ಕಾಶಿನಾಥ್‌ ಪುತ್ರನ ಚಿತ್ರಕ್ಕೆ ಉಪೇಂದ್ರ ಸಾಥ್‌

ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಟೈಟಲ್‌ ಟೀಸರ್‌ಗೆ ಚಾಲನೆ

Team Udayavani, Nov 13, 2019, 6:04 AM IST

ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‌ “ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರಕ್ಕೆ ಹೀರೋ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರದ ಟೈಟಲ್‌ ಟೀಸರ್‌ಗೆ ಇದೀಗ ಚಾಲನೆ ಸಿಕ್ಕಿದೆ. ಭಾನುವಾರ ಉಪೇಂದ್ರ ಅವರು ಚಿತ್ರದ ಟೈಟಲ್‌ ಟೀಸರ್‌ಗೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರವನ್ನು ಕಿರಣ್‌ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಕಿರಣ್‌ ಸೂರ್ಯ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಇದಕ್ಕೂ ಮುನ್ನ “ದೇವಕಿ’ ಚಿತ್ರಕ್ಕೆ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದ ಕಿರಣ್‌ ಸೂರ್ಯ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಅಭಿಮನ್ಯು ಕಾಶಿನಾಥ್‌ ಅವರ ಚಿತ್ರವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ. ಸುದರ್ಶನ ಆರ್ಟ್ಸ್ ಬ್ಯಾನರ್‌ನಲ್ಲಿ ನಂದೀಶ್‌ ಎಂ.ಸಿ.ಗೌಡ ಮತ್ತು ಜಿತಿನ್‌ ಜಿ. ಪಟೇಲ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರಿಗೂ ಇದು ಮೊದಲ ನಿರ್ಮಾಣದ ಚಿತ್ರ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಹೇಳುವ ಕಿರಣ್‌ ಸೂರ್ಯ, “ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ.

ಆರಂಭದಿಂದ ಅಂತ್ಯದವರೆಗೂ ಹೊಸ ಬಗೆಯ ಅಂಶಗಳೊಂದಿಗೆ ಕುತೂಹಲ ಕೆರಳಿಸುತ್ತ ಹೋಗುತ್ತದೆ. ಈಗಾಗಲೇ ಸಾಕಷ್ಟು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆಯಾದರೂ, ಇಲ್ಲಿ ಹೊಸ ಅಂಶಗಳು ನೋಡುಗರನ್ನು ಸೆಳೆಯಲಿವೆ’ ಎಂಬ ಗ್ಯಾರಂಟಿ ಕೊಡುವ ಕಿರಣ್‌ ಸೂರ್ಯ, ಚಿತ್ರದ ನಾಯಕಿಯಾಗಿ ಸ್ಫೂರ್ತಿ ಉಡಿಮನೆ ಎಂಬ ಪ್ರತಿಭೆ ಆಯ್ಕೆಯಾಗಿದೆ. ಇನ್ನು ಚಿತ್ರದ ಪಾತ್ರಕ್ಕಾಗಿ ಅಭಿಮನ್ಯು ಕಾಶಿನಾಥ್‌ ಅವರು ವಿಶೇಷವಾಗಿ ತಯಾರಾಗುತ್ತಿದ್ದಾರೆ. ಅವರ ಪಾತ್ರಕ್ಕೆ ದಾಡಿ, ಹೇರ್‌ಸ್ಟೈಲ್‌ ಎಲ್ಲವೂ ಹೊಸರೀತಿಯಲ್ಲಿರಲಿದೆ.

ಇನ್ನು, ಚಿತ್ರದಲ್ಲಿ ಮುಖ್ಯವಾಗಿ ನಾಲ್ಕು ಪಾತ್ರಗಳು ಬರಲಿದ್ದು, ಇನ್ನಷ್ಟು ಪ್ರತಿಭೆಗಳಿಗೆ ಆಡಿಷನ್‌ ನಡೆಸಿ, ಆಯ್ಕೆ ಮಾಡಿಕೊಳ್ಳಲಾಗುತ್ತದೆ’ ಎಂದು ವಿವರ ಕೊಡುತ್ತಾರೆ ಕಿರಣ್‌ ಸೂರ್ಯ. ಸದ್ಯಕ್ಕೆ ಬಿಡುಗಡೆಯಾಗಿರುವ ಟೈಟಲ್‌ ಟೀಸರ್‌ಗೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಹೆಚ್ಚಿದೆ. ಮಡಿಕೇರಿ, ಮೈಸೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಚಿತ್ರಕ್ಕೆ ಗೌತಮ್‌ ಮನು ಛಾಯಾಗ್ರಹಣವಿದೆ. ಗಣೇಶ್‌ ನಾರಾಯಣ್‌ ಸಂಗೀತವಿದೆ. ರವಿಚಂದ್ರನ್‌ ಸಂಕಲನ ಮಾಡುತ್ತಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ