ಸೈಬರ್‌ ಕ್ರೈಮ್‌ ಸುತ್ತ ಯೋಗಿ ಚಿತ್ರ

ಲೂಸ್‌ಮಾದನಿಗೆ ಅಪೂರ್ವ ಜೋಡಿ?

Team Udayavani, Jul 9, 2019, 3:04 AM IST

ಇತ್ತೀಚೆಗೆ ನಿರ್ದೇಶನದಿಂದ ನಿರ್ಮಾಣದತ್ತ ಮುಖ ಮಾಡಿರುವ ಗುರು ದೇಶಪಾಂಡೆ ಒಂದರ ಹಿಂದೊಂದು ಚಿತ್ರಗಳನ್ನು ತೆರೆಗೆ ತರುವ ಪ್ಲಾನ್‌ನಲ್ಲಿದ್ದಾರೆ. ಸದ್ಯ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸಿರುವ “ಜಂಟಲ್‌ಮ್ಯಾನ್‌’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿ ಇತ್ತೀಚೆಗೆ ಅದರ ಟ್ರೇಲರ್‌ ಹೊರತಂದಿರುವ ಗುರು ದೇಶಪಾಂಡೆ, ಚಿತ್ರದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅದರ ಬೆನ್ನಲ್ಲೇ ಅಜೆಯ್‌ ರಾವ್‌ ನಾಯಕ ನಟನಾಗಿರುವ ಇನ್ನೂ ಹೆಸರಿಡದ ಹೊಸಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈಗ ತಮ್ಮ ಪ್ರೊಡಕ್ಷನ್‌ನ ಮೂರನೇ ಚಿತ್ರದ ಬಗ್ಗೆಯೂ ಗುರು ದೇಶಪಾಂಡೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ, ಗುರು ದೇಶಪಾಂಡೆ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರಕ್ಕೆ ಲೂಸ್‌ಮಾದ ಯೋಗಿ ನಾಯಕರಾಗಿದ್ದು, ಅಪೂರ್ವ ನಾಯಕಿಯಾಗುವ ಸಾಧ್ಯತೆ ಇದೆ.

ಈ ಚಿತ್ರದ ಬಗ್ಗೆ ಮಾತನಾಡಿರುವ ಗುರು ದೇಶಪಾಂಡೆ, “ಸದ್ಯ ಈ ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ. ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿ ಅದನ್ನು ತೆರೆಮೇಲೆ ತರುವ ಯೋಚನೆ ಇದೆ. ಇವತ್ತಿನ ಸೋಶಿಯಲ್‌ ಮೀಡಿಯಾಗಳಲ್ಲಿ ಆಗಾಗ್ಗೆ ನಾವು ಕೇಳುವ, ನೋಡುವ ಸಂಗತಿಗಳೇ ಈ ಚಿತ್ರಕ್ಕೆ ಪ್ರೇರಣೆ.

ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ ಇದು ಗಿಲ್ಟ್ ಮೇಲೆ ನಡೆಯುವ ಚಿತ್ರ. ಚಿತ್ರಕ್ಕೆ ನಾನು ಮತ್ತು ಜಾರ್ಜ್‌ ಜೊತೆಯಾಗಿ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದೇವೆ. ಸದ್ಯ ಇದರ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ನಮ್ಮ ಪ್ಲಾನ್‌ ಪ್ರಕಾರ ಸೆಪ್ಟೆಂಬರ್‌ ವೇಳೆಗೆ ಈ ಚಿತ್ರವನ್ನು ಶುರು ಮಾಡುವ ಯೋಚನೆ ಇದೆ’ ಎನ್ನುತ್ತಾರೆ.

ಇನ್ನು ಈ ಚಿತ್ರವನ್ನು ನಿರ್ದೇಶಿಸಲು ನಿರ್ದೇಶಕರ ಹುಡುಕಾಟದಲ್ಲಿರುವ ಗುರು ದೇಶಪಾಂಡೆ, ಆದಷ್ಟು ಹೊಸ ನಿರ್ದೇಶಕರ ಕೈಯಲ್ಲಿ ಈ ಚಿತ್ರವನ್ನು ನಿರ್ದೇಶಿಸುವ ಆಲೋಚನೆಯಲ್ಲಿದ್ದಾರೆ. ಒಟ್ಟಾರೆ ಈ ಚಿತ್ರದ ತೆರೆಮರೆಯ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಸಿಗಬೇಕಾದರೆ, ಇನ್ನೂ ಸ್ವಲ್ಪ ಸಮಯ ಕಾಯಬೇಕು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ