ಫಿಕ್ಸ್‌ ಸಂಭಾವನೆಗೆ ಅಂಟಿಕೊಂಡಿಲ್ಲ, ಕಥೆಯಷ್ಟೇ ಮುಖ್ಯ

ಸುದೀಪ್‌ಗೆ ಸಲ್ಲು ಡ್ರೆಸ್‌ ಗಿಫ್ಟ್: ಕಿಚ್ಚನ ಬಿಚ್ಚು ಮಾತು

Team Udayavani, Jul 7, 2019, 3:04 AM IST

ಸುದೀಪ್‌ ಹೆಚ್ಚು ಮಾತಿಗೆ ಸಿಗಲ್ಲ. ಅವರೇನಿದ್ದರೂ, ಮುಖ್ಯವಾದ ವಿಷಯವಿದ್ದರೆ ಮಾತ್ರ, ಒಂದು ಟ್ವೀಟ್‌ ಮಾಡಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಸಾಮಾಜಿಕ ತಾಣದಲ್ಲಿ ಸದಾ ಆ್ಯಕ್ಟೀವ್‌ ಆಗಿರುವ ಸುದೀಪ್‌,”ಪೈಲ್ವಾನ್‌’, “ದಬಾಂಗ್‌’ ಹಾಗೂ ಮಲ್ಟಿಸ್ಟಾರ್‌ ಸಿನಿಮಾ ಸೇರಿದಂತೆ ಇತ್ಯಾದಿ ವಿಷಯವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಅದು ಅವರದೇ ಮಾತುಗಳಲ್ಲಿ

ಸುದೀಪ್‌ ತುಂಬಾ ಸಂಭಾವನೆ, ಅವರು ದುಬಾರಿ ಅಂತಾರೆ? ಎಂಬ ಮಾತಿದೆ. ನಿಜ ಹೇಳ್ತೀನಿ. ನಾನು ಇಲ್ಲಿಯವರೆಗೆ, ಯಾವ ನಿರ್ಮಾಪಕರ ಬಳಿ ಅಡ್ವಾನ್ಸ್‌ ಪಡೆದಿಲ್ಲ. ಈವರೆಗೆ ನಾನು ನನ್ನ ಸಿನಿಮಾಗೆ ಇಂತಿಷ್ಟು ಸಂಭಾವನೆ ಅಂತ ಫಿಕ್ಸ್‌ ಮಾಡಿಲ್ಲ. ಸಿನಿಮಾ ಕಥೆ ಕೇಳಿ, ಇಷ್ಟವಾದರೆ, ನಿರ್ಮಾಣ ವಿಷಯದಲ್ಲಿ ಚರ್ಚಿಸಿ, ಟೀಮ್‌ ಹೇಗಿದೆ ಅಂತ ತಿಳಿದು, ಈ ಚಿತ್ರ ವರ್ಕೌಟ್‌ ಆಗುತ್ತಾ ಇಲ್ಲವಾ ಎಂದು ಯೋಚಿಸಿದ ಬಳಿಕ ಸಂಭಾವನೆ ಹೇಳ್ತೀನಿ. ಆದರೆ, ಈವರೆಗೆ ಫಿಕ್ಸ್‌ ಸಂಭಾವನೆ ಮಾಡಿಲ್ಲ. ಎಷ್ಟೋ ಚಿತ್ರಗಳಿಗೆ ಸಂಭಾವನೆ ಇಲ್ಲದೆ ಕೆಲಸ ಮಾಡಿದ್ದು ಇದೆ. ದೊಡ್ಡ ಪೇಮೆಂಟ್‌ ತಗೊಂಡಿರೋದು ಇದೆ. 25 ವರ್ಷದ ಹಿಂದೆ ಸಂಭಾವನೆ ಇಲ್ಲದೆ ಕೆಲಸ ಮಾಡಿದ್ದೇನೆ. ಈ ಜಾಗಕ್ಕೆ ಬರಲು ಶ್ರಮವಿದೆ. ಚಿಕ್ಕ ಸಸಿ ಈಗ ಫ‌ಲ ಕೊಡ್ತಾ ಇದೆ.

ರಾಜನಂತೆ ನೋಡಿಕೊಂಡರು: “ದಬಾಂಗ್‌’ ಚಿತ್ರದ ಅನುಭವ ಅನನ್ಯ. ಆ ಚಿತ್ರದಲ್ಲಿ ಸಲ್ಮಾನ್‌ಖಾನ್‌ ಜೊತೆಗಿನ ಕೆಮಿಸ್ಟ್ರಿ ಮ್ಯಾಚ್‌ ಆಯ್ತು. ನನ್ನ ಹಾಗು ಸಲ್ಮಾನ್‌ಖಾನ್‌ ಅವರ ಮ್ಯಾನರಿಸಂ ಸೇಮ್‌ ಆಗಿದೆ. ಸಲ್ಮಾನ್‌ಖಾನ್‌ ಅವರಿಗೆ ಯಾರೇ ಆಗಲಿ, ಇಷ್ಟವಾಗಿಬಿಟ್ಟರೆ, ಅವರನ್ನು ಯಾವ ಮಟ್ಟಕ್ಕೆ ಬೇಕಾದರೂ ಬೆಳೆಸುವ ಗುಣವಿದೆ. ಅದನ್ನು ಹತ್ತಿರದಿಂದ ನೋಡಿದ್ದೇನೆ. ಇಷ್ಟವಾಗದಿದ್ದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮಿಬ್ಬರ ವಿಚಾರದಲ್ಲಿ ಒಂದೇ ರೀತಿಯ ಗುಣದ ಹೋಲಿಕೆ ಇದ್ದುದರಿಂದ ಇಬ್ಬರು ಕೆಲಸದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. “ದಬಾಂಗ್‌’ ಒಂದು ಹಂತದ ಶೂಟಿಂಗ್‌ ಮುಗಿದಿದೆ. ಇನ್ನು ಒಂದು ವಾರದ ಕೆಲಸ ಬಾಕಿ ಇದೆ.

ಸಲ್ಮಾನ್‌ ಖಾನ್‌ ಜೊತೆಗೆ ಬ್ಯೂಟಿಫ‌ುಲ್‌ ಜರ್ನಿ ಮಾಡಿದ್ದು ಮರೆಯದ ಅನುಭವ. ಸಲ್ಮಾನ್‌ಖಾನ್‌ ನನಗೆ ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ. ನನಗೆ ಫಿಟ್‌ ಎನಿಸುವ ಹತ್ತು ಡ್ರೆಸ್‌ ಪ್ರೀತಿಯಿಂದ ಕೊಟ್ಟಿದ್ದಾರೆ. ಅಂತಹ ದೊಡ್ಡ ನಟ ಕೊಟ್ಟಾಗ, ಬೇಡ ಎನ್ನಲು ಆಗುವುದಿಲ್ಲ. “ಪೈಲ್ವಾನ್‌’ ಚಿತ್ರಕ್ಕೆ ಸಲ್ಮಾನ್‌ಖಾನ್‌ ಟ್ವೀಟ್‌ ಮಾಡಿದ್ದರು. ನನಗೆ ಅದು ಅವರು ಟ್ವೀಟ್‌ ಮಾಡಿದಾಗಲೇ ಗೊತ್ತಾಗಿದ್ದು. ನಾನು ಸೊಹೈಲ್‌ ಖಾನ್‌ ಜೊತೆ ಚೆನ್ನಾಗಿದ್ದೆ. ಅವರಿಗೊಮ್ಮೆ ಟ್ವೀಟ್‌ ಮಾಡಿದ್ದೆ. ಅದನ್ನು ಅವರು ಸಲ್ಮಾನ್‌ಖಾನ್‌ ಗಮನಕ್ಕೆ ತಂದಿದ್ದರು. “ಪೈಲ್ವಾನ್‌’ ಪೋಸ್ಟರ್‌ ಮೆಚ್ಚಿಕೊಂಡು ಸಲ್ಮಾನ್‌ ಅವರೇ ಟ್ವೀಟ್‌ ಮಾಡಿ ಶುಭಹಾರೈಸಿದ್ದರು.

ನಾನು ಯಾವುದೇ ರೀತಿ ರಿಕ್ವೆಸ್ಟ್‌ ಮಾಡಿದ್ದಲ್ಲ. ನನ್ನ ಸಿನಿಮಾ ಕೆರಿಯರ್‌ನಲ್ಲಿ “ದಬಾಂಗ್‌’ ಬ್ಯೂಟಿಫ‌ುಲ್‌ ಅನುಭವ. ಒಬ್ಬ ನಟನ ಕೆರಿಯರ್‌ನಲ್ಲಿ ಇಂತಹ ಅಪರೂಪದ ಅವಕಾಶ ಸಿಗುವುದು ವಿರಳ. ನಾನು ಅದೃಷ್ಟವಂತ. “ದಬಾಂಗ್‌’ ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ನನ್ನನ್ನು ಒಂದು ರೀತಿ ರಾಜನಂತೆ ನೋಡಿಕೊಂಡರು. ಪ್ರಭುದೇವ ಜೊತೆ ಒಳ್ಳೆಯ ಅನುಭವ ಆಯ್ತು. “ದಬಾಂಗ್‌’ ಮಿಕ್ಸರ್‌ ಸಿನಿಮಾ. ಸೌತ್‌ ಮತ್ತು ನಾರ್ತ್‌ ತಂತ್ರಜ್ಞರು ಸೇರಿ ಮಾಡಿದ ಚಿತ್ರ. ಹಾಗಾಗಿ, ಎರಡು ರುಚಿಯನ್ನು ಕಾಣಬಹುದು.

ಬರಹಗಾರರ ಕೊರತೆ ಇಲ್ಲ: ಕನ್ನಡದಲ್ಲಿ ಬರಹಗಾರರ ಕೊರತೆ ಇಲ್ಲ. ಬೇರೆ ಭಾಷೆಗೆ ಹೋಲಿಸಿದರೆ, ಕನ್ನಡದಲ್ಲೇ ಗೆಲುವಿನ ಸಂಖ್ಯೆ ಜಾಸ್ತಿ. ಕೆಲವೊಂದು ಟೈಮ್‌ನಲ್ಲಿ ಏನೂ ಮಾಡೋಕ್ಕಾಗಲ್ಲ. ಸೂಪರ್‌ ಹಿಟ್‌ ಸಿನಿಮಾ ಕೊಟ್ಟವರು ಅಟ್ಟರ್‌ ಫ್ಲಾಪ್‌ ಸಿನಿಮಾ ಕೊಟ್ಟಿದ್ದಾರೆ. ಹಾಗಂತ, ಇಲ್ಲಿ ಒಳ್ಳೆಯ ಬರಹಗಾರರು ಇಲ್ಲವೆಂದಲ್ಲ. “ಕೋಟಿಗೊಬ್ಬ 3′ ಬಳಿಕ “ಬಿಲ್ಲ ರಂಗ ಭಾಷಾ’ ಆಗಬೇಕಿತ್ತು. ಕಾರಣಾಂತರದಿಂದ ಮುಂದಕ್ಕೆ ಹೋಗಿದೆ. ಅದೇ ಗ್ಯಾಪ್‌ನಲ್ಲಿ ಅನೂಪ್‌ ಭಂಡಾರಿ ಜೊತೆ ಇನ್ನೊಂದು ಸಿನಿಮಾ ಮಾಡ್ತೀನಿ. ಆ ಚಿತ್ರಕ್ಕೆ ಜಾಕ್‌ ಮಂಜು ನಿರ್ಮಾಪಕರು.

ಬಯೋಪಿಕ್‌ ಆಸಕ್ತಿ ಇಲ್ಲ, ರಾಜಕೀಯ ಆಗಿ ಬರಲ್ಲ: ನಾನು ಬಯೋಪಿಕ್‌ ಮಾಡಲ್ಲ ಅಂತಲ್ಲ, ಅದು ರಗಳೆ. ಸವಾಲು ಜಾಸ್ತಿ, ಅಂತಹ ಚಿತ್ರ ಮಾಡಬೇಕಾದರೆ ಅನುಭವಿ ಬರಹಗಾರರು ಬೇಕು. ಅದನ್ನು ನಿಭಾಯಿಸುವ ಸಮರ್ಥ ನಿರ್ದೇಶಕರು ಬೇಕು. ವಿನಾಕಾರಣ ವಿವಾದ ಮೈಮೇಲೆ ಎಳೆದುಕೊಳ್ಳಲ್ಲ. ಈಗಲೂ ಬರುತ್ತಿವೆ. ಆದರೆ, ಆಸಕ್ತಿ ಇಲ್ಲ. ಮುಂದೆ ನೋಡೋಣ. ನಾನು ರಾಜಕೀಯಕ್ಕೆ ಬರ್ತೀನಿ ಎಂಬ ಅಂತೆಕಂತೆಗಳೆಲ್ಲ ಸುಳ್ಳು. ನನಗೆ ರಾಜಕೀಯ ಆಸಕ್ತಿ ಇಲ್ಲ. ಏನಿದ್ದರೂ ಸಿನಿಮಾ ಆಸಕ್ತಿ ಅಷ್ಟೇ. ಹಾಗೇನಾದರೂ ಇದ್ದರೆ, ನಾನೇ ಬಂದು ಹೇಳ್ತೀನಿ. ವಿನಾಕಾರಣ ಕಾಮೆಂಟ್ಸ್‌ಗೆ ಉತ್ತರ ಕೊಡಲ್ಲ.

ಪೈಲ್ವಾನ್‌ಗಾಗಿ ಕಸರತ್ತು: “ನನ್ನ ಕೆರಿಯರ್‌ನಲ್ಲಿ “ಪೈಲ್ವಾನ್‌’ ಒಂದು ಚಾಲೆಂಜಿಗ್‌ ಸಿನಿಮಾ. ಫಿಸಿಕಲ್‌ ಫಿಟ್‌ನೆಸ್‌ ಇಟ್ಟುಕೊಂಡು ಯಾವತ್ತೂ ಪ್ರಯೋಗ ಮಾಡಿರಲಿಲ್ಲ. ಮೊದಲ ಬಾರಿಗೆ ಫಿಜಿಕಲ್‌ ಫಿಟ್‌ನೆಸ್‌ ಚಾಲೆಂಜ್‌ ತೆಗೆದುಕೊಂಡು ಮಾಡಿದ ಚಿತ್ರವಿದು. “ಪೈಲ್ವಾನ್‌’ನಲ್ಲಿ ಮೂರು ಶೇಡ್‌ ಪಾತ್ರಗಳಿವೆ. ಆ ಮೂರು ಪಾತ್ರಗಳಿಗೂ ಸಹ ಅದರದ್ದೇ ಆದ ಹೋಮ್‌ ವರ್ಕ್‌ ಬೇಕಿತ್ತು. ಫಿಸಿಕಲ್‌ ಫಿಟ್‌ ಆಗಬೇಕಿತ್ತು, ಒಮ್ಮೆ ತೆಳ್ಳಗೆ, ಒಮ್ಮೊಮ್ಮೆ ದಪ್ಪಗೆ ಹೀಗೆ ಇದಕ್ಕಾಗಿ ಎರಡು, ಮೂರು ತಿಂಗಳು ತಯಾರಿಗೆ ಸಮಯ ಬೇಕಿತ್ತು. ಹಾಗಾಗಿ ಇದು ನನಗೆ ಹೊಸ ಅನುಭವ. ಇನ್ನು, “ಪೈಲ್ವಾನ್‌’ ನಾಲ್ಕೈದು ಭಾಷೆಯಲ್ಲಿ ಬರುತ್ತಿದೆ. ಆ ಭಾಷೆಯ ನೇಟಿವಿಗೆ ತಕ್ಕಂತೆ ಸಿನಿಮಾ ಇದೆ. ಯುನಿರ್ವಸಲ್‌ ಆಗಿರುವುದರಿಂದ ಸ್ವಲ್ಪ ಸಮಯ ಹಿಡಿದಿದೆ. ಈಗ ಎಲ್ಲಾ ಕೆಲಸ ಮುಗಿದಿದ್ದು, ಆಗಸ್ಟ್‌ನಲ್ಲಿ ಬರಲು ಸಜ್ಜಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ