ಅಂತೂ “ದಿ ವಿಲನ್‌’ ಮುಗಿಯಿತು

Team Udayavani, Jul 24, 2018, 11:06 AM IST

ಪ್ರೇಮ್‌ “ದಿ ವಿಲನ್‌’ ಸಿನಿಮಾದ ಚಿತ್ರೀಕರಣವನ್ನು ಯಾವತ್ತು ಮುಗಿಸ್ತಾರೋ … ಹೀಗೆಂದು ಅದೆಷ್ಟು ಮಂದಿ ತಲೆಕೆಡಿಸಕೊಂಡಿದ್ದರೋ ಲೆಕ್ಕವಿಲ್ಲ. ಅದಕ್ಕೆ ಸರಿಯಾಗಿ “ದಿ ವಿಲನ್‌’ ಕೂಡಾ ಸ್ವಲ್ಪ ತಡವಾಗುತ್ತಲೇ ಬಂತು. ಈಗ ಪ್ರೇಮ್‌ ಚಿತ್ರೀಕರಣ ಮುಗಿಸಿದ್ದು, ಇನ್ನೇನಿದ್ದರೂ ಪೋಸ್ಟ್‌ಪ್ರೊಡಕ್ಷನ್‌ ಕೆಲಸಗಳಷ್ಟೇ ಬಾಕಿ.

ಭಾನುವಾರ ರಾತ್ರಿಗೆ ಅರಮನೆ ಮೈದಾನದಲ್ಲಿ ನಡೆದ ಚಿತ್ರೀಕರಣದೊಂದಿಗೆ “ದಿ ವಿಲನ್‌’ ಪೂರ್ಣಗೊಂಡಿದೆ. ಒಟ್ಟು 118 ದಿನಗಳ ಕಾಲ “ವಿಲನ್‌’ ಶೂಟಿಂಗ್‌ ನಡೆದಿದೆ. ಈಗಾಗಲೇ ಪ್ರೇಮ್‌ ಚಿತ್ರದ ಎರಡು ಹಾಡುಗಳನ್ನು ಬಿಟ್ಟಿದ್ದು, ಎರಡು ಹಾಡುಗಳು ಅಭಿಮಾನಿಗಳನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಗಿದೆ. ಈಗ ಚಿತ್ರದ ಮತ್ತೂಂದು ಹಾಡು ಇದೇ 29ರಂದು ಬಿಡುಗಡೆಯಾಗಲಿದೆ. 

ಎಲ್ಲಾ ಓಕೆ ಚಿತ್ರದ ಆಡಿಯೋ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಈಗ ಆಡಿಯೋ ಬಿಡುಗಡೆ ದಿನಾಂಕವೂ ಪಕ್ಕಾ ಆಗಿದೆ. ಆಗಸ್ಟ 11 ರಂದು “ದಿ ವಿಲನ್‌’ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. “ಆಗಸ್ಟ್‌ 11 ರಂದು ಆಡಿಯೋ ಬಿಡುಗಡೆಯಾಗಲಿದೆ. ಆರಂಭದಲ್ಲಿ ನಾವು ಹುಬ್ಬಳ್ಳಿ ಮೈದಾನದಲ್ಲಿ ಮಾಡಬೇಕೆಂದುಕೊಂಡಿದ್ದೆವು.

ಆದರೆ ಸಿಕ್ಕಾಪಟ್ಟೆ ಮಳೆಯಿಂದಾಗಿ ಅಲ್ಲಿ ಮಾಡೋದು ಕಷ್ಟವಾಗುವಂತೆ ಕಾಣುತ್ತಿದೆ. ಹಾಗಾಗಿ, ಕಂಠೀರವ ಸ್ಟೇಡಿಯಂನಲ್ಲಿ ಮಾಡುವ ಸಾಧ್ಯತೆ ಇದೆ’ ಎನ್ನುತ್ತಾರೆ ಪ್ರೇಮ್‌. “ದಿ ವಿಲನ್‌’ ಆಡಿಯೋ ಮತ್ತೂಂದು ವಿಶೇಷವೆಂದರೆ ಒಟ್ಟು ಮೂರು ಕಡೆಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ಬಗ್ಗೆ ಪ್ರೇಮ್‌ ಯೋಚಿಸುತ್ತಿದ್ದಾರೆ.

ಬೆಂಗಳೂರಿನ ಜೊತೆಗೆ ದುಬೈ ಹಾಗೂ ಮಂಗಳೂರಿನಲ್ಲೂ ಚಿತ್ರದ ಆಡಿಯೋ ಬಿಡುಗಡೆಯಾಗುವ ಸಾಧ್ಯತೆ ಇದೆ. ದುಬೈನಲ್ಲಿ ರಜನಿಕಾಂತ್‌ ಅವರ, “ರೋಬೋ-2.0′ ಚಿತ್ರದ ಆಡಿಯೋ ಬಿಡುಗಡೆಯಾದ ವೇದಿಕೆಯಲ್ಲೇ “ದಿ ವಿಲನ್‌’ ಆಡಿಯೋ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. 

ಅಭಿಮಾನಿಗಳಿಗೆ ಆದಷ್ಟು ಬೇಗನೇ “ದಿ ವಿಲನ್‌’ ತೋರಿಸಬೇಕೆಂಬ ಉದ್ದೇಶದಿಂದ ರಾತ್ರಿ-ಹಗಲು ಚಿತ್ರದ ಕೆಲಸ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್‌ 24 ರಂದು “ದಿ ವಿಲನ್‌’ ತೆರೆಗೆ ಬರಬಹುದು. “ಸಿನಿಮಾದ ಕೆಲಸ ಜೋರಾಗಿ ನಡೆಯುತ್ತಿದೆ. ಚಿತ್ರದಲ್ಲಿ ಗ್ರಾಫಿಕ್‌ ವರ್ಕ್‌ ಹೆಚ್ಚಿದ್ದು, ಡೈನೋಸಾರ್‌ ಅನ್ನು ಕ್ರಿಯೇಟ್‌ ಮಾಡುತ್ತಿದ್ದೇವೆ. ಈ ಸಿನಿಮಾವನ್ನು ದೊಡ್ಡವರ ಜೊತೆ ಮಕ್ಕಳು ಕೂಡಾ ಎಂಜಾಯ್‌ ಮಾಡಬೇಕೆಂಬ ಉದ್ದೇಶ ನನಗಿದೆ’ ಎನ್ನುತ್ತಾರೆ ಪ್ರೇಮ್‌. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ