ಮನೆ ನಂ.67ರಲ್ಲಿ ಸುಮಿತ್ರಾ
Team Udayavani, Aug 29, 2018, 11:45 AM IST
“ಡೈರೆಕ್ಟರ್ ಸ್ಪೆಷಲ್’ ಸಿನಿಮಾದಲ್ಲಿ ಧನಂಜಯ್, ತಂಗಿಯಾಗಿ ಒಬ್ಬರು ನಟಿಸಿದ್ದರು. ಆ ಪಾತ್ರದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಹಾಗೆ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡ ಆ ನಟಿ ಸುಮಿತ್ರಾ. “ಡೈರೆಕ್ಟರ್ ಸ್ಪೆಷಲ್’ ಚಿತ್ರದ ನಂತರ ಸುಮಿತ್ರಾ ಹೆಚ್ಚು ಎಲ್ಲೂ ಸುದ್ದಿಯಾಗಿರಲಿಲ್ಲ ಮತ್ತು ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಸುಮಿತ್ರಾ ಸದ್ದಿಲ್ಲದೇ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.
ಅದು “ಮನೆ ನಂ.67′. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಹಾರರ್-ಥ್ರಿಲ್ಲರ್ ಜಾನರ್ನ ಈ ಚಿತ್ರದಲ್ಲಿ ಕಾಮಿಡಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಜೈ ಕುಮಾರ್ ಈ ಚಿತ್ರದ ನಿರ್ದೇಶನದ ಈ ಚಿತ್ರವನ್ನು ಗಣೇಶ್ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಚಿತ್ರದಲ್ಲಿ ಸತ್ಯಜಿತ್ ನಾಯಕರಾಗಿ ನಟಿಸಿದ್ದಾರೆ.
ಉಳಿದಂತೆ ವಸಂತಿ, ಸ್ವಪ್ನ, ಗಾಯತ್ರಿ, ಸುಮಿತ್ರ, ದೊಂಬರ ಕೃಷ್ಣ, ಸುರೇಶ್, ಉಮಾಶಂಕರ್, ಜ್ಯೋತಿ, ಅನುಪಮ ಮುಂತಾದವರಿದ್ದಾರೆ. ಚಿತ್ರಕ್ಕೆ ಸುದೀಪ್ ಛಾಯಾಗ್ರಹಣ,ಹರ್ಷ ಸಂಗೀತ, ಸತೀಶ್ ಸಂಕಲನ, ಗೌರೀಶ್ ನೃತ್ಯ ನಿರ್ದೇಶನ ಹಾಗೂ ಸುರೆಶ್ ಸಹ ನಿರ್ದೇಶನ ಈ ಚಿತ್ರಕ್ಕಿದೆ. ತೇಜು ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೃಷ್ಣದಾಸ್ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಆನೇಕಲ್ನಲ್ಲಿ 25ದಿನಗಳ ಚಿತ್ರೀಕರಣ ನಡೆದಿದೆ.