ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’
Team Udayavani, Nov 26, 2022, 4:43 PM IST
ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “56′ ಚಿತ್ರ ಡಿ.09ರಂದು ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಅನ್ನು, ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ ಅವರು ಬಿಡುಗಡೆ ಮಾಡಿದರು. ಪ್ರವೀಣ್ ರೆಡ್ಡಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.
ನಿರ್ದೇಶಕ ರಾಜೇಶ್ ಆನಂದ್ ಲೀಲಾ ಮಾತನಾಡಿ, “ನಿರ್ಮಾಪಕ ಪ್ರವೀಣ್ ರೆಡ್ಡಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ನಟಿ ಪ್ರಿಯಾಮಣಿ ಅವರು ಚಿನ್ನದ ಕಳಶವಿದ್ದಂತೆ. ಮೆಡಿಕಲ್ ಮಾಫಿಯಾದ ಸುತ್ತ ಸಾಗುವ ಸೈನ್ಸ್ ಫಿಕ್ಷನ್ ಕತೆ ಈ ಚಿತ್ರದಲ್ಲಿದೆ. ಇಲ್ಲಿವರೆಗೆ ಇದನ್ನು ಯಾರೂ ತೆರೆಮೇಲೆ ತರುವ ಪ್ರಯತ್ನ ಮಾಡಿಲ್ಲ’ ಎಂದರು.
ನಟಿ ಪ್ರಿಯಾಮಣಿ ಮಾತನಾಡಿ, “ನಾನು ಮೊದಲು ಕಥೆ ಕೇಳಿದಾಗ, ನೀವು ಹೇಳಿದ ಹಾಗೆ ಸಿನಿಮಾ ಮಾಡಿದರೆ ಹಿಟ್ ಆಗಲಿದೆ ಎಂದು ಹೇಳಿದ್ದೆ. ಅದರಂತೆ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ಮೂಲಕ ಒಂದೊಳ್ಳೆ ಸಂದೇಶ ಹೇಳಲಾಗಿದೆ. ಕಥೆಯೇ ಪವರ್ ಹೌಸ್ ಹೊರತು ನಾನಲ್ಲ’ ಎಂದು ಹೇಳಿದರು.
ನಟ, ನಿರ್ಮಾಪಕ ಪ್ರವೀಣ್ ರೆಡ್ಡಿ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ಸಂಚಿತ್ ಫಿಲಂಸ್ ವೆಂಕಟ್ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗೆಯಾಗಲಿದೆ.