ಚಾರುಮತಿ ಹಿಂದೆ ನಿಂತವರು!

ನಾಯಕಿ ಪ್ರಧಾನ ಚಿತ್ರಕ್ಕೆ ಇಬ್ಬರು ನಿರ್ದೇಶಕಿಯರು

Team Udayavani, May 16, 2019, 3:00 AM IST

ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳಿಗೇನೂ ಬರವಿಲ್ಲ. ಹಾಗೆಯೇ ಮಹಿಳಾ ನಿರ್ದೇಶಕಿಯರೂ ಇಲ್ಲಿದ್ದಾರೆ. ಈಗ ಹೊಸ ಸುದ್ದಿಯೆಂದರೆ, “ಚಾರುಮತಿ’ ಎಂಬ ಮಹಿಳಾ ಪ್ರಧಾನ ಚಿತ್ರದ ಮೂಲಕ ಇಬ್ಬರು ನಿರ್ದೇಶಕಿಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಸಾಯಿ ರಶ್ಮಿ ಮತ್ತು ಸಾಯಿ ಪೂರ್ಣ ನಿರ್ದೇಶಕರಾಗಿ ಎಂಟ್ರಿಯಾಗಿದ್ದಾರೆ. ಇದು ಇವರ ಮೊದಲ ಚಿತ್ರ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯವನ್ನೂ ಜೊತೆಗೂಡಿ ರಚನೆ ಮಾಡಿದ್ದಾರೆ. ಅಂದಹಾಗೆ, “ಚಾರುಮತಿ’ ಒಂದು ಹಾರರ್‌ ಕಥಾಹಂದರ ಹೊಂದಿರುವ ಚಿತ್ರ. ನಿರ್ದೇಶಕರಾದ ಸಾಯಿ ರಶ್ಮಿ ಹಾಗು ಸಾಯಿ ಪೂರ್ಣ ಅವರಿಗೆ ಸಿನಿಮಾ ರಂಗ ಹೊಸದಲ್ಲಿ ಹಲವು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿ, ಒಂದಷ್ಟು ಅನುಭವ ಪಡೆದುಕೊಂಡವರು. ಸಿನಿಮಾದಲ್ಲಿರುವ ಹಲವು ವಿಭಾಗಗಳ ಬಗ್ಗೆ ಸಂಪೂರ್ಣ ತಿಳಿದುಕೊಂಡೇ ನಿರ್ದೇಶನಕ್ಕೆ ಇಳಿದಿದ್ದಾರೆ.

ಕಥೆಯ ಬಗ್ಗೆ ಹೇಳುವುದಾದರೆ, ಎರಡು ದಶಕದ ಹಿಂದಿನ ಜೋಡಿ ಕೊಲೆ ಹಾಗು ಈಗಿನ ಕಾಲಘಟ್ಟದ ಘಟನೆ ಚಿತ್ರದ ಹೈಲೈಟ್‌. ಇಲ್ಲೊಂದು ಲವ್‌ಸ್ಟೋರಿಯೂ ಉಂಟು. ಒಂದೇ ಹಂತದಲ್ಲಿ ಕಾರ್ಕಳ, ದಾವಣಗೆರೆ ಮತ್ತು ಬೆಂಗಳೂರು ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚಿಸಿದೆ. ಇನ್ನು, ಕಿರುತೆರೆಯ ಕಿರಣ್‌ಕುಮಾರ್‌ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅವರಿಲ್ಲಿ ಒಬ್ಬ ಉದ್ಯಮಿ ಪಾತ್ರ ಮಾಡಿದರೆ, ಮನೆ ಕೆಲಸದವನಾಗಿ ಪ್ರದೀಪ್‌ ಗೌಡ ಇದ್ದಾರೆ. ಇವರಿಗೆ ಮಾಡೆಲ್‌ ಅಶ್ವಿ‌ನಿ, ನಂದಿತ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀವಿಷ್ಣು, ಚೇತನ್‌ರೈ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ “ಚಾರುಮತಿ’ ಪಾತ್ರ ನಿರ್ವಹಿಸುತ್ತಿರುವ ನಟಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದ್ದು, ಇಷ್ಟರಲ್ಲೇ ವಿವರ ಕೊಡುವುದಾಗಿ ಚಿತ್ರತಂಡ ಹೇಳಿದೆ. ಚಿತ್ರಕ್ಕೆ ಶಿವಸತ್ಯ ಸಂಗೀತವಿದೆ.

ಅವರಿಲ್ಲಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜಿಸುತ್ತಿದ್ದಾರೆ. ಶೇಖರ್‌ ಛಾಯಾಗ್ರಹಣವಿದೆ. ಮುತ್ತುರಾಜ್‌ ಸಂಕಲನ ಮಾಡುತ್ತಿದ್ದಾರೆ. ಇತ್ತೀಚೆಗೆ “ಚಾರುಮತಿ’ ಚಿತ್ರದ ಮುಹೂರ್ತ ನೆರವೇರಿದೆ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೆಗೌಡ ಕ್ಲಾಪ್‌ ಮಾಡಿ ಶುಭಹಾರೈಸಿದ್ದಾರೆ. ನಿರ್ದೇಶಕ ಸಾಯಿ ಪ್ರಕಾಶ್‌ ಕೂಡ ದೀಪ ಬೆಳಗಿಸಿ ತಂಡಕ್ಕೆ ಶುಭಕೋರಿದ್ದಾರೆ. ಈ ವೇಳೆ ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್‌, ಗಿರಿಜಾಲೋಕೇಶ್‌ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ