ಲೋಕಸಮರ ಫಲಿತಾಂಶದ ಬಳಿಕ ಮೇ 24ರಂದು ಪ್ರಧಾನಿ ಮೋದಿ ಸಿನಿಮಾ ರಿಲೀಸ್

Team Udayavani, May 3, 2019, 3:11 PM IST

ನವದೆಹಲಿ:  ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟನೆಯ ಪ್ರಧಾನಿ ನರೇಂದ್ರ ಮೋದಿ ಜೀವನ ಕಥಾ ಹಂದರದ ಸಿನಿಮಾ ಲೋಕಸಭಾ ಮಹಾಸಮರದ ಫಲಿತಾಂಶ ಪ್ರಕಟಗೊಂಡ ಬಳಿಕ ಮೇ 24ರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ.

“ಪಿಎಂ ನರೇಂದ್ರ” ಹೆಸರಿನ ಚಿತ್ರ ಏಪ್ರಿಲ್ 11ರಂದು ತೆರೆಕಾಣಲು ಸಿದ್ದವಾಗಿತ್ತು. ಆದರೆ ವಿಪಕ್ಷಗಳು ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಸಿನಿಮಾದಲ್ಲಿ ನರೇಂದ್ರ ಮೋದಿ ಅವರ ಬಾಲ್ಯದಿಂದ ಹಿಡಿದು ಭಾರತದ ಪ್ರಧಾನಿ ಗದ್ದುಗೆ ಏರಿರುವರೆಗಿನ ಕಥೆಯನ್ನೊಳಗೊಂಡಿದೆ. ಸೆಂಟ್ರಲ್ ಬೋರ್ಡ್ ಈ ಸಿನಿಮಾಕ್ಕೆ ಯು ಸರ್ಟಿಫಿಕೇಟ್ ನೀಡಿದೆ.

ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಉದ್ದೇಶ ಹೊಂದಿದ ಹಾಗೂ ವೈಯಕ್ತಿಕ ಬದುಕಿನ ಕುರಿತ ವಿವರವನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಬಿತ್ತರಿಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣಲಿದೆ ಎಂಬುದಾಗಿ ನಿರ್ಮಾಪಕ ಸಂದೀಪ್ ಸಿಂಗ್ ವಿಶ್ವಾಸವ್ಯಕ್ತಪಡಿಸಿದ್ದಾರೆ.

ದೇಶದ ಜವಾಬ್ದಾರಿಯುತ ನಾಗರಿಕರಾಗಿ ನಾವು ಕಾನೂನನ್ನು ಗೌರವಿಸುತ್ತೇವೆ. ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಸಿನಿಮಾದ ಬಿಡುಗಡೆ ಬಗ್ಗೆ ತುಂಬಾ ಚರ್ಚೆ ನಡೆಸಿದ ನಂತರ ನಾವು ಮೇ 24ರಂದು ಸಿನಿಮಾ ಬಿಡುಗಡೆಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ