“ಕೋಟಿಗೊಬ್ಬ’ನಿಗೆ ಫಾರಿನ್‌ನಲ್ಲಿ ಟ್ರಬಲ್!
ಹೆಚ್ಚು ಹಣಕ್ಕೆ ಏಜೆನ್ಸಿಯಿಂದ ಬ್ಲಾಕ್‌ಮೇಲ್
Team Udayavani, Oct 16, 2019, 3:06 AM IST
ಸುದೀಪ್ ನಟಿಸುತ್ತಿರುವ “ಕೋಟಿಗೊಬ್ಬ – 3′ ಚಿತ್ರತಂಡಕ್ಕೆ ಮುಂಬೈ ಮೂಲದ ಏಜೆನ್ಸಿಯೊಂದು ಬ್ಲಾಕ್ ಮೇಲ್ ಮಾಡುವ ಮೂಲಕ ಪೋಲ್ಯಾಂಡ್‌ನಲ್ಲಿ ಚಿತ್ರತಂಡವನ್ನು ಭಾರತಕ್ಕೆ ಕಳುಹಿಸದೆ ಬೆದರಿಕೆ ಹಾಕಿರುವ ಕುರಿತು ನಿರ್ಮಾಪಕ ಸೂರಪ್ಪ ಬಾಬು ಆರೋಪ ಮಾಡಿದ್ದಾರೆ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಸೂರಪ್ಪ ಬಾಬು, ಪೋಲ್ಯಾಂಡ್‌ನಲ್ಲಿ “ಕೋಟಿಗೊಬ್ಬ- 3′ ಚಿತ್ರದ ಚಿತ್ರೀಕರಣ ನಡೆಸುವ ಉದ್ದೇಶದಿಂದ ಮುಂಬೈ ಮೂಲದ ಏಜೆಂಟ್ ಸಂಜಯ್‌ಪೌಲ್ ಅವರನ್ನು ಸಂಪರ್ಕಿಸಲಾಗಿತ್ತು. ಚಿತ್ರೀಕರಣಕ್ಕೆ ಕೊಡಬೇಕಾದ ಹಣದ ಕುರಿತು ಮೊದಲೇ ಮಾತುಕತೆ ನಡೆಸಲಾಗಿತ್ತು.
ಚಿತ್ರೀಕರಣ ಬಳಿಕ, ಮೊದಲು ಮಾತನಾಡಿದ್ದಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಗಿದೆ. ಶೂಟಿಂಗ್ ಮುಕ್ತಾಯದ ಕೊನೆಯ ದಿನ 50 ಲಕ್ಷ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ, ನಾವು ಅದನ್ನು ನೀಡಲು ಒಪ್ಪಲಿಲ್ಲ. ಹಾಗಾಗಿ, ಅವರು ಚಿತ್ರತಂಡವನ್ನು ಪೋಲ್ಯಾಂಡ್‌ನಿಂದ ಹೋಗಲು ಬಿಡುವುದಿಲ್ಲ ಎಂದು ಬ್ಲಾಕ್‌ಮೇಲ್ ಮಾಡಿ ಬೆದರಿಕೆ ಹಾಕಿದ್ದರು.
ಆದರೂ, ಚಿತ್ರತಂಡವನ್ನು ಅಲ್ಲಿಂದ ಕರೆಸಿಕೊಳ್ಳಲಾಗಿದೆ. ಕೊನೆಗೆ ನಮ್ಮ ಅಕೌಂಟೆಂಟ್ ಒಬ್ಬರನ್ನು ಪೋಲ್ಯಾಂಡ್‌ನಲ್ಲೇ ಒತ್ತೆಯಾಳನ್ನಾಗಿ ಇರಿಸಿಕೊಳ್ಳಲಾಗಿತ್ತು. ಈ ಸಂಬಂಧ ನಾನು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ಕೊಟ್ಟ ಬಳಿಕ ಸಂಜಯ್‌ಪೌಲ್ ಅವರ ವಶದಲ್ಲಿದ್ದ ಅಕೌಂಟೆಂಟ್ ಅವರನ್ನು ಬಿಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ ಸೂರಪ್ಪಬಾಬು.