ಕಿತ್ತು ತಿನ್ನುವ ಬಡತನಕ್ಕೆ ಸಡ್ಡು ಹೊಡೆದು ಕನ್ನಡದ ವಡಿವೇಲು ಆಗಿ ಬೆಳೆದ “ಸಾಧು”

ನಾಗೇಂದ್ರ ತ್ರಾಸಿ, Oct 26, 2019, 7:12 PM IST

ಕನ್ನಡ ಚಿತ್ರರಂಗ ಹಾಸ್ಯ ಚಕ್ರವರ್ತಿ ನರಸಿಂಹರಾಜು, ಬಾಲಣ್ಣ, ಮುಸುರಿ ಕೃಷ್ಣಮೂರ್ತಿ, ದಿನೇಶ್, ದ್ವಾರಕೀಶ್, ಉಮೇಶ್,  ಧೀರೇಂದ್ರ ಗೋಪಾಲ್, ಎನ್ ಎಸ್ ರಾವ್, ಡಿಂಗ್ರಿ ನಾಗರಾಜ್, ಹೊನ್ನಾವಳಿ ಕೃಷ್ಣ, ಟೆನ್ನಿಸ್ ಕೃಷ್ಣ, ದೊಡ್ಡಣ್ಣ ಹೀಗೆ ಘಟಾನುಘಟಿ ಹಾಸ್ಯ ನಟರು ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಿದ ಹಾಗೂ ಎಂದೆಂದಿಗೂ ಮರೆಯದ ಖ್ಯಾತ ನಟರಾಗಿದ್ದರು. ಇವೆಲ್ಲವೂ 1960, 70, 80ರ ದಶಕದ ಕಥೆ. ಆದರೆ ಆ ನಂತರ ಪ್ರವೇಶಿಸಿದ ಸಹಾಯ್ ಶೀಲನ್ ಶಾದ್ರಾಜ್ ಎಂಬ ಹಾಸ್ಯ ನಟನನ್ನು ಮರೆಯಲು ಸಾಧ್ಯವಿಲ್ಲ. ಈ ನಟ ಬೇರೆ ಯಾರು ಅಲ್ಲ 1992ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಸಾಧು ಕೋಕಿಲ.

ಸಿನಿಮಾ ನಟನಾಗುವ ಮುನ್ನ ಚಿತ್ರರಂಗದಲ್ಲಿ ಸಂಗೀತಗಾರರಾಗಿ, ನಟನಾಗಿ, ನಿರ್ಮಾಪಕನಾಗಿ ಬೆಳೆದು ಬಂದ ಸಾಧು ಅದ್ಭುತ ಹಾಸ್ಯನಟರಾಗಿ ಮೆರೆದಿದ್ದು ನಮ್ಮ ಕಣ್ಮುಂದೆ ಇರುವ ಜ್ವಲಂತ ಉದಾಹರಣೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಾಧು ಮಹಾರಾಜ್ ಬಹುಬೇಡಿಕೆಯ ಹಾಸ್ಯ ನಟರಾಗಿದ್ದಾರೆ. ತಮಿಳುಚಿತ್ರರಂಗದಲ್ಲಿ ವಡಿವೇಲು ಹೇಗೆ ಸ್ಟಾರ್ ಹಾಸ್ಯ ನಟರಾಗಿ ಮರೆದಿದ್ದಾರೋ ಅದೇ ರೀತಿ ಕನ್ನಡ ಚಿತ್ರರಂಗದ ವಡಿವೇಲು ಸಾಧು ಕೋಕಿಲ ಎಂಬಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ತಂದೆ ಪಿಟೀಲುವಾದಕರು…

1966ರ ಮಾರ್ಚ್ 24ರಂದು ಸಹಾಯ್ ಶೀಲನ್ ಬೆಂಗಳೂರಿನಲ್ಲಿ ನಟೇಶ್ ಹಾಗೂ ಮಂಗಳಾ ದಂಪತಿ ಪುತ್ರನಾಗಿ ಜನಿಸಿದ್ದರು. ತಂದೆ ನಟೇಶ್ ಅವರು ಪೊಲೀಸ್ ಇಲಾಖೆಯ ಮ್ಯೂಸಿಕ್ ಬ್ಯಾಂಡ್ ನಲ್ಲಿ ಪಿಟೀಲುವಾದಕರಾಗಿದ್ದರು. ತಾಯಿ ಮತ್ತು ಸಹೋದರಿಯರು ಹಿನ್ನಲೆ ಗಾಯಕರಾಗಿದ್ದರು. ಬೆಂಗಳೂರಿನ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದಿದ್ದ ಸಾಧು ಕೋಕಿಲ ಪೋಷಕರ ಬಳುವಳಿ ಎಂಬಂತೆ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟರಾಗಿದ್ದ ನರಸಿಂಹರಾಜು ಅವರ ಕಾಲ್ ಶೀಟ್ ಗೆ ಬಹುಬೇಡಿಕೆ ಇದ್ದಿತ್ತು. ಡಾ.ರಾಜ್ ಕುಮಾರ್ ಅವರ ಡೇಟ್ ಗಿಂತಲೂ ಮುನ್ನ ನರಸಿಂಹರಾಜು ಅವರ ದಿನಾಂಕ ಪಡೆದುಕೊಂಡೇ ನಾಯಕ ನಟನ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತಿತ್ತು. ಅದೇ ರೀತಿ 90ರ ದಶಕದಲ್ಲಿ ಸಾಧು ಕೋಕಿಲ ಕೂಡಾ ಅಷ್ಟೇ ಜನಪ್ರಿಯ ಮತ್ತು ಬೇಡಿಕೆಯ ಹಾಸ್ಯ ನಟರಾಗಿ ಬೆಳೆದು ಬಿಟ್ಟಿದ್ದರು.

ಉಪ್ಪಿ ಇಟ್ಟ ಹೆಸರು ಸಾಧು ಕೋಕಿಲ

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಶ್ ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ಸಹಾಯ್ ಶೀಲನ್ ಸಂಗೀತ ನಿರ್ದೇಶಕರಾಗಿ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ಅದಕ್ಕೆ ಕಾರಣಕರ್ತರಾದವರು ವಿ.ಮನೋಹರ್..ಹೌದು ಸಾಧು ಅವರನ್ನು ಉಪ್ಪಿಗೆ ಪರಿಚಯಿಸಿದ್ದೇ ಮನೋಹರ್ ಅವರು. ನಂತರ ಉಪ್ಪಿ ಅವರು ಸಾಧು ಕೋಕಿಲ ಎಂದು ಹೆಸರಿಟ್ಟಿದ್ದರು. 1992ರಲ್ಲಿ ಸಾರಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ನಂತರ 1993ರಲ್ಲಿ ಉಪ್ಪಿಯ ಶ್ ಸಿನಿಮಾದಲ್ಲಿ ಆಕಸ್ಮಿಕ ಎಂಬಂತೆ ಸಾಧು ನಟಿಸಬೇಕೆಂದು ತಳ್ಳಿಬಿಟ್ಟಿದ್ದರಂತೆ…ಅಲ್ಲಿಂದ ಶುರುವಾದ ನಟನೆ ಇಂದಿಗೂ ಸಾಧು ಅವರನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿಬಿಟ್ಟಿದೆ.

ಹೈಸ್ಕೂಲ್ ವಿದ್ಯಾಭ್ಯಾಸದ ವೇಳೆ ಒಂದು ವರ್ಷದ ನಂತರ ಶಿಕ್ಷಣ ಕೈಬಿಟ್ಟ ಸಾಧು ಅವರು ಅರ್ಣವ್ ಮ್ಯೂಸಿಕ್ ಸೆಂಟರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬಿಟ್ಟಿದ್ದರಂತೆ. ಅದಕ್ಕೆ ಕಾರಣ ಬಡತನ..ಬೆಳಗ್ಗೆ ಬಂದು ಅಂಗಡಿ ತೆರೆಯುವುದು, ಗ್ಲಾಸ್ ಒರೆಸುವುದು, ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಸಾಧುಗೆ ಮಧ್ಯಾಹ್ನದ ಊಟಕ್ಕೆ ಕೊಡುತ್ತಿದ್ದ ಹಣ 2 ರೂಪಾಯಿಯಂತೆ. ಅದರಲ್ಲಿ 1.75ಪೈಸೆ ಅನ್ನ ಸಾಂಬಾರ್ ತಿಂದು ದಿನಕಳೆಯುತ್ತಿದ್ದರು. ಹೀಗೆ ಮ್ಯೂಸಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತ, ಮಾಡುತ್ತ ಅಲ್ಲಿದ್ದ ಸಂಗೀತ ಪರಿಕರಗಳನ್ನು ಬಳಸುವುದನ್ನು ಸಾಧು ಕಲಿತುಬಿಟ್ಟಿದ್ದರಂತೆ. ಆವಾಗಲೇ ಸಾಧುಗೆ ತಾನು ನಂಬರ್ ವನ್ ಕೀ ಬೋರ್ಡ್ ಪ್ಲೇಯರ್ ಆಗಬೇಕೆಂಬ ಕನಸು ಮೊಳೆಕೆಯೊಡೆದಿತ್ತು.

ಊಟಕ್ಕಿಲ್ಲದೇ, ಬದುಕಲು ಏನೇನೂ ಇಲ್ಲದ ಸಂದರ್ಭದಲ್ಲಿ ತಂದೆ, ತಾಯಿ ಮದುವೆ ಮನೆಗಳಲ್ಲಿ ಹಾಡುತ್ತಿದ್ದಾಗ..ತಮ್ಮ ಹಾಡು ಮುಗಿದ ಬಳಿಕ ಊಟಕ್ಕೆ ಹೋಗುವಾಗ ಮೊದಲು ತಾಂಬೂಲ ತೆಗೆದುಕೊಳ್ಳುತ್ತಿದ್ದರಂತೆ. ಅದಕ್ಕೆ ಕಾರಣ ಅದರಲ್ಲಿ ಚೀಲ ಇರುತ್ತಿತ್ತಲ್ಲ ಅದಕ್ಕೆ. ತಾಂಬೂಲ ಚೀಲದಲ್ಲಿದ್ದ ತೆಂಗಿನಕಾಯಿ ತೆಗೆದಿಟ್ಟು, ಚೀಲ ತೆಗೆದುಕೊಂಡು ಊಟಕ್ಕೆ ಹೋಗಿ ಅಲ್ಲಿ ಕೊಡುತ್ತಿದ್ದ ಚಿರೊಟ್ಟಿ, ಲಾಡು ಅವೆಲ್ಲವನ್ನೂ ಚೀಲದಲ್ಲಿ ಹಾಕಿಕೊಂಡು ಮನೆಗೆ ಬಂದು ಮಕ್ಕಳಿಗೆ ಕೊಟ್ಟು ಸಾಕುತ್ತಿದ್ದ ಕಷ್ಟದ ದಿನಗಳನ್ನು ಸಾಧು ಇನ್ನೂ ಮರೆತಿಲ್ಲ.

ಕೋಕಿಲ ಅವರ ಅಣ್ಣ ಲಯೇಂದ್ರ ಕೂಡಾ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದಾರೆ. ಸಾಧು ಅವರು 1993ರಲ್ಲಿ ಸಲೀನಾ ಜತೆ ವಿವಾಹವಾಗಿದ್ದು, ದಂಪತಿಗೆ ಸುರಾಗ್ ಹಾಗೂ ಸೃಜನ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ.

ಸಾಧು ಕೋಕಿಲ ಭಾರತದಲ್ಲಿಯೇ ಅತೀ ವೇಗದಲ್ಲಿ ಕೀ ಬೋರ್ಡ್ ಪ್ಲೇ ಮಾಡುವವರಲ್ಲಿ ಒಬ್ಬರಾಗಿದ್ದಾರೆ. ಉಪ್ಪಿ ಅವರ “ಶ್ “ ಸಿನಿಮಾದಲ್ಲಿ ಆರಂಭಿಸಿ ನಂತರ ಹಾಸ್ಯ ನಟರಾಗಿ, ಸಂಗೀತ ನಿರ್ದೇಶಕರಾಗಿ, ರಕ್ತ ಕಣ್ಣೀರು ಸಿನಿಮಾ ನಿರ್ದೇಶಿಸಿದ್ದರು. ನಂತರ ರಾಕ್ಷಸ, ಸುಂಟರಗಾಳಿ, ಅನಾಥರು, ಮಿಸ್ಟರ್ ತೀರ್ಥ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕನ್ನಡ ಚಿತ್ರಪ್ರೇಮಿಗಳಿಗೆ ಹಾಸ್ಯ ರಸದೌತಣ ಉಣಬಡಿಸುವುದರ ಜತೆ, ಜತೆಗೆ ಇಂಪಾದ ಹಾಡು,ಇಂಪಾದ ಸಂಗೀತ ನಿರ್ದೇಶಿಸಿದ ಹೆಗ್ಗಳಿಕೆ ಕೂಡಾ ಸಾಧು ಕೋಕಿಲ ಅವರದ್ದಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಡಿಸೆಂಬರ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ತುದಿಗಾಲಿನಲ್ಲಿ ನಿಂತಿವೆ. ಕನ್ನಡದ ಜೊತೆಗೆ ಪರಭಾಷಾ ಸ್ಟಾರ್‌ ನಟರ ಚಿತ್ರಗಳು ಕೂಡಾ ಬಿಡುಗಡೆಯಾಗಲಿವೆ....

  • ಕಳೆದ ಶುಕ್ರವಾರ (ನ.8) ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ "ಆ ದೃಶ್ಯ' ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಯಶಸ್ವಿ...

  • "ಇಂತಹ ಪಾತ್ರ ಮಾಡೋಕೆ ಧೈರ್ಯ ಬೇಕು, ಸಿದ್ಧತೆ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ಪಾತ್ರದ ಮೇಲೆ ಆ ಕಲಾವಿದರಿಗೆ ಪ್ರೀತಿ ಇರಬೇಕು. ಇವೆಲ್ಲಾ ಇದ್ದರೆ ಮಾತ್ರ ಈ ರೀತಿಯ...

  • ರಮೇಶ್‌ ಅರವಿಂದ್‌ ನಿರ್ದೇಶನದ "100' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯ ಹಾಡಿನ ಚಿತ್ರೀಕರಣದಲ್ಲಿದೆ ಚಿತ್ರತಂಡ....

  • ಅಂಬರೀಶ್‌ ಇಲ್ಲದೇ ಒಂದು ವರ್ಷ ಗತಿಸುತ್ತಿದೆ. ನ.24, 2018 ರಂದು ಅಗಲಿದ್ದರೂ, ಅಂಬರೀಶ್‌ ಅವರಿಲ್ಲ ಎಂಬ ಭಾವ ಯಾರಲ್ಲೂ ಇಲ್ಲ. ಕಾರಣ, ಅವರ ಚಿತ್ರಗಳ ಮೂಲಕ, ಅವರ ಖಡಕ್‌ ಮಾತುಗಳ...

ಹೊಸ ಸೇರ್ಪಡೆ