ನವೆಂಬರ್‌ವರೆಗೂ ಶಿವಣ್ಣ ನಟನೆಗೆ ಬ್ರೇಕ್‌

ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಈ ನಿರ್ಧಾರ

Team Udayavani, Jun 24, 2019, 3:01 AM IST

ಇದುವರೆಗೂ ಫ‌ುಲ್‌ ಬ್ಯುಝಿಯಲ್ಲಿದ್ದ ನಟ ಶಿವರಾಜಕುಮಾರ್‌ ಅವರು ನವೆಂಬರ್‌ವರೆಗೂ ನಟನೆಗೆ ಸಂಪೂರ್ಣ ಬ್ರೇಕ್‌ ಕೊಡಲಿದ್ದಾರೆ. ಅಷ್ಟೇ ಅಲ್ಲ, ಕೆಲ ತಿಂಗಳು ಕಾಲ ಆ್ಯಕ್ಷನ್‌ನಿಂದಲೂ ದೂರ ಉಳಿಯಲಿದ್ದಾರೆ. ಇಷ್ಟಕ್ಕೂ ಶಿವರಾಜಕುಮಾರ್‌ ಅವರು ಯಾಕೆ ನಟನೆ ಮತ್ತು ಆ್ಯಕ್ಷನ್‌ಗೆ ಬ್ರೇಕ್‌ ಕೊಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಶಸ್ತ್ರಚಿಕಿತ್ಸೆ.

ಹೌದು, ಇತ್ತೀಚೆಗೆ ಅವರು ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ತೆರಳುವುದಾಗಿ ಹೇಳಿದ್ದರು. ಹಾಗಾಗಿ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದ ಬಳಿಕ ನವೆಂಬರ್‌ವರೆಗೂ ವಿಶ್ರಾಂತಿ ಪಡೆಯುವ ಹಿನ್ನೆಲೆಯಲ್ಲಿ ಅವರು ನಟನೆ ಮತ್ತು ಆ್ಯಕ್ಷನ್‌ಗೆ ಬ್ರೇಕ್‌ ಕೊಡಲು ನಿರ್ಧರಿಸಿದ್ದಾರೆ. ಹೀಗಂತ ಸ್ವತಃ ಶಿವರಾಜಕುಮಾರ್‌ ಅವರೇ ಸ್ಪಷ್ಟಪಡಿಸಿದ್ದಾರೆ.

“ಉದಯವಾಣಿ’ ಜೊತೆ ಮಾತನಾಡಿದ ಅವರು, “ಜುಲೈ ಮೊದಲ ವಾರದಲ್ಲಿ ನಾನು ಲಂಡನ್‌ಗೆ ಹೋಗುತ್ತಿದ್ದೇನೆ. ಕಾರಣ, ಶಸ್ತ್ರಚಿಕಿತ್ಸೆಗಾಗಿ. ಎಲ್ಲರಿಗೂ ಶಸ್ತ್ರಚಿಕಿತ್ಸೆ ಅಂದಾಕ್ಷಣ ಒಂದು ಪ್ರಶ್ನೆ ಮೂಡಬಹುದು. ಗಾಬರಿಯೂ ಆಗಬಹುದು. ಆದರೆ, ಅಂಥದ್ಧೇನೂ ಇಲ್ಲ. ಈ ಹಿಂದೆ ನಾನು ಲಂಡನ್‌ಗೆ ಹೋಗಿದ್ದೆ. ಅಲ್ಲಿ ಒಂದು ಮುಂಜಾನೆ ವಾಕಿಂಗ್‌ ಮಾಡುವ ಸಂದರ್ಭದಲ್ಲಿ ಜಾರಿ ಬಿದ್ದಿದ್ದೆ.

ಆಗ ಕೈಗೆ ಪೆಟ್ಟು ಬಿದ್ದಿತ್ತು. ಸ್ವಲ್ಪ ನೋವು ಇದ್ದುದರಿಂದ ಟ್ಯಾಬ್‌ಲೆಟ್‌ ತೆಗೆದುಕೊಂಡು ಸುಮ್ಮನಾಗಿದ್ದೆ. ಆದರೆ, ಅದೇಕೋ ಹೆಚ್ಚು ನೋವಾಗಿದ್ದರಿಂದ ಈಗ ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದೇನೆ. ಚಿಕಿತ್ಸೆ ಬಳಿಕ ಸದ್ಯ ಕೆಲ ತಿಂಗಳು ನಟನೆಗೆ ಬ್ರೇಕ್‌ ಕೊಡುತ್ತೇನೆ. ಈಗ “ಭಜರಂಗಿ-2′ ಚಿತ್ರ ಶುರುವಾಗಿದೆ. ಹದಿನೈದು ದಿನಗಳ ಕಾಲ ನಟಿಸುತ್ತೇನೆ. ಶಸ್ತ್ರಚಿಕಿತ್ಸೆ ಬಳಿಕ ಬ್ರೇಕ್‌ ಪಡೆಯುತ್ತೇನೆ ‘ ಎಂದಷ್ಟೇ ಹೇಳಿದ್ದಾರೆ ಶಿವಣ್ಣ.

ಇನ್ನು, ಅವರ ಅಭಿನಯದ “ರುಸ್ತುಂ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. “ರುಸ್ತುಂ’ ಕುರಿತು ಹೇಳುವ ಅವರು, ಹಿಂದೆ “ಟಗರು’ ಚಿತ್ರದಲ್ಲೂ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದೆ. ಅದು ಸೂರಿ ಸಿನಿಮಾ ಆಗಿದ್ದರಿಂದ ಅಲ್ಲಿ ಅಂಡರ್‌ಪ್ಲೇ ಇತ್ತು. ಅದೊಂದು ಪಕ್ಕಾ ಆಟಿಟ್ಯೂಡ್‌ ಅಧಿಕಾರಿಯಾಗಿರುವ ಸಿನಿಮಾ ಆಗಿತ್ತು. ಇಲ್ಲೂ ಅಂಥದ್ದೇ ಪಾತ್ರವಿದೆ.

ಯಾರಿಗಾದರೂ ಹೊಡೀತಿನಿ ಅಂದರೆ ಹೊಡೆಯೋದು ಪಕ್ಕಾ . ಒಂದು ರೀತಿಯ ಹೈ ವೋಲ್ಟೆಜ್‌ ಇರುವಂತಹ ಆ್ಯಂಗ್ರಿ ಪೊಲೀಸ್‌ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ರವಿವರ್ಮ ಪಕ್ಕಾ ಕಮರ್ಷಿಲಯ್‌ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ವಿಭಿನ್ನ ಎನ್ನುವುದಕ್ಕಿಂತ ಮೇಕಿಂಗ್‌ನಲ್ಲಿ ಹೊಸತನ ಕೊಡಲು ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಅವರು.

ವೆಬ್‌ಸೀರಿಸ್‌ನಲ್ಲಿ ನಟನೆ: ಶಿವರಾಜಕುಮಾರ್‌ ಅವರ ಪುತ್ರಿ ನಿರ್ಮಾಪಕಿಯಾಗಿರುವುದು ಗೊತ್ತಿರುವ ವಿಷಯ. ಅವರು ಈಗಾಗಲೇ ವೆಬ್‌ಸೀರಿಸ್‌ ಮಾಡಿದ್ದಾರೆ. ಮುಂದಿನ ವರ್ಷ ಹೊಸದೊಂದು ವೆಬ್‌ಸೀರಿಸ್‌ ಮಾಡಲು ತಯಾರಿ ನಡೆಯುತ್ತಿದೆ. ಶಿವರಾಜಕುಮಾರ್‌ ಆ ವೆಬ್‌ಸೀರಿಸ್‌ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಕಥೆ ಆಗಬೇಕು, ನಿರ್ದೇಶಕರು ಯಾರೆಂಬುದು ಪಕ್ಕಾ ಆಗಬೇಕು. ಶೀರ್ಷಿಕೆ ಕೂಡ ಗೊತ್ತಿಲ್ಲ. ಆದರೆ, ಶಿವಣ್ಣ ಅವರಿಗೆ ವೆಬ್‌ಸೀರಿಸ್‌ಗೆ “ಓಂಕಾರ್‌’ ಎಂಬ ಶೀರ್ಷಿಕೆ ಇಡುವ ಆಸೆ ಇದೆ. ಆದರೆ, ಅದೂ ಪಕ್ಕಾ ಆಗಿಲ್ಲ. ಅವರದೇ ಪ್ರೊಡಕ್ಷನ್‌ನಲ್ಲಿ ನಟಿಸುವುದನ್ನು ಸ್ಪಷ್ಟಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ