ಪವರ್ಸ್ಟಾರ್ ಕೈಯಲ್ಲಿ “ವಿರಾಟಪರ್ವ’ ಪೋಸ್ಟರ್
ಅರುಗೌಡ ಚಿತ್ರದ ಮೊದಲ ಪೋಸ್ಟರ್ ಹೊರಬಂತು
Team Udayavani, Aug 8, 2019, 3:01 AM IST
ಈ ಹಿಂದೆ “ಮುದ್ದು ಮನಸೆ’ ಚಿತ್ರ ನಿರ್ದೇಶಿಸಿದ್ದ ಅನಂತ್ ಶೈನ್ ಅವರು, ನಾಯಕ ಅರುಗೌಡ ಅವರಿಗೊಂದು ಚಿತ್ರ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ “ವಿರಾಟಪರ್ವ’ ಎಂದು ಶೀರ್ಷಿಕೆ ಇಟ್ಟಿದ್ದನ್ನೂ ಸಹ ನಿರ್ದೇಶಕ ಅನಂತ್ ಶೈನ್ ಅವರು ಹೇಳಿಕೊಂಡಿದ್ದರು. ಈಗ ಹೊಸ ಸುದ್ದಿಯೆಂದರೆ, “ವಿರಾಟಪರ್ವ’ ಚಿತ್ರದ ಪೋಸ್ಟರ್ ಅನ್ನು ನಟ ಪುನೀತ್ರಾಜಕುಮಾರ್ ಅವರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಹೊಸಬರ ಹಾಗು ಗೆಳೆಯರ ಚಿತ್ರಗಳಿಗೆ ಸದಾ ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಪುನೀತ್ರಾಜಕುಮಾರ್ ಅವರು, ಇತ್ತೀಚೆಗೆ, “ವಿರಾಟಪರ್ವ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿ, “ಪೋಸ್ಟರ್ ಹೊಸದೊಂದು ಕುತೂಹಲ ಹುಟ್ಟುಹಾಕುವಂತಿದೆ. ಶೀರ್ಷಿಕೆಯೂ ಚೆನ್ನಾಗಿದೆ. ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ಸಿಗಲಿ’ ಎಂದು ಶುಭಕೋರಿದ್ದಾರೆ. ಇನ್ನು, “ವಿರಾಟಪರ್ವ’ ಎಂಬ ಶೀರ್ಷಿಕೆಯೇ ಪಕ್ಕಾ ಮಾಸ್ ಫೀಲ್ ಆಗುವಂತಿದ್ದು, ಚಿತ್ರದ ಕಥೆ ಕೂಡ ರಗಡ್ ಆಗಿದೆ.
ಚಿತ್ರದಲ್ಲಿ ಅರುಗೌಡ ಅವರು ಹೀರೋ ಆಗಿದ್ದು, ಅವರಿಲ್ಲಿ, ಫೈಟರ್ ಶಿವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದ ಹೆಸರೇ ಹೇಳುವಂತೆ, ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನುವುದನ್ನು ಸೂಚಿಸುತ್ತದೆ. ಈ ಹಿಂದೆ “ಮುದ್ದು ಮನಸೇ’ ಎಂಬ ಲವ್ಸ್ಟೋರಿ ಚಿತ್ರ ಮಾಡಿದ್ದ, ಅನಂತ್ ಶೈನ್ ಅವರಿಗೆ, ಹೊಸತನ ಇರುವ ಅದರಲ್ಲೂ ಈಗಿನ ಯೂಥ್ಸ್ಗೊಂದು ಮಜ ಎನಿಸುವ ಚಿತ್ರ ಮಾಡಬೇಕು ಎಂಬ ಆಸೆ “ವಿರಾಟಪರ್ವ’ ಮೂಲಕ ಈಡೇರುತ್ತಿದೆ ಎಂಬ ವಿಶ್ವಾಸವಿದೆಯಂತೆ.
ಅಂದಹಾಗೆ, ಈ ಚಿತ್ರವನ್ನು ಸುನೀಲ್ ರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿನೀತ್ ರಾಜ್ ಮೆನನ್ ಅವರು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಶಿವು ಬಿ.ಕೆ.ಕುಮಾರ್ ಹಾಗು ಶಿವಸೀನ ಚಿತ್ರಕ್ಕೆ ಛಾಯಾಗ್ರಾಹಕರು. ವೆಂಕಿ, ಜ್ಞಾನೇಶ್, ವಿಜಯ್ ಸಂಕಲನವಿದೆ. ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಮಾಸ್ ಮಾದ ಹಾಗು ವಿಕ್ರಮ್ ಅವರ ಆ್ಯಕ್ಷನ್ ಚಿತ್ರಕ್ಕಿದೆ. ಇನ್ನು, ನಾಗೇಂದ್ರ ಪ್ರಸಾದ್,ಕವಿರಾಜ್, ಯೋಗರಾಜ್ಭಟ್ ಅವರು ಗೀತೆಗಳನ್ನು ರಚಿಸಿದ್ದಾರೆ. ಸಂದೀಪ್ ಮತ್ತು ರಘು ಸಂಭಾಷಣೆ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ರಿತ್ವಿಕ್ ಮಾಡುತ್ತಿದ್ದಾರೆ.