ಕುಸ್ತಿಗೆ ಸಿಕ್ಕ ಅಮ್ಮ

Team Udayavani, Jul 24, 2018, 11:06 AM IST

“ದುನಿಯಾ’ ವಿಜಯ್‌ ತಮ್ಮ ಪುತ್ರ ಸಾಮ್ರಾಟ್‌ರನ್ನು “ಕುಸ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲು ಹೊರಟಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಟೀಸರ್‌ ಕೂಡಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್‌ ಹಾಗೂ ಸಾಮ್ರಾಟ್‌ ಬಿಟ್ಟರೆ ಬೇರೆ ಯಾರೂ ಅಂತಿಮವಾಗಿರಲಿಲ್ಲ. ಈಗ ಚಿತ್ರಕ್ಕೆ ಹೊಸಬರ ಸೇರ್ಪಡೆಯಾಗಿದೆ. ಅದು ಕಲ್ಯಾಣಿ.

ಕಲ್ಯಾಣಿ ಚಿತ್ರದಲ್ಲಿ ತಾಯಿ ಪಾತ್ರ ಮಾಡಲಿದ್ದಾರೆ. ಯಾವ ಕಲ್ಯಾಣಿ ಎಂದು ನೀವು ಕೇಳಿದರೆ “ಜಯಮ್ಮನ ಮಗ’ ಚಿತ್ರದ ಬಗ್ಗೆ ಹೇಳಬೇಕು. ವಿಜಯ್‌ ನಿರ್ಮಿಸಿದ್ದ ಈ ಚಿತ್ರದಲ್ಲಿ ಕಲ್ಯಾಣಿಯವರು ವಿಜಯ್‌ ತಾಯಿಯಾಗಿ ನಟಿಸಿದ್ದರು. ಈಗ “ಕುಸ್ತಿ’ ಚಿತ್ರದಲ್ಲೂ ಅವರು ತಾಯಿಯಾಗಿ ನಟಿಸಲಿದ್ದಾರೆ. ಹಾಗಾದರೆ ಯಾರಿಗೆ ತಾಯಿ ಎಂದರೆ, ವಿಜಯ್‌ ಅವರಿಗೆ ಎಂಬ ಉತ್ತರ ಬರುತ್ತದೆ.

ಈ ಬಗ್ಗೆ ಹೇಳಿಕೊಂಡಿರುವ ವಿಜಯ್‌, “ಜಯಮ್ಮನ ಮಗ’ ಚಿತ್ರದ ತಾಯಿ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಈಗ ನನ್ನ ಮುಂದಿನ ಚಿತ್ರದಲ್ಲೂ ಅವರು ತಾಯಿಯಾಗಿ ನಟಿಸುತ್ತಿದ್ದಾರೆ’ ಎಂದಿದ್ದಾರೆ. ಚಿತ್ರವನ್ನು ರಾಘು ಶಿವಮೊಗ್ಗ ನಿರ್ದೇಶಿಸುತ್ತಿದ್ದಾರೆ. ಉಳಿದಂತೆ ಚಿತ್ರದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ