ಪ್ರಭುದೇವ ಜತೆಗೆ ಮಸ್ತ್ ಡ್ಯಾನ್ಸ್ ಗೆ ಪುನೀತ್ ರೆಡಿ
Team Udayavani, Sep 16, 2021, 11:02 AM IST
ಪುನೀತ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ಅವರ ಡ್ಯಾನ್ಸ್ಗೆ, ಮಸ್ತ್ ಸ್ಟೆಪ್ಸ್ಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಕನ್ನಡ ಚಿತ್ರರಂಗದ ಮಟ್ಟಿಗೆ ಡ್ಯಾನ್ಸಿಂಗ್ ಸ್ಟಾರ್ ಆಗಿಯೂ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಇದೇ ಮೊದಲ ಬಾರಿಗೆ ಇಂಡಿಯನ್ ಮೈಕಲ್ ಜಾಕ್ಸನ್ಖ್ಯಾತಿಯ ಪ್ರಭುದೇವ ಜತೆಗೆ ಹೆಜ್ಜೆ ಹಾಕಲಿದ್ದಾರೆ.
ಹೌದು, ಪ್ರಭುದೇವ ಅವರ ಕಿರಿಯ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮತ್ತು ಪ್ರಭುದೇವ ಒಟ್ಟಾಗಿ ಹೆಜ್ಜೆ ಹಾಕಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಕಳೆದಕೆಲ ದಿನಗಳಿಂದ ಸ್ಯಾಂಡಲ್ವುಡ್ ನಲ್ಲಿ ಪುನೀತ್ ರಾಜಕುಮಾರ್ ಮತ್ತು ಪ್ರಭುದೇವ ಜೊತೆಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಚಿತ್ರತಂಡ ಈ ಸುದ್ದಿಯನ್ನು ಖಚಿತಪಡಿಸಿರಲಿಲ್ಲ. ಇದೀಗ ಚಿತ್ರತಂಡದ ಕಡೆಯಿಂದಲೇ ಇಂಥದ್ದೊಂದು ಸುದ್ದಿ ಹೊರ ಬಂದಿರುವುದರಿಂದ, ಸ್ಕ್ರೀನ್ ಮೇಲೆ ಪುನೀತ್ – ಪ್ರಭುದೇವ ಸ್ಟೆಪ್ಸ್ ಪಕ್ಕಾ ಆಗಿದೆ.
ಇದನ್ನೂ ಓದಿ:ಸಾಮಾಜಿಕ ತಾಣಗಳಲ್ಲಿ ನೀರಜ್ ಮೌಲ್ಯ 428 ಕೋಟಿ ರೂ.
ಇನ್ನು ತಮಿಳಿನ ‘ಓ ಮೈ ಕಡುವಲೇ’ ಸಿನಿಮಾ ರಿಮೇಕ್ ಆಗಿರುವ “ಲಕ್ಕಿ ಮ್ಯಾನ್’ ಚಿತ್ರದಲ್ಲಿ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಬರುವ ಅತಿಥಿ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಜಾನಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಸದ್ದಿಲ್ಲದೆ ಚಿತ್ರೀಕರಣನಡೆಯುತ್ತಿದೆ.
ಚಿತ್ರದಲ್ಲಿ ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ಇಬ್ಬರು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಬಹುತೇಕ ಹೊರಾಂಗಣ ಚಿತ್ರೀಕರಣ ಮುಕ್ತಾಯ ವಾಗಿದ್ದು, ಪುನೀತ್ ಮತ್ತು ಪ್ರಭುದೇವ ಕಾಂಬಿನೇಶನ್ನ ಈ ಹಾಡಿನೊಂದಿಗೆ “ಲಕ್ಕಿ ಮ್ಯಾನ್’ ಶೂಟಿಂಗ್ ಪೂರ್ಣ ಗೊಳಿಸುವ ಯೋಜನೆಯಲ್ಲಿದೆ ಚಿತ್ರತಂಡ.
ಕನ್ನಡದಲ್ಲಿ ಈ ಹಿಂದೆ “ಮನ ಸೆಲ್ಲಾ ನೀನೇ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಒಟ್ಟಾರೆ ಪುನೀತ್ ರಾಜಕುಮಾರ್, ಪ್ರಭುದೇವ ಒಟ್ಟಿಗೆ ಸ್ಟೆಪ್ಸ್ ಹಾಕಲಿದ್ದಾರೆ ಎಂಬ ಸುದ್ದಿಯೇ ಪವರ್ ಸ್ಟಾರ್ ಫ್ಯಾನ್ಸ್ ನಿರೀಕ್ಷೆ ದುಪ್ಪಟ್ಟು ಮಾಡಿದ್ದು, ಇಬ್ಬರು ಡ್ಯಾನ್ಸಿಂಗ್ ಸ್ಟಾರ್ಗಳ ಜುಗಲ್ಬಂದಿ ಹೇಗಿರಲಿದೆ ಅನ್ನೋ ಕುತೂಹಲಕ್ಕೆ ಹಾಡು ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.