ಟೀಸರ್‌ ಟು ರಿಂಗ್‌ಟೋನ್‌

ಪ್ರಜ್ವಲ್‍ಗೆ ಖುಷಿಕೊಟ್ಟ ವಿಕ್ರಮ್‌

Team Udayavani, Jul 9, 2019, 3:02 AM IST

ಪ್ರಜ್ವಲ್‌ ದೇವರಾಜ್‌ ಅವರ ಹುಟ್ಟುಹಬ್ಬಕ್ಕೆ ಈ ಬಾರಿ ಅವರು ನಟಿಸುತ್ತಿರುವ ಹೊಸ ಚಿತ್ರಗಳ ಟೀಸರ್‌,ಫ‌ಸ್ಟ್‌ಲುಕ್‌ ಬಿಡುಗಡೆಯಾಗಿರುವುದು ನಿಮಗೆ ಗೊತ್ತೇ ಇದೆ. “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ಮ್ಯಾನ್‌’, “ಅರ್ಜುನ್‌ ಗೌಡ’ ಚಿತ್ರಗಳು ಟೀಸರ್‌, ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದ್ದವು. ಎಲ್ಲವೂ ಗಮನಸೆಳೆಯುವ ಮೂಲಕ ಪ್ರಜ್ವಲ್‌ ಮುಖದಲ್ಲಿ ನಗುಮೂಡಿಸಿದ್ದು ಸುಳ್ಳಲ್ಲ.

ಅದರಲ್ಲೂ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದ ಟೀಸರ್‌ ಬಿಡುಗಡೆ ನಂತರದ ಬೆಳವಣಿಗೆ ಪ್ರಜ್ವಲ್ ಹಾಗೂ ತಂಡಕ್ಕೆ ಇನ್ನಷ್ಟು ಖುಷಿ ಕೊಟ್ಟಿದೆ. ಅದು ಟೀಸರ್‌ನಲ್ಲಿದ್ದ ಮ್ಯೂಸಿಕ್‌ ಬಿಟ್‌ ರಿಂಗ್‌ಟೋನ್‌ ಆಗುತ್ತಿರುವುದು. ಸಾಮಾನ್ಯವಾಗಿ ಟೀಸರ್‌ನಲ್ಲಿರುವ ಮ್ಯೂಸಿಕ್‌ ರಿಂಗ್‌ ಟೋನ್‌ ಆಗೋದು ಕಡಿಮೆ. ಆದರೆ, “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದ ಟೀಸರ್‌ ಬಿಟ್‌ ರಿಂಗ್‌ಟೋನ್‌ ಆಗಿ ಹೊರಬರಲಿದೆ.

ಟೀಸರ್‌ನಲ್ಲಿರುವ ವಯೊಲಿನ್‌ ಬಿಟ್‌ ಮ್ಯೂಸಿಕ್‌ ಅನ್ನು ರಿಂಗ್‌ಟೋನ್‌ ರೂಪದಲ್ಲಿ ರಿಲೀಸ್‌ ಮಾಡಲು ಸಿದ್ಧವಾಗಿದೆ ಆನಂದ್‌ ಆಡಿಯೋ. ಟೀಸರ್‌ ರಿಲೀಸ್‌ ಆದ ಬಳಿಕ ವಯೊಲಿನ್‌ ಮ್ಯೂಸಿಕ್‌ ಬಿಟ್‌ಗೆ ಸಖತ್‌ ರೆಸ್ಪಾನ್ಸ್‌ ಬಂದ ಹಿನ್ನೆಲೆಯಲ್ಲಿ ಅನೂಪ್‌ ಹಾಗೂ ಚಿತ್ರತಂಡದ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದೆ ಆನಂದ್‌ ಆಡಿಯೋ.

ಈ ಮೂಲಕ ಸಂಗೀತ ನಿರ್ದೇಶಕ ಅನೂಪ್‌ ಸೀಳೀನ್‌ ಕೂಡಾ ಖುಷಿಯಾಗಿದ್ದಾರೆ. ಟೀಸರ್‌ವೊಂದರ ಮ್ಯೂಸಿಕ್‌ ಬಿಟ್‌ ಇದೇ ಮೊದಲ ಬಾರಿ ರಿಂಗ್‌ಟೋನ್‌ ರೂಪದಲ್ಲಿ ಹೊರಬರುತ್ತಿದೆ ಎಂಬ ಖುಷಿ ಅವರಿಗಿದೆ. ಈ ಬಗ್ಗೆ ಮಾತನಾಡುವ ಅನೂಪ್‌, “ಟೀಸರ್‌ ಮ್ಯೂಸಿಕ್‌ ಮಾತ್ರ ರಿಂಗ್‌ಟೋನ್‌ ಆದ ಉದಾಹರಣೆ ಇದ್ದಂತಿಲ್ಲ.

ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ಮೇಲೆ ಹಿನ್ನೆಲೆ ಸಂಗೀತವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಆದರೆ, ಈ ಟೀಸರ್‌ನ ವಯೊಲಿನ್‌ ಬಿಟ್‌ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಅನೂಪ್‌.

ಇತ್ತೀಚೆಗೆ ಅನೂಪ್‌ ಸೀಳೀನ್‌ ಕಮರ್ಷಿಯಲ್‌ ಸಿನಿಮಾಗಳ ಮೂಲಕವೂ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್‌ ಅವರ “ರುಸ್ತುಂ’ ಚಿತ್ರಕ್ಕೆ ಅನೂಪ್‌ ಸಂಗೀತ ನೀಡಿದ್ದು, ಹಾಡು ಹಾಗೂ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ