ಉಪ್ಪಿ ಮುಂದಿನ ಚಿತ್ರ ಅಧೀರ

Team Udayavani, May 22, 2018, 11:10 AM IST

ಉಪೇಂದ್ರ ಅವರು ಯಾವಾಗ “ಪ್ರಜಾಕೀಯ’ ಅಂತ ಓಡಾಟ ಶುರು ಮಾಡಿದರೋ, ಎಲ್ಲರಿಗೂ ಇನ್ಮುಂದೆ ಅವರ ಸಿನಿಮಾ ಓಡಾಟ ಕಮ್ಮಿಯಾಗುತ್ತೆ ಅಂತಾನೇ ಭಾವಿಸಿದ್ದರು. ಆದರೆ, ಉಪೇಂದ್ರ ಹಾಗೆ ಮಾಡಲಿಲ್ಲ. ಅವರು ರಾಜಕಾರಣ ಶುರು ಮಾಡುವ ಮುನ್ನವೂ, “ನಾನು ಸಿನಿಮಾ ಬಿಡೋದಿಲ್ಲ’ ಅಂತಾನೇ ಹೇಳಿದ್ದರು. ಹಾಗಾಗಿ ಉಪೇಂದ್ರ ಯುಟರ್ನ್ ತೆಗೆದುಕೊಂಡಿದ್ದಾರೆ.

ಆರ್‌.ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ “ಐ ಲವ್‌ ಯು’ ಚಿತ್ರದ ಮೂಲಕ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಸೋಮವಾರ “ಐ ಲವ್‌ ಯು’ ಚಿತ್ರಕ್ಕೆ ಭರ್ಜರಿ ಮುಹೂರ್ತ ನೆರವೇರಿತು. ಉಪೇಂದ್ರ ಈಗ ಸಿನಿಮಾದಲ್ಲಿ ಬಿಜಿ. ಎಷ್ಟು ಬಿಜಿ ಅಂದರೆ, ಅವರ ಕೈಯಲ್ಲಿ ಆರು ಪ್ರಾಜೆಕ್ಟ್ಗಳಿವೆ. ಅದು ಮುಂದಿನ ಮೂರು ವರ್ಷಕ್ಕಾಗುವಷ್ಟು ಚಿತ್ರಗಳು. ಹೌದು, ಆ ಕುರಿತು ಸ್ವತಃ ಉಪೇಂದ್ರ ಅವರೇ ತಮ್ಮ ಮುಂದಿನ ಸಿನಿಮಾ ಕುರಿತು ಹೇಳಿಕೊಂಡಿದ್ದಾರೆ. ಅದು ಅವರದ್ದೇ ಮಾತುಗಳಲ್ಲಿ …

“ಚಂದ್ರು ಬಂದು “ಐ ಲವ್‌ ಯು’ ಕಥೆ ಹೇಳಿದಾಗ, ಖುಷಿಯಾಯ್ತು. ರೀಲೋಡೆಡ್‌ ಆಗಿದ್ದಾರೆನಿಸಿತು. ನನ್ನ “ಎ’ ಮತ್ತು ‘ಉಪೇಂದ್ರ’ ಚಿತ್ರದ ಸತ್ವ, ಅವರ “ತಾಜ್‌ಮಹಲ್‌’, “ಚಾರ್‌ಮಿನಾರ್‌’ ಛಾಯೆಗಳ ಜೊತೆಗೊಂದಷ್ಟು ಹೊಸ ಅಂಶಗಳು ಇಲ್ಲಿವೆ. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಮಾಡಿದ್ದಾರೆ. ಹಾಗಾಗಿ ಒಪ್ಪಿಕೊಂಡು ಮಾಡುತ್ತಿದ್ದೇನೆ. ಈ ಚಿತ್ರದ ಬಳಿಕ ನಾನು ಕನಕಪುರ ಶ್ರೀನಿವಾಸ್‌ ಅವರಿಗೊಂದು ಚಿತ್ರ ಮಾಡಿಕೊಡುತ್ತಿದ್ದೇನೆ.

ಸಂತು ಎಂಬ ಹೊಸ ಹುಡುಗ ನಿರ್ದೇಶಕ. ಈಗಾಗಲೇ ಯು ಟ್ಯೂಬ್‌ನಲ್ಲಿ “ಅಧೀರ’ ಎಂಬ ಹೆಸರಿನ ಟ್ರೇಲರ್‌ ಕೂಡ ಬಿಡಲಾಗಿದೆ. ಅದು ಪಕ್ಕಾ ಸ್ವಮೇಕ್‌ ಕಥೆ. ಪೀರಿಯಡ್‌ ಸಬ್ಜೆಕ್ಟ್ ಆಗಿರುವುದರಿಂದ ಒಪ್ಪಿಕೊಂಡಿದ್ದೇನೆ. ಈಗಾಗಲೇ ಯು ಟ್ಯೂಬ್‌ನಲ್ಲಿ ಆ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಹೇಗಿರುತ್ತೆ ಎಂಬುದನ್ನು ತೋರಿಸುವುದಕ್ಕಾಗಿಯೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ, ಟ್ರೇಲರ್‌ ಮಾಡಿದ್ದಾರೆ. ಆ ತಂಡದ ಆಸಕ್ತಿ ಇಷ್ಟವಾಯ್ತು.

ಹಾಗಾಗಿ ಆ ಚಿತ್ರ ಒಪ್ಪಿದ್ದೇನೆ. ಅದು ಬಿಟ್ಟರೆ, ಕೆ.ಮಂಜು ಅವರ ಬ್ಯಾನರ್‌ನಲ್ಲೊಂದು ಚಿತ್ರ ಮಾಡುತ್ತಿದ್ದೇನೆ. ಮೈಸೂರಿನ ನಿರ್ಮಾಪಕರೊಬ್ಬರ ಚಿತ್ರ ಮಾಡಬೇಕು. ಈ ನಡುವೆ, ತಮಿಳು ಚಿತ್ರತಂಡದ್ದು ಒಂದು ಇದೆ. ಉದಯ ಪ್ರಕಾಶ್‌ ಅವರ “ಮೋದಿ’ ಚಿತ್ರ ಕೂಡ ಇದೆ. ಸದ್ಯಕ್ಕೆ 6 ತಿಂಗಳಿನಿಂದಲೂ ಆ ಪ್ರಾಜೆಕ್ಟ್ ಹಾಗೆಯೇ ಇಟ್ಟಿದ್ದೇನೆ. ಯಾಕೆಂದರೆ, ಆಗ ಅಪನಗಧೀಕರಣ ಕುರಿತು ಕಥೆ ಹೆಣೆಯಲಾಗಿತ್ತು. ಈಗ ಕೊಂಚ ಬದಲಾವಣೆಯಾಗುತ್ತಿದೆ. ಅದೂ ಕೂಡ ಸರದಿಯಲ್ಲಿದೆ.

ಇದೆಲ್ಲದರ ನಡುವೆ ನಿರ್ದೇಶನದ ಕಡೆಯೂ ಗಮನಹರಿಸುತ್ತೇನೆ. ನನ್ನ 50 ನೇ ಚಿತ್ರವನ್ನು ನಾನೇ ನಿರ್ದೇಶಿಸಿ, ನಟಿಸುವ ಯೋಚನೆಯೂ ಇದೆ. ಈಗಾಗಲೇ ಸ್ಕ್ರಿಪ್ಟ್ ಕೂಡ ರೆಡಿಯಾಗಿದೆ. ಆದರೆ, ಪ್ರಜಾಕೀಯದಿಂದಾಗಿ ತಡವಾಗಿದೆ. ಈಗ ಸಮಯ ಬೇಕು. ಒಂದೊಂದೇ ನನ್ನ ಸಿನಿಮಾಗಳು ಅನೌನ್ಸ್‌ ಆಗುತ್ತವೆ. ಅತ್ತ, ಅಣ್ಣನ ಮಗ ನಿರಂಜನ್‌ಗೂ ಒಂದು ಸಿನಿಮಾ ಮಾಡಬೇಕು. ಈಗಾಗಲೇ ಅವನು ಒಂದೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾನೆ.

ಅವನಿಗೆ ಸ್ವಲ್ಪ ಅನುಭವ ಆಗಲಿ ಅಂತ ಸುಮ್ಮನಿದ್ದೇನೆ. ಎಲ್ಲರೂ, ನಮಗೆ ಮೊದಲಿನ ಉಪ್ಪಿ ಕಾಣಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನಾನು ಮೊದಲಿನಿಂದಲೂ ಪಾದರಸದಂತೆಯೇ ಕೆಲಸ ಮಾಡುತ್ತಿದ್ದೇನೆ. ಈಗಲೂ ಹಾಗೆಯೇ ಇರುತ್ತೇನೆ. ನಾನು ಕ್ಲಾರಿಟಿ ಇಲ್ಲದೆ ಏನೂ ಮಾಡೋದಿಲ್ಲ. ನನ್ನ ಲೈಫ‌ಲ್ಲಿ ಸಿನಿಮಾ ಬಿಟ್ಟರೆ ಯಾವುದೂ ಅಷ್ಟೊಂದು ಥ್ರಿಲ್‌ ಕೊಡಲ್ಲ. ಹಾಗಂತ ಪ್ರಜಾಕೀಯ ಇಲ್ಲವೆಂದಲ್ಲ, ಅದೂ ಇರುತ್ತೆ.

ಎಲ್ಲರಿಗೂ ಉತ್ತರ ಕೊಡೋದು ಕಷ್ಟ. ಹಾಗಂತ, ನನ್ನ ಕೆಲಸಗಳು ಇಲ್ಲಿಗೇ ನಿಲ್ಲುವುದಿಲ್ಲ. ಈಗಲೂ ಊರೂರಿಗೆ ಬನ್ನಿ ಅಂತ ಕರೀತಾರೆ. ಅದಕ್ಕೆ ಸಮಯ ಬೇಕು. ನೋಡೋಣ, ಎಷ್ಟು ಸಾಧ್ಯವೋ, ಅಷ್ಟು ಕೆಲಸ ಮಾಡ್ತೀನಿ. ಮುಂದೆ ಲೋಕಸಭೆ, ಬಿಬಿಎಂಪಿ ಚುನಾವಣೆ ಇದೆ. ಸದ್ಯಕ್ಕೆ ಒಂದು ಪ್ಲಾಟ್‌ಫಾರಂ ರೆಡಿ ಮಾಡಿಕೊಳ್ಳುತ್ತೇನೆ. ಸಂದರ್ಭ ನೋಡಿ ಮುಂದುವರೆಯುತ್ತೇನೆ. ಎಲ್ಲವೂ ತಾನಾಗಿಯೇ ಆಗಬೇಕು.

ಒಂದು ವೇಳೆ ನಾನು ಅಂದುಕೊಂಡಂತೆ ಎಲ್ಲವೂ ಆಗಿ, ನನ್ನ ಪಕ್ಷದಿಂದ 15 ಮಂದಿ ಚುನಾಯಿತರಾಗಿದ್ದರೆ, ಒಳ್ಳೇ ಪಕ್ಷಕ್ಕೆ ಖಂಡಿತ ಸಹಕಾರ ಇರುತ್ತಿತ್ತು. ನಮಗೆ ಅಧಿಕಾರ ಬೇಡ, ಆದರೆ, ನಮ್ಮ ನಾಲ್ಕು ಅಂಶಗಳನ್ನು ಜಾರಿಗೆ ತನ್ನಿ ಅಂತ ಡಿಮ್ಯಾಂಡ್‌ ಮಾಡುತ್ತಿದ್ದೆವು. ಮೊದಲಿಗೆ ಟ್ರಾಫಿಕ್‌ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಇದರಲ್ಲಿ ಬದಲಾವಣೆ ತನ್ನಿ ಎನ್ನುತ್ತಿದ್ದೆ. ಹಂಡ್ರೆಡ್‌ ಪರ್ಸೆಂಟ್‌ ಆಗದಿದ್ದರೂ, ಸ್ವಲ್ಪ ಮಟ್ಟಿಗಾದರೂ ಅದು ಸಾಧ್ಯವಾಗುತ್ತಿತ್ತು. ಆಗಲಿಲ್ಲ.

ನನ್ನ ಪ್ರಕಾರ, ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಬೇಕು. ಯಾವುದೇ ಪಕ್ಷ ಬಂದರೂ, ಸತ್ಯ ವಿಚಾರ ಮೇಲೆ ಅಧಿಕಾರ ಮಾಡಬೇಕು. ಜಾತಿ, ಧರ್ಮ, ಎಮೋಷನ್ಸ್‌ ವಿಚಾರ ಕೈ ಬಿಡಬೇಕು. ವಿಚಾರಗಳಿಲ್ಲದೇ ರಾಜಕೀಯ ಮಾಡಬಾರದು. 6 ತಿಂಗಳ ಮೊದಲೇ ಪ್ರಣಾಳಿಕೆ ಬಿಡುಗಡೆ ಮಾಡಿ ರಾಜಕೀಯ ಮಾಡಬೇಕು. ನನ್ನ ಪ್ರಕಾರ ಕೋರ್ಟ್‌ನಲ್ಲಿ ಪ್ರಣಾಳಿಕೆ ರಿಜಿಸ್ಟರ್‌ ಮಾಡಿಸಿ, ಬಿಡುಗಡೆ ಮಾಡುವಂತಿರಬೇಕು. ಹೀಗೆ ಹೇಳಿಬಿಟ್ಟರೆ, ತಲೆಕೆಟ್ಟಿದೆ ಅಂದುಕೊಳ್ಳುತ್ತಾರೆ. ಇದರಿಂದ ಸಾಮಾನ್ಯ ವ್ಯಕ್ತಿ ಕೂಡ ಮಾತಾಡುವಂತಾಗುತ್ತೆ ಅನ್ನೋದೇ ನನ್ನ ಉದ್ದೇಶ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ