ಸ್ಯಾಂಡಲ್ ವುಡ್ ನಿಂದ ರಶ್ಮಿಕಾ ಬ್ಯಾನ್ ಆಗಿದ್ದು ಹೌದಾ? ನಟಿ ಹೇಳುವುದೇನು?
Team Udayavani, Dec 10, 2022, 10:09 AM IST
ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಯಾರು ಇಂಥದ್ದೊಂದು ಸುದ್ದಿಯನ್ನು ಹರಿಬಿಟ್ಟಿದ್ದಾರೆ? ನಿಜವಾಗಿಯೂ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆಯಾ? ಎಂಬ ಪ್ರಶ್ನೆಗಳ ನಡುವೆಯೇ ರಶ್ಮಿಕಾ ಇದಕ್ಕೆ ಉತ್ತರಿಸಿದ್ದಾರೆ.
ಹೌದು, ಇತ್ತೀಚೆಗಷ್ಟೇ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಶ್ಮಿಕಾ, “ರಶ್ಮಿಕಾನ ಬ್ಯಾನ್ ಮಾಡಬೇಕು ಎನ್ನುತ್ತಿರುವುದು ಸೋಶಿಯಲ್ ಮೀಡಿಯಾ ಚರ್ಚೆ ಅಷ್ಟೆ. ಚಿತ್ರರಂಗದಿಂದ ಯಾರು ಈ ಮಾತನ್ನು ಹೇಳಿಲ್ಲ. ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ. ಈವರೆಗೆ ಇಂತಹ ವಿಚಾರ ನನ್ನ ಬಳಿಗೆ ಬಂದಿಲ್ಲ ಎಂದಿದ್ದಾರೆ. ಕನ್ನಡ ಸಿನಿಮಾಗಳ ಮೇಲೆ ಯಾವಾಗಲೂ ನನಗೆ ಪ್ರೀತಿ ಇದ್ದೇ ಇದೆ. ವಾಸ್ತವ ತಿಳಿದುಕೊಳ್ಳದೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದಿದ್ದಾರೆ.
“ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಇಟ್ಟು ಪ್ರಪಂಚಕ್ಕೆ ತೋರಿಸಲು ಸಾಧ್ಯವಿಲ್ಲ’ ಎಂದಿರುವ ರಶ್ಮಿಕಾ “ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ. ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ. ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನೆಲ್ಲಾ ಅವರ ವಿವೇಚನೆಗೆ ಬಿಡುತ್ತೇನೆ’ ಎಂದು ಹೇಳಿದ್ದಾರೆ.