“ಸಲಗ’ ಚಿತ್ರೀಕರಣ ಜೋರು
ಆ್ಯಕ್ಷನ್-ಕಟ್ ಹೇಳುವಲ್ಲಿ "ದುನಿಯಾ' ವಿಜಯ್ ಬ್ಯುಝಿ
Team Udayavani, Jun 17, 2019, 3:00 AM IST
“ದುನಿಯಾ’ ವಿಜಯ್ ಇದೇ ಮೊದಲ ಸಲ ನಿರ್ದೇಶನಕ್ಕಿಳಿದಿರುವುದು ಎಲ್ಲರಿಗೂ ಗೊತ್ತಿದೆ. ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಭರ್ಜರಿಯಾಗಿಯೇ ತಯಾರಿ ಮಾಡಿಕೊಂಡು ಫೀಲ್ಡ್ಗಿಳಿದಿದೆ.
ಮೊದಲ ಬಾರಿಗೆ ನಿರ್ದೇಶಕನ ಪಟ್ಟ ಅಲಂಕರಿಸಿರುವ “ದುನಿಯಾ’ ವಿಜಯ್ ಅವರಿಗೆ ಇದು ದೊಡ್ಡ ಚಾಲೆಂಜ್. ಕಾರಣ, ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ. ಹಾಗಾಗಿ, ಎರಡನ್ನೂ ಸವಾಲಾಗಿಯೇ ಸ್ವೀಕರಿಸಿರುವ “ದುನಿಯಾ’ ವಿಜಯ್, ಒಳ್ಳೆಯ ತಂಡವನ್ನು ಕಟ್ಟಿಕೊಂಡು ಪೂರ್ವ ತಯಾರಿಯೊಂದಿಗೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ಚಿತ್ರೀಕರಣದ ಸೆಟ್ನಿಂದ ಕೆಲ ಫೋಟೋಗಳನ್ನು ಇಲ್ಲಿ ಹಾಕಲಾಗಿದ್ದು, ನಿರ್ದೇಶಕ ಕಮ್ ನಟ “ದುನಿಯಾ’ ವಿಜಯ್ ಅವರು, ಆ್ಯಕ್ಷನ್-ಕಟ್ ಹೇಳುವಲ್ಲಿ ನಿರತರಾಗಿದ್ದಾರೆ. ಇದೊಂದು ಪಕ್ಕಾ ಮಾಸ್ ಚಿತ್ರವಾಗಿದ್ದು, ಚಿತ್ರದ ಕಥಾಹಂದರದ ಜವಾಬ್ದಾರಿಯನ್ನು “ದುನಿಯಾ’ ವಿಜಯ್ ವಹಿಸಿಕೊಂಡಿದ್ದಾರೆ.
ಇನ್ನು, ಕೆ.ಪಿ.ಶ್ರೀಕಾಂತ್ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಶಿವಸೀನ ಛಾಯಾಗ್ರಹಣವಿದೆ. ಚರಣ್ರಾಜ್ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ “ದುನಿಯಾ’ ವಿಜಯ್ ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ.