ಸಾಧು ಹೊಸ ಸಾಹಸ

"ಲೂಪ್‌ ಎಂಟರ್‌ಟೈನ್ಮೆಂಟ್‌ ಸ್ಟುಡಿಯೋ'ಗೆ ಎಸ್ಪಿಬಿ ಚಾಲನೆ

Team Udayavani, Jun 17, 2019, 3:00 AM IST

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಧು ಕೋಕಿಲ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡ ಚಿತ್ರಗಳ ಸಂಪೂರ್ಣ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಅನುಕೂಲವಾಗಲು ಸಾಧು ಕೋಕಿಲ, ಅತ್ಯಾಧುನಿಕ ಮತ್ತು ಸುಸಜ್ಜಿತ ಪೋಸ್ಟ್‌ ಪ್ರೊಡಕ್ಷನ್ಸ್‌ ಸ್ಟುಡಿಯೋವನ್ನು ನಿರ್ಮಿಸಿದ್ದಾರೆ.

“ಲೂಪ್‌ ಎಂಟರ್‌ಟೈನ್ಮೆಂಟ್‌ ಸ್ಟುಡಿಯೋ’ ಹೆಸರಿನ ಈ ಸ್ಟುಡಿಯೋವನ್ನು ಇತ್ತೀಚೆಗೆ ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಎಸ್‌.ಪಿ ಬಾಲಸುಬ್ರಹ್ಮಣ್ಯಂ, “ಸಾಧುಕೋಕಿಲ ಅವರಿಗೆ ಸಂಗೀತದಲ್ಲಿ ವಿಶೇಷ ಪ್ರತಿಭೆ ಇದೆ. ಸಾಕಷ್ಟು ಅನುಭವವಿದೆ. ಅವರು ಸಂಗೀತ ನಿರ್ದೇಶಿಸಿರುವ ಹಲವು ಹಾಡುಗಳನ್ನು ನಾನು ಹಾಡಿದ್ದೇನೆ.

ಅವರು ಸಂಗೀತದಲ್ಲಿಯೇ ಹೆಚ್ಚು ತೊಡಗಿಸಿಕೊಳ್ಳಬೇಕು ಎನ್ನುವುದು ನನ್ನ ವೈಯಕ್ತಿಕ ಆಶಯ ಕೂಡ. ನನ್ನ ದೃಷ್ಟಿಯಲ್ಲಿ ನನಗೆ ಹಾಡಲು ಅವಕಾಶ ನೀಡುವ ಪ್ರತಿ ಸಂಗೀತ ನಿರ್ದೇಶಕರು ಕೂಡ ಗುರುಗಳಂತೆ. ಹಾಗಾಗಿ ಸಾಧು ಕೋಕಿಲ ಕೂಡ ನನ್ನ ಗುರು. ಮ್ಯೂಸಿಕ್‌ ಡೈರೆಕ್ಟರ್‌ಗಳು ನಮಗೆ ಹಾಡುವ ಅವಕಾಶ ನೀಡಿ, ಹೇಗೆ ಹಾಡಬೇಕು ಎಂದೂ ಹೇಳಿ ಕೊಡುತ್ತಾರೆ. ಅವರಿಂದ ಕಲಿಯುವುದು ಸಾಕಷ್ಟಿರುತ್ತದೆ.

ಹಾಗಾಗಿ ನನಗೆ ಅವರೆಲ್ಲ ಗುರುಗಳು’ ಎಂದಿದ್ದಾರೆ ಬಾಲುಸುಬ್ರಹ್ಮಣ್ಯಂ. ಇನ್ನು “ಲೂಪ್‌ ಎಂಟರ್‌ಟೈನ್ಮೆಂಟ್‌ ಸ್ಟುಡಿಯೋ’ ಸಾಧು ಕೋಕಿಲ ಪುತ್ರ ಸುರಾಗ್‌ ಮತ್ತು ಸಂಕಲನಕಾರ ಜೋ.ನಿ ಹರ್ಷ ಮೇಲುಸ್ತುವಾರಿಯಲ್ಲಿ ನಿರ್ಮಾಣವಾಗಿದೆ. ಈ ಸ್ಟುಡಿಯೋದಲ್ಲಿ ಡಬ್ಬಿಂಗ್‌, ರೀ ರೆಕಾರ್ಡಿಂಗ್‌, ಗ್ರಾಫಿಕ್ಸ್‌, ವಿಎಫ್ಎಕ್ಸ್‌, ಎಸ್‌ಎಫ್ಎಕ್ಸ್‌, ಎಡಿಟಿಂಗ್‌, ಕಲರ್‌ ಗ್ರೇಡಿಂಗ್‌, ಡಿಟಿಎಸ್‌ ಮಿಕ್ಸ್‌ ಸೇರಿದಂತೆ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಒಂದೇ ಸೂರಿನಲ್ಲಿ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ