ತಿಂಗಳಾಂತ್ಯಕ್ಕೆ ಸುಂದರಿ ಆಗಮನ

ಮೇ 31 ರಿಲೀಸ್‌

Team Udayavani, May 15, 2019, 3:00 AM IST

ಸುದೀರ್ಘ‌ ಸಮಯದ ಬಳಿಕ ಬಹುಭಾಷಾ ತಾರೆ ಜಯಪ್ರದಾ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದೂ “ಸುವರ್ಣ ಸುಂದರಿ’ ಗೆಟಪ್‌ನಲ್ಲಿ. ಹೌದು, ಜಯಪ್ರದಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಸುವರ್ಣ ಸುಂದರಿ’ ಚಿತ್ರ ಅಂತೂ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. “ಸುವರ್ಣ ಸುಂದರಿ’ಯನ್ನು ಇದೇ ಮೇ 31ರಂದು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಸದ್ಯ ಚಿತ್ರದ ಪ್ರಮೋಷನ್‌ ಕೆಲಸಗಳಲ್ಲಿ ಬಿಝಿಯಾಗಿದೆ.

ಸುಮಾರು ಎರಡು ವರ್ಷಗಳಿಂದ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ “ಸುವರ್ಣ ಸುಂದರಿ’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ, ಚಿತ್ರದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಮೂರು ಜನ್ಮಗಳ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾನಕವನ್ನು ಹೊಂದಿರುವ “ಸುವರ್ಣ ಸುಂದರಿ’ ಚಿತ್ರದಲ್ಲಿ ಜಯಪ್ರದಾ ಅವರೊಂದಿಗೆ, ಪೂರ್ಣ, ಸಾಕ್ಷಿ, ಇಂದ್ರ, ರಾಮ್‌, ಮುದ್ದು ಕುಮಾರಿ, ಸಾಯಿಕುಮಾರ್‌, ತಿಲಕ್‌, ಅವಿನಾಶ್‌, ಜೈ ಜಗದೀಶ್‌, ಸತ್ಯ ಪ್ರಕಾಶ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಮೂಡಿ ಬರುತ್ತಿರುವ ಈ ಚಿತ್ರವನ್ನು “ಎಸ್‌.ಟೀಂ ಪಿಕ್ಚರ್ಸ್‌’ ಬ್ಯಾನರ್‌ನಲ್ಲಿ ಎಂ. ಎಲ್‌ ಲಕ್ಷ್ಮೀ ನಿರ್ಮಿಸಿದ್ದಾರೆ. ಎಂ.ಎಸ್‌.ಎನ್‌ ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಎಂ.ಎಸ್‌.ಎನ್‌ ಸೂರ್ಯ, “”ಸುವರ್ಣ ಸುಂದರಿ’ ಚಿತ್ರದಲ್ಲಿ ಇಎಫ್ಎಕ್ಸ್‌ ಗಾಗಿ ಒಂದು ವರ್ಷದವರೆಗೂ ಕೆಲಸ ನಡೆಯಿತು.

ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಚಿತ್ರದ ದೃಶ್ಯಗಳು ಅದ್ಭುತವಾಗಿ ಬಂದಿದೆ. ಚಿತ್ರದ ಕಾನ್ಸೆಪ್ಟ್, ನಿರೂಪಣೆ ಎಲ್ಲವೂ ಕುತೂಹಲಭರಿತವಾಗಿರುವುದರಿಂದ “ಸುವರ್ಣ ಸುಂದರಿ’ ಪ್ರೇಕ್ಷಕರನ್ನು ಆರ್ಕಸುವುದ ಜೊತೆಗೆ ಕಮರ್ಶಿಯಲ್‌ ಆಗಿಯೂ ಗೆಲ್ಲಲಿದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ. ಈಗಾಗಲೇ ಬಿಡುಗಡೆಯಾಗಿರುವ “ಸುವರ್ಣ ಸುಂದರಿ’ಯ ಟ್ರೇಲರ್, ಆಡಿಯೋಗೆ ಚಿತ್ರರಂಗ ಮತ್ತು ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗುವುದು ಎಂಬ ವಿಶ್ವಾಸದಲ್ಲಿದೆ.

“ಸುವರ್ಣ ಸುಂದರಿ’ಯ ಹಾಡುಗಳಿಗೆ ಸಾಯಿ ಕಾರ್ತಿಕ್‌ ಸಂಗೀತ ಸಂಯೋಜನೆಯಿದ್ದು, ಯುವ ಮಹಂತಿ ಛಾಯಾಗ್ರಹಣ, ಪ್ರವೀಣ್‌ ಪುಡಿ ಸಂಕಲನ ಕಾರ್ಯವಿದೆ. ಒಟ್ಟಾರೆ ಸಾಕಷ್ಟು ಅದ್ಧೂರಿಯಾಗಿ ಮೂಡಿಬರುತ್ತಿರುವ “ಸುವರ್ಣ ಸುಂದರಿ’ ತೆರೆಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನಗೆಲ್ಲಲಿದ್ದಾಳೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ