ಅವೆಂಜರ್ಸ್; ಎಂಡ್ ಗೇಮ್ ಬಿಡುಗಡೆ ದಿನವೇ ಮುಗಿಬಿದ್ದ ಪ್ರೇಕ್ಷಕರು; 52 ಕೋಟಿ ಗಳಿಕೆ

Team Udayavani, Apr 27, 2019, 3:29 PM IST

ನವದೆಹಲಿ:ಹಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಆ್ಯಂಥೋನಿ ರುಸ್ಸೋ, ಜೋಯ್ ರುಸ್ಸೋ ನಿರ್ದೇಶನದ ಅವೆಂಜರ್ಸ್; ಎಂಡ್ ಗೇಮ್ ಭಾರತದಲ್ಲಿ ಬಿಡುಗಡೆಗೊಂಡ ಮೊದಲ ದಿನವೇ(ಏ.26ರಂದು) ಬಾಕ್ಸಾಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದೆ. ಅವೆಂಜರ್ಸ್;ಎಂಡ್ ಗೇಮ್ ಒಂದೇ ದಿನದಲ್ಲಿ ಬರೋಬ್ಬರಿ 52 ಕೋಟಿ ಗಳಿಕೆ ಕಂಡಿದೆ.

ಹಾಲಿವುಡ್ ನ ಈ ಸೂಪರ್ ಹೀರೋ ಸಿನಿಮಾ ಮೊದಲ ದಿನವೇ ಭಾರತದಲ್ಲಿ  52 ಕೋಟಿ ರೂ. ಗಳಿಕೆ ಹಾಗೂ ಜಾಗತಿಕವಾಗಿ 1600 ಕೋಟಿ ರೂಪಾಯಿ ಗಳಿಕೆ ಮೂಲಕ ಬಾಕ್ಸಾಫೀಸ್ ದಾಖಲೆಗಳನ್ನು ಚಿಂದಿ ಉಡಾಯಿಸಿದೆ. ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವೆಂಜರ್ಸ್;ಎಂಡ್ ಗೇಮ್ ಬಗ್ಗೆ ಟ್ವೀಟ್ ಮಾಡಿದ್ದು, ಹಾಲಿವುಡ್ ಸಿನಿಮಾ ಮೊದಲ ದಿನವೇ 53.10 ಕೋಟಿ ಗಳಿಕೆ ಕಂಡಿದೆ. ಆ ನಿಟ್ಟಿನಲ್ಲಿ ಅವೆಂಜರ್ಸ್;ಎಂಡ್ ಗೇಮ್ ನಿಜಕ್ಕೂ ಗೇಮ್ ಚೇಂಜರ್ ಸಿನಿಮಾವಾಗಿದೆ.

ಶುಕ್ರವಾರದ ಗಳಿಕೆ 53.10 ಕೋಟಿಯಾಗಿದ್ದು ಒಟ್ಟು 63.21 ಕೋಟಿ ಗಳಿಸಿದ್ದು, ಈ ಸಿನಿಮಾ ವಿಶ್ವಾದ್ಯಂತ 2,845 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.  ಚೀನಾ, ಆಸ್ಟ್ರೇಲಿಯಾ, ಯುರೋಪ್ ಸೇರಿದಂತೆ 25 ಮಾರುಕಟ್ಟೆಯಲ್ಲಿ ಬಿಡುಗಡೆ ಕಂಡ ಮೊದಲ ದಿನವೇ ಅವೆಂಜರ್ಸ್ ಎಂಡ್ ಗೇಮ್ ಬರೋಬ್ಬರಿ 169 ಮಿಲಿಯನ್ ಡಾಲರ್ ನಷ್ಟು ಗಳಿಕೆ ಕಂಡಿದೆ.

ಕಳೆದ ಹತ್ತು ವರ್ಷಗಳಿಂದ ಅವೆಂಜರ್ಸ್ ಸರಣಿ ಸಿನಿಮಾಗಳು ಪ್ರದರ್ಶನ ಕಂಡಿದ್ದು, ಇದೀಗ ಅವೆಂಜರ್ಸ್; ಎಂಡ್ ಗೇಮ್ ಸರಣಿಯ ಕೊನೆಯ ಸಿನಿಮಾವಾಗಿದೆ. ಆ ನಿಟ್ಟಿನಲ್ಲಿ ಸಿನಿಮಾಕ್ಕೆ ಪ್ರೇಕ್ಷಕರು ಮುಗಿಬಿದ್ದಿರುವುದಾಗಿ ವರದಿ ವಿವರಿಸಿದೆ. ಅವೆಂಜರ್ಸ್ ಹಿಂದಿನ ಸರಣಿಯ ಸಿನಿಮಾದಲ್ಲಿ ವಿಲನ್ ಥ್ಯಾನೋಸ್ ಅನ್ನು ಸೋಲಿಸಿ, ಜಗತ್ತನ್ನು ಕಾಪಾಡಲು ಅವೆಂಜರ್ಸ್ ಪ್ರಯತ್ನಿಸುವುದೇ ಚಿತ್ರದ ಕಥಾಹಂದರವಾಗಿತ್ತು. ಇದೀಗ ಥ್ಯಾನೋಸ್ ಜಿದ್ದಾಜಿದ್ದಿಗೆ ಕಡಿವಾಣ ಹಾಕಲು ಕ್ಯಾಪ್ಟನ್ ಮಾರ್ವೆಲ್ ಪಾತ್ರ ಸೃಷ್ಟಿಸಲಾಗಿದೆ. ಕ್ಯಾ.ಮಾರ್ವೆಲ್ ಅವೆಂಜರ್ಸ್ ಎಂಡ್ ಗೇಮ್ ನಲ್ಲಿ ಹೇಗೆ ಅವರನ್ನೆಲ್ಲಾ ಕಾಪಾಡುತ್ತಾನೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮಾರ್ವೆಲ್ ಯೂನಿವರ್ಸ್ ನಿಂದ ನಿರ್ಮಾಣಗೊಂಡಿರುವ ಅವೆಂಜರ್ಸ್; ಎಂಡ್ ಗೇಮ್ ಸಿನಿಮಾದಲ್ಲಿ ರೋಬರ್ಟ್ ಡೌನೈ ಜ್ಯೂನಿಯರ್, ಚಾರಿಸ್ ಇವಾನ್ಸ್, ಮಾರ್ಕ್ ರುಫೋಲೊ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ