ಹೆದರಿಸೋಕೆ ನೀತು ರೆಡಿ!

ಬದಲಾವಣೆ ಸಮಯದಲ್ಲೊಂದು ಹೊಸ ಪಾತ್ರ

Team Udayavani, Jul 10, 2019, 3:02 AM IST

ನಟಿ ನೀತು ಅಂದಾಕ್ಷಣ, ಥಟ್ಟನೆ ನೆನಪಾಗೋದೆ “ಗಾಳಿಪಟ’. ಪಟಪಟ ಮಾತನಾಡುವ ಹುಡುಗಿಯಾಗಿ ಗಮನಸೆಳೆದಿದ್ದು ನೀತು, ಎಲ್ಲರ ಗಮನಸೆಳೆದಿದ್ದರು. ಆ ಬಳಿಕ ಒಂದೊಂದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇಂತಿಪ್ಪ, ನೀನು ಈಗ ಬರೋಬ್ಬರಿ 39 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಒಬ್ಬ ನಟಿ ಇಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ಸುಲಭದ ಮಾತಂತೂ ಅಲ್ಲ ಬಿಡಿ. ಈ ಎಲ್ಲಾ ಚಿತ್ರಗಳಲ್ಲೂ ನೀತು ಅವರದು ವಿಭಿನ್ನ ಪಾತ್ರಗಳೇ ಎಂಬುದು ವಿಶೇಷ. ಈಗ ಇಲ್ಲಿ ಹೇಳಹೊರಟಿರುವ ವಿಷಯವೆಂದರೆ, ನೀತು, ಇದೇ ಮೊದಲ ಬಾರಿಗೆ ಯಾರೂ ನಿರೀಕ್ಷಿಸದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ನೀತು ಈಗ ಹೆದರಿಸೋಕೆ ಮುಂದಾಗಿದ್ದಾರೆ.

ಹೀಗಂದರೆ, ಒಂದಷ್ಟು ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ, ಅವರು ಇದೇ ಮೊದಲ ಸಲ “ದೆವ್ವ’ ಪಾತ್ರ ನಿರ್ವಹಿಸಿದ್ದಾರೆ! ಆ ಕುರಿತು ಸ್ವತಃ ನೀತು ಹೇಳುವುದು ಹೀಗೆ. “ನಾನು ಇದುವರೆಗೆ ಎಲ್ಲಾ ರೀತಿಯ ಪಾತ್ರ ನಿರ್ವಹಿಸಿದ್ದೇನೆ. ಈಗ “ವಜ್ರಮುಖಿ’ ಎಂಬ ಹಾರರ್‌ ಸಿನಿಮಾದಲ್ಲಿ ದೆವ್ವ ಪಾತ್ರ ಮಾಡಿದ್ದೇನೆ. ಅದೊಂದು ಹೊಸ ಅನುಭವ.

ಅಂತಹ ಪಾತ್ರ ಮಾಡುವಾಗ ನಿಜಕ್ಕೂ ಚಾಲೆಂಜ್‌ ಇದ್ದೇ ಇರುತ್ತೆ. ಈಗಾಗಲೇ ಹಾರರ್‌ ಸಿನಿಮಾಗಳು ಸಾಕಷ್ಟು ಬಂದಿವೆ. “ನಾಗವಲ್ಲಿ’, “ಕಾಂಚನ’ ಹೀಗೆ ಜನಪ್ರಿಯಗೊಂಡಿವೆ. ಇದು ಆತ್ಮದ ಕಥೆಯೇ ಎಂಬ ಪ್ರಶ್ನೆಗೆ “ವಜ್ರಮುಖಿ’ ಸಿನಿಮಾದಲ್ಲೇ ಉತ್ತರ ಸಿಗಲಿದೆ ‘ ಎಂಬುದು ನೀತು ಹೇಳಿಕೆ. ಹಾಗಾದರೆ, ನೀತು ಅವರ ದೆವ್ವದ ಪಾತ್ರ, ಸೇಡು ತೀರಿಸಿಕೊಳ್ಳುತ್ತಾ?

ಅದಕ್ಕೂ ದ್ವೇಷ ಎಂಬುದು ಇರುತ್ತಾ? ಇದಕ್ಕೆ ಉತ್ತರ ಕೊಡುವ ನೀತು, “ಇಲ್ಲಿ ಮನುಷ್ಯ ಅನುಭವಿಸುವ ಯಾತನೆ, ಸಂಕಟ, ಸುಖ,ದುಃಖ ಇವೆಲ್ಲವನ್ನೂ ಆ ದೆವ್ವ ಪಾತ್ರವೂ ಅನುಭವಿಸುತ್ತೆ. ಯಾಕೆ ಏನು ಎಂಬುದನ್ನು ಚಿತ್ರದಲ್ಲೇ ನೋಡಿ’ ಎನ್ನುತ್ತಾರೆ ನೀತು. ಇದು ಯಾವುದೋ ನೈಜ ಘಟನೆಯಲ್ಲ. ಕಲ್ಪನೆಯ ಕಥೆ.

ಹಾರರ್‌ ಸಿನಿಮಾಗಳನ್ನು ಇಷ್ಟಪಡುವ ಮಂದಿಗೆ “ವಜ್ರಮುಖಿ’ ಖಂಡಿತ ಇಷ್ಟವಾಗದೇ ಇರದು ಎಂದಷ್ಟೇ ಹೇಳುವ ನೀತು, ಸದ್ಯಕ್ಕೆ ಯಾವ ಹೊಸ ಚಿತ್ರವನ್ನೂ ಒಪ್ಪಿಲ್ಲ. ಇದುವರೆಗೆ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಉಳಿದಂತೆ ಅವರು ಚಿತ್ರೀಕರಣ ಇಲ್ಲದ ಸಮಯದಲ್ಲಿ ಎಂದಿನಂತೆ ಜರ್ನಿಯತ್ತ ತಮ್ಮ ಚಿತ್ತ ಹರಿಸುತ್ತಾರಂತೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ