ಪುಷ್ಕರ್ ಚಿತ್ತ ಈಗ ಹಾರರ್ನತ್ತ
Team Udayavani, Aug 8, 2018, 10:00 PM IST
ಪುಷ್ಕರ್ ಮಲ್ಲಿಕಾರ್ಜುನ್ ಈಗ ಇದೇ ಮೊದಲ ಬಾರಿಗೆ ಹಾರರ್ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಹೌದು, ಒಂದರ ಮೇಲೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಪುಷ್ಕರ್ ಮಲ್ಲಿಕಾರ್ಜುನ್, ಈಗ ಹಾರರ್ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಂದಹಾಗೆ, “ಮಮ್ಮಿ’ ಚಿತ್ರ ನಿರ್ದೇಶಿಸಿದ್ದ ಲೋಹಿತ್ ಜೊತೆ ಹಾರರ್ ಚಿತ್ರ ಮಾಡುತ್ತಿರುವ ಬಗ್ಗೆ ಸ್ವತಃ ಪುಷ್ಕರ್ ಮಲ್ಲಿಕಾರ್ಜುನ್ ಅವರೇ ಹೇಳಿಕೊಂಡಿದ್ದಾರೆ.
“ಮಮ್ಮಿ’ ಸಿನಿಮಾ ನೋಡಿದ್ದ ಪುಷ್ಕರ್, ಅಂಥದ್ದೊಂದು ಚಿತ್ರವನ್ನು ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆಗಲೇ, ಲೋಹಿತ್ ಜೊತೆಗೆ ಮಾತುಕತೆಯೂ ನಡೆದಿತ್ತು. ಆದರೆ, ಆಗ ಪುಷ್ಕರ್ ಮಲ್ಲಿಕಾರ್ಜುನ್ ಕೂಡ ಬಿಜಿ ಇದ್ದರು. ಇತ್ತ, ಲೋಹಿತ್ ಕೂಡ “ಹೌರಾ ಬ್ರಿಡ್ಜ್’ ಚಿತ್ರದಲ್ಲಿ ಬಿಜಿಯಾಗಿದ್ದರು. ಈಗ ಪುಷ್ಕರ್ ತಮ್ಮ ಬ್ಯಾನರ್ನಲ್ಲಿ “ಭೀಮಸೇನ ನಳಮಹರಾಜ’, “ಅವನೇ ಶ್ರೀಮನ್ನಾರಾಯಣ’ ಮತ್ತು “ಚಾರ್ಲಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಗಳ ಬಳಿಕ ಅವರು ಲೋಹಿತ್ ಜೊತೆಗೆ ಹಾರರ್ ಚಿತ್ರ ಮಾಡಲು ಮುಂದಾಗಲಿದ್ದಾರೆ.
ಸದ್ಯಕ್ಕೆ ಪುಷ್ಕರ್ ಹಾರರ್ ಚಿತ್ರ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. ಸ್ಕ್ರಿಪ್ಟ್ ಈಗಷ್ಟೇ ಶುರುವಾಗಿದೆ. ಚಿತ್ರಕ್ಕೆ ಹೆಸರೇನು, ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿ ಮಾಹಿತಿಗಳು ಮುಂದೆ ಸಿಗಲಿವೆ. ಅದೇನೆ ಇರಲಿ, ಪುಷ್ಕರ್ ಹಾರರ್ ಚಿತ್ರಕ್ಕೆ ಮನಸ್ಸು ಮಾಡಿರುವುದು ಎಲ್ಲಾ ಹಾರರ್ ಚಿತ್ರಗಳಂತೆ ಇದೂ ಒಂದು ಎನಿಸಿಕೊಳ್ಳಬಾರದು. ಅದೊಂದು ವಿಭಿನ್ನವಾಗಿರಬೇಕು ಹಾಲಿವುಡ್ ಶೈಲಿಯ ತಂತ್ರಜ್ಞಾನದ ಸ್ಪರ್ಶ ಕೊಟ್ಟು ವಿಶೇಷ ಎನಿಸುವಷ್ಟರ ಮಟ್ಟಿಗೆ ಹಾರರ್ ಚಿತ್ರ ಮಾಡುವ ಬಗ್ಗೆ ತಯಾರಿ ನಡೆಸುತ್ತಿದ್ದಾರೆ.