ನೆಲಸಮವಾಗುತ್ತಾ ಬಿಗ್ ಬಿ ಪ್ರೀತಿಯ ಬಂಗಲೆ ?
Team Udayavani, Jul 5, 2021, 12:50 PM IST
ಮುಂಬೈನ ಜುಹು ಪ್ರದೇಶದಲ್ಲಿರುವ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಸೇರಿದ ಬಂಗಲೆಯ ಒಂದು ಭಾಗವನ್ನು ಕೆಡವಲು ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ ಎಂದು ವರದಿಯಾಗಿದೆ.
ಸಂತಸ ಜ್ಞಾನೇಶ್ವರ ಮಾರ್ಗ್ ರಸ್ತೆಯನ್ನು ಅಗಲೀಕರಣ ಮಾಡಲು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮುಂದಾಗಿದೆ. ಈ ರಸ್ತೆಯಲ್ಲಿಯೇ ಬಿಗ್ ಬಿ ಮನೆ ಇದೆ. ಹೀಗಾಗಿ ಅನಿವಾರ್ಯವಾಗಿ ಮನೆಯ ಒಂದಿಷ್ಟು ಭಾಗ ನೆಲಸಮವಾಗಲಿದೆಯಂತೆ. ರಸ್ತೆ ಅಗಲೀಕರಣ ಮಾಡುವುದಾಗಿ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ 2017ರಲ್ಲಿ ನೋಟಿಸ್ ನೀಡಲಾಗಿತ್ತು. ಅಮಿತಾಬ್ ಬಚ್ಚನ್ ಜೊತೆಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಪಂಕಜ್ ಬಾಲಾಜಿ ಮನೆ ಸೇರಿದಂತೆ ಒಟ್ಟು 7 ಮಂದಿ ಸೆಲೆಬ್ರಿಟಿಗೆ ನೋಟಿಸ್ ನೀಡಲಾಗಿತ್ತು. ಆದರೆ ಆಗ ಅಗಲೀಕರಣ ಮಾಡಿರಲಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನ್ಸಿಪಲ್ ಕೌನ್ಸಿಲರ್ ಪರ ವಕೀಲ ತುಲಿಪ್ ಬ್ರಿಯಾನ್ ಮಿರಾಂಡ, “ಬಿಎಂಸಿ 2017ರಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ನೋಟಿಸ್ ನೋಟಿಸ್ ನೀಡಿದಾಗ ಆ ಭೂಮಿಯನ್ನು ಬಿಎಂಸಿ ಏಕೆ ತೆಗೆದುಕೊಂಡಿಲ್ಲ? ನೋಟಿಸ್ ನೀಡಿದ ನಂತರ ರಸ್ತೆ ಅಗಲೀಕರಣ ಯೋಜನೆಗೆ ಯಾವುದೇ ಮೇಲ್ಮನವಿ ಅಗತ್ಯವಿಲ್ಲ” ಎಂದಿದ್ದಾರೆ.
ಇದೀಗ ಸಿವಿಕ್ ಬಾಡಿ 2017ರ ನೋಟಿಸ್ ಅನುಸರಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮುಂಬೈನ ಬಚ್ಚನ್ ಅವರ ಮೊದಲ ಬಂಗಲೆಯ ಒಂದು ಭಾಗವನ್ನು ನೆಲಸಮ ಮಾಡಲಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.