ಪಾಪ್‌ಕಾರ್ನ್ ಫಸ್ಟ್‌ಲುಕ್ ಇದು
ಡಾಲಿ ಧನಂಜಯ್ ಹೀಗ್ ಕಾಣ್ತಾರೆ
Team Udayavani, Mar 30, 2019, 2:27 PM IST
ನಿರ್ದೇಶಕ “ದುನಿಯಾ’ ಸೂರಿ “ಟಗರು’ ಬಳಿಕ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ಶುರು ಮಾಡಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತವೂ ತಲುಪಿದೆ. ಸೂರಿ ಮಾತ್ರ ಚಿತ್ರದ ಬಗ್ಗೆ ಇದುವರೆಗೂ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಶುಕ್ರವಾರ ಚಿತ್ರದ ಫಸ್ಟ್‌ಲುಕ್ ಹೊರಬಂದಿದೆ.
ಇಲ್ಲಿರುವುದು “ಡಾಲಿ’ ಖ್ಯಾತಿಯ ಧನಂಜಯ್. ಹೌದು, ಧನಂಜಯ್ ಸಂಪೂರ್ಣ ಕೂದಲು ತೆಗೆಸಿ, ಕಣ್ಣನ್ನು ಕೆಂಪಾಗಿಸಿ ಖಡಕ್ ಲುಕ್ ಕೊಟ್ಟಿರುವ ಫೋಟೋ ಈಗ ಎಲ್ಲೆಡೆ ಜೋರು ಸುದ್ದಿ ಮಾಡುತ್ತಿದೆ. ಅಷ್ಟೇ ಅಲ್ಲ, ಬೋಳಾದ ತಲೆ ಮೇಲೆ “ಮಂಕಿ’ ಎಂದು ಬರೆಯಲಾಗಿದೆ. ಸದ್ಯಕ್ಕೆ ಈ ಫಸ್ಟ್‌ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ, ಸಾಕಷ್ಟು ಕುತೂಹಲ ಹುಟ್ಟಿಸಿರುವುದಂತೂ ನಿಜ.
“ಟಗರು’ ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ್ದ ಧನಂಜಯ್‌ಗೆ ಹೊಸ ಇಮೇಜ್ ಸಿಕ್ಕಿದ್ದು ನಿಜ. ಹಾಗೆಯೇ ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದೂ ಸತ್ಯ. “ಟಗರು’ ಚಿತ್ರದಲ್ಲಿ ಧನಂಜಯ್ ತಮ್ಮ ಡಾಲಿ ಪಾತ್ರದ ಮೂಲಕ ಶಿವರಾಜಕುಮಾರ್ ಎದುರು ಖಡಕ್ ವಿಲನ್ ಆಗಿ ಮಿಂಚಿದ್ದರು. ಆದರೆ, ಈ ಚಿತ್ರದಲ್ಲಿ ಧನಂಜಯ್ ಅವರ ಪಾತ್ರವೇನು?
ಈ ಪ್ರಶ್ನೆಗೆ ಉತ್ತರವಿಲ್ಲವಾದರೂ, ಇಲ್ಲಿರುವ ಫಸ್ಟ್‌ಲುಕ್ ಒಂದಷ್ಟು ಕಥೆ ಹೇಳುವಂತಿದೆ. ಅದೇನೆ ಇರಲಿ, ಸೂರಿ ಹೊಸ ಪಾತ್ರ ಸೃಷ್ಟಿಸುವಲ್ಲಿ ಸಿದ್ಧಹಸ್ತರು. ಈ ಬಾರಿಯೂ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ವಿಲನ್ ಪಾತ್ರವನ್ನು ಮಜವಾಗಿ ಕಟ್ಟಿ ಕೊಡುವುದರಲ್ಲಿ ಎರಡು ಮಾತಿಲ್ಲ.