ಸಂಚಾರಿ ಈಗ ಖಡಕ್ ಪೊಲೀಸ್
ಜಂಟಲ್ಮನ್ ಚಿತ್ರದ ಹೊಸ ಗೆಟಪ್ನಲ್ಲಿ ವಿಜಯ್
Team Udayavani, Jan 4, 2020, 8:01 AM IST
ಸಂಚಾರಿ ವಿಜಯ್ ಯಾವುದೇ ಒಂದು ಪಾತ್ರಕ್ಕೆ ಬ್ರಾಂಡ್ ಆಗಿಲ್ಲ. ತಮಗೆ ಸಿಕ್ಕ ಪಾತ್ರಗಳಲ್ಲಿ ಖುಷಿ ಕಾಣುತ್ತಾ, ಆ ಪಾತ್ರಗಳಿಗೆ ನ್ಯಾಯ ಸಲ್ಲಿಸುತ್ತಾ ಮುಂದೆ ಕೆರಿಯರ್ನಲ್ಲಿ ಮುಂದೆ ಸಾಗುತ್ತಿದ್ದಾರೆ. ಈಗ ಸಂಚಾರಿ ವಿಜಯ್ಗೆ ಮತ್ತೂಂದು ಹೊಸ ಪಾತ್ರ ಸಿಕ್ಕಿದೆ. ಅದು ಪೊಲೀಸ್ ಆಫೀಸರ್. ಹೌದು, ಪ್ರಜ್ವಲ್ ದೇವರಾಜ್ ನಾಯಕರಾಗಿರುವ “ಜಂಟಲ್ಮನ್’ ಚಿತ್ರದಲ್ಲಿ ಸಂಚಾರಿ ವಿಜಯ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಮೂಲಕ ಮತ್ತೂಂದು ಹೊಸ ಪಾತ್ರಕ್ಕೆ ತೆರೆದುಕೊಂಡಿದ್ದಾರೆ. ಸದ್ಯ ಪ್ರಜ್ವಲ್ ದೇವರಾಜ್ ಅವರ “ಜಂಟಲ್ಮನ್’ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಇದ್ದು, ಚಿತ್ರದ ಟ್ರೇಲರ್ ಜನವರಿ 06 ರಂದು ಬಿಡುಗಡೆಯಾಗುತ್ತಿದೆ. ನಟ ಧ್ರುವ ಸರ್ಜಾ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಸ್ಲಿಪಿಂಗ್ ಸಿಂಡ್ರೋಮ್ ಕಾಯಿಲೆ ಇರುವ ಹುಡುಗನೊಬ್ಬನ ಸುತ್ತ ನಡೆಯುವ ಕಥೆ ಇಲ್ಲಿದೆ.
ದಿನದಲ್ಲಿ ಹೆಚ್ಚು ಕಾಲ ನಿದ್ದೆಯಲ್ಲೇ ಕಾಲ ಕಳೆದು, ಉಳಿದ ಬೆರಳೆಣಿಕೆ ಗಂಟೆಯಲ್ಲಿ ಆ ಯುವಕ ಏನೆಲ್ಲಾ ಮಾಡುತ್ತಾನೆ. ಅವನಿಗೆ ಎದುರಾಗುವ ಸಮಸ್ಯೆಗಳು ಎಂಥವು. ಅವುಗಳನ್ನು ಹೇಗೆಲ್ಲಾ ಎದುರಿಸುತ್ತಾನೆ ಅನ್ನೋದು “ಜಂಟಲ್ಮನ್’ ಚಿತ್ರದ ಒನ್ಲೈನ್. ಜಡೇಶ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಗುರುದೇಶಪಾಂಡೆ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ಜನವರಿ 31 ರಂದು ತೆರೆಕಾಣುತ್ತಿದೆ.