವಾರ (ನಾಳೆ) ದರ್ಶನ್ ಅಭಿನಯದ “ರಾಬರ್ಟ್’ ಚಿತ್ರದ ಎಕ್ಸ್ಕ್ಲೂಸಿವ್ ಥೀಮ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಸುದೀಪ್ ಅವರ “ಪೈಲ್ವಾನ್’ ಸಾಕಷ್ಟು ಸುದ್ದಿ ಮಾಡಿದೆ.
ಇನ್ನೇನು ಬಿಡುಗಡೆಗೆ ಕಾದಿರುವ “ಪೈಲ್ವಾನ್’ ತನ್ನ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ಕೊಡಲು ಮುಂದಾಗಿದ್ದಾನೆ. ಜೂ.4 ರ ಸಂಜೆ 4 ಗಂಟೆಗೆ ವಿಶೇಷ ಎನಿಸುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಕೃಷ್ಣ ಸಜ್ಜಾಗಿದ್ದಾರೆ. ಆದರೆ, ಆ ಪೋಸ್ಟರ್ ಹೇಗಿರಲಿದೆ, ಯಾವ ಗೆಟಪ್ನಲ್ಲಿ ಸುದೀಪ್ ಮಿಂಚಲಿದ್ದಾರೆ ಎಂಬುದಕ್ಕೆ ಉತ್ತರವಿಲ್ಲ.
ಮಂಗಳವಾರ ಸಂಜೆ ಬಿಡುಗಡೆಯಾಗಲಿರುವ ಪೋಸ್ಟರ್ನಲ್ಲೇ ಎಲ್ಲದ್ದಕ್ಕೂ ಉತ್ತರ ಸಿಗಲಿದೆ. ಇನ್ನೊಂದು ವಿಶೇಷವೆಂದರೆ, ವಿಶೇಷ ವ್ಯಕ್ತಿಯೊಬ್ಬರು “ಪೈಲ್ವಾನ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ಆ ವಿಶೇಷ ವ್ಯಕ್ತಿ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಇತ್ತೀಚೆಗಷ್ಟೇ ಸುನೀಲ್ ಶೆಟ್ಟಿ ವಿಭಿನ್ನ ಗೆಟಪ್ನಲ್ಲಿದ್ದ ಪೋಸ್ಟರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಮೆಚ್ಚುಗೆಗೆ ಪಾತ್ರವಾಗಿತ್ತು.
ಈಗ ಮತ್ತೂಂದು ಹೊಸ ಪೋಸ್ಟರ್ ಬಿಡುಗಡೆ ಮಾಡಲು ರೆಡಿಯಾಗಿದೆ. ಸುದೀಪ್ ಅಭಿಮಾನಿಗಳು ಆ ಹೊಸ ಪೋಸ್ಟರ್ ವೀಕ್ಷಿಸಲು ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ. ಅತ್ತ ದರ್ಶನ್ ಅಭಿನಯದ “ರಾಬರ್ಟ್’ ಚಿತ್ರದ ಎಕ್ಸ್ಕ್ಲೂಸಿವ್ ಥೀಮ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಅವರ ಸ್ಟೇಟಸ್ ನೋಡಿದ ದರ್ಶನ್ ಅಭಿಮಾನಿಗಳ ಖುಷಿಗಂತೂ ಪಾರವೇ ಇಲ್ಲ. ಜೂ.5 ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಥೀಮ್ ಪೋಸ್ಟರ್ ರಿಲೀಸ್ ಮಾಡಲು ತರುಣ್ ಸುಧೀರ್ ನಿರ್ಧರಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ “ರಾಬರ್ಟ್’ ಚಿತ್ರದ ಪೋಸ್ಟರ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ಆಂಜನೇಯನ ಹೆಗಲ ಮೇಲೆ ಕೂತಿರುವ ರಾಮ ಬಾಣ ಬಿಡುತ್ತಿರುವ ಪೋಸ್ಟರ್ ಎಲ್ಲರಲ್ಲೂ ಹೊಸ ಕುತೂಹಲ ಹುಟ್ಟುಹಾಕಿತ್ತು.
ಅದಕ್ಕೂ ಮುನ್ನ ಬಾಲಕನ ಕೈ ಹಿಡಿದಿದ್ದ ಕೈಯೊಂದರ ಪೋಸ್ಟರ್ ಅಷ್ಟೇ ವಿಶೇಷ ಎನಿಸಿತ್ತು. “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು..’ ಎಂಬ ಪದಗಳು ಹೊಸದೊಂದು ನಿರೀಕ್ಷೆಗೆ ಸಾಕ್ಷಿಯಾಗಿತ್ತು. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ದರ್ಶನ್ ಇಲ್ಲಿ ಎರಡು ಗೆಟಪ್ಗ್ಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಗೆಟಪ್ನಲ್ಲಿ ದಾಡಿ ಬಿಟ್ಟಿದ್ದು, ಆ ಭಾಗದ ಚಿತ್ರೀಕರಣ ನಡೆಯುತ್ತಿದೆ. ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ “ರಾಬರ್ಟ್’ ಜೂ.5 ರಂದು ತನ್ನ ಎಕ್ಸ್ಕ್ಲೂéಸಿವ್ ಥೀಮ್ ಪೋಸ್ಟರ್ ಬಿಡುಗಡೆ ಮಾಡುತ್ತಿದೆ. ಹೀಗಾಗಿ ದರ್ಶನ್ ಅಭಿಮಾನಿಗಳ ಪಾಲಿಗೆ ಬುಧವಾರ ಹಬ್ಬವಂತೂ ಹೌದು.
ಅತ್ತ ದರ್ಶನ್ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಚಿತ್ರ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. “ಪೈಲ್ವಾನ್’ ಕೂಡ ಬಿಡುಗಡೆಗೆ ಸಜ್ಜಾಗಿದ್ದು, ದಿನಾಂಕ ಘೋಷಣೆ ಬಾಕಿ ಉಳಿಸಿಕೊಂಡಿದೆ. ಅದೇನೆ ಇರಲಿ, ಈ ಇಬ್ಬರು ಸ್ಟಾರ್ ನಟರ ಚಿತ್ರಗಳ ಪೋಸ್ಟರ್ ನೋಡಲು ಇಬ್ಬರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ.