ಚಿತ್ರಮಂದಿರ ಸಮಸ್ಯೆ ವಜ್ರಮುಖಿ ರಿಲೀಸ್‌ ಮುಂದಕ್ಕೆ

ಫೇಸ್‌ಬುಕ್‌ನಲ್ಲಿ ನೀತು ಮನವಿ

Team Udayavani, Jul 15, 2019, 3:02 AM IST

ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆ. ಆದರೆ, ಚಿತ್ರಮಂದಿರದ್ದೇ ಸಮಸ್ಯೆ. ಹೌದು, ಇಲ್ಲಿ ಸಿನಿಮಾ ಮಾಡುವುದು ದೊಡ್ಡ ಸಾಹಸದ ಕೆಲಸವಾದರೆ, ಸಿನಿಮಾ ಪೂರ್ಣಗೊಳಿಸಿ ಅದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದು ಇನ್ನೊಂದು ಹರಸಾಹಸದ ಕೆಲಸ. ಸಾಮಾನ್ಯ ಹಾಗೂ ಹೊಸ ನಿರ್ಮಾಪಕರಿಗಂತೂ ಇದು ದೊಡ್ಡ ತಲೆನೋವಿನ ಸಂಗತಿ.

ಅದೆಷ್ಟೋ ಹೊಸಬರ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೆ ಪರದಾಡುತ್ತಿರುವ ವಿಷಯ ಹೊಸದೇನಲ್ಲ. ಆದರೆ, ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿ, ಪ್ರಚಾರ ಕಾರ್ಯಗಳೆಲ್ಲವನ್ನೂ ಶುರು ಮಾಡಿ, ಇನ್ನೇನು ಬಿಡುಗಡೆ ಮಾಡಬೇಕು ಅನ್ನುವ ಹೊತ್ತಿಗೆ ಚಿತ್ರಮಂದಿರಗಳೇ ಆ ಚಿತ್ರಕ್ಕೆ ಸಿಗದಿದ್ದರೆ ಆ ನಿರ್ಮಾಪಕರ ಪರಿಸ್ಥಿತಿ ಹೇಗಿರಬೇಡ?

ಈಗ ಅಂಥದ್ದೊಂದು ಸಮಸ್ಯೆಯ ಸುಳಿಯಲ್ಲಿ ಹೊಸಬರ “ವಜ್ರಮುಖಿ’ ಚಿತ್ರ ಸಿಲುಕಿಕೊಂಡಿದೆ. ಹೌದು, ಜುಲೈ 19 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೊಂಡಿತ್ತು. ಆದರೆ, ಇದೀಗ ಚಿತ್ರಕ್ಕೆ ಚಿತ್ರಮಂದಿರಗಳ ಕೊರತೆ ಉಂಟಾಗಿದ್ದರಿಂದ “ವಜ್ರಮುಖಿ’ ಚಿತ್ರ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿದೆ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನೀತು, ತಮ್ಮ “ವಜ್ರಮುಖಿ’ ಚಿತ್ರ ಬಿಡುಗಡೆ ಕುರಿತು ಫೇಸ್‌ಬುಕ್‌ನಲ್ಲೊಂದು ಪೋಸ್ಟ್‌ ಹಾಕಿದ್ದಾರೆ. ಆ ಪೋಸ್ಟ್‌ನಲ್ಲಿ ನೀತು ಹೇಳಿಕೊಂಡಿರುವುದಿಷ್ಟು. “ನಾನು ಅಭಿನಯಿಸಿರುವ “ವಜ್ರಮುಖಿ’ ಚಿತ್ರ ಜು.19 ರಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು.

ಆ ಕುರಿತಂತೆ ಎಲ್ಲೆಡೆ ಜೋರಾದ ಪ್ರಚಾರವೂ ಶುರುವಾಗಿತ್ತು. ಆದರೆ, ಜು.19 ರಂದು ಕನ್ನಡದ ಏಳೆಂಟು ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ. ಹಾಗಾಗಿ, “ವಜ್ರಮುಖಿ’ ಚಿತ್ರದ ಬಿಡುಗಡೆ ಎರಡು ವಾರ ಮುಂದಕ್ಕೆ ಹೋಗಲಿದೆ. ಎಂದಿನಂತೆಯೇ ಚಿತ್ರದ ಪ್ರಚಾರ ಕಾರ್ಯ ಕೂಡ ಶುರುವಾಗಲಿದೆ.

ಇನ್ನು, “ವಜ್ರಮುಖಿ’ ಚಿತ್ರದ ಉದ್ದೇಶ ಇಷ್ಟೇ, ಇದೊಂದು ಹಾರರ್‌ ಚಿತ್ರ. ಹಾರರ್‌ ಸಿನಿಮಾ ಇಷ್ಟಪಡುವ ಜನರಿಗೆ ಥ್ರಿಲ್‌ ಆಗುವಂತಹ ಅಂಶಗಳು ಇಲ್ಲಿರಲಿವೆ. ಇದೊಂದು ಪಕ್ಕಾ ಭಯಬೀಳಿಸುವ ಸಿನಿಮಾ. ಎಲ್ಲರೂ ಎಂದಿನಂತೆಯೇ ನಮ್ಮ “ವಜ್ರಮುಖಿ’ ಚಿತ್ರಕ್ಕೆ ಬೆಂಬಲ ಕೊಡಬೇಕು’ ಎಂದು ನೀತು ಫೇಸ್‌ಬುಕ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರವನ್ನು ಶಶಿಕುಮಾರ್‌ ನಿರ್ಮಾಣ ಮಾಡಿದ್ದಾರೆ. ಗೀತಾ ಅವರ ಸಹ ನಿರ್ಮಾಣವಿದೆ. ಆದಿತ್ಯ ಕುಣಿಗಲ್‌ ನಿರ್ದೇಶನವಿದೆ. ಚಿತ್ರದಲ್ಲಿ ದಿಲೀಪ್‌ ಪೈ , ಸಂಜನಾ ಇತರರು ನಟಿಸಿದ್ದಾರೆ. ಪಿಕೆಎಚ್‌ ದಾಸ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. ಎನ್‌.ಕುಮಾರ್‌ ಅವರು ಚಿತ್ರದ ವಿತರಣೆ ಮಾಡುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ