‘ಬಾಲಿವುಡ್ ಫೇಕ್ ’…ಹೀಗೇಕೆ ಹೇಳಿದ್ರು ನಟ ಇಮ್ರಾನ್ ಹಶ್ಮಿ ?
Team Udayavani, Feb 23, 2021, 10:00 PM IST
ಮುಂಬೈ : ಸುಮಾರು ಎರಡು ದಶಕಗಳಿಂದ ಬಣ್ಣದ ಲೋಕದೊಂದಿಗೆ ನಂಟು ಹೊಂದಿರುವ ನಟ ಇಮ್ರಾನ್ ಹಶ್ಮಿ, ‘ಬಾಲಿವುಡ್ ಒಂದು ನಕಲಿ ದುನಿಯಾ’ ಎಂದಿದ್ದಾರೆ.
ಹಿಂದಿಯ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಇಮ್ರಾನ್, ಕೆಲ ವರ್ಷಗಳಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅಭಿನಯಕ್ಕೆ ಸಾಕಷ್ಟು ಅವಕಾಶಗಳಿದ್ದರೂ ತಮ್ಮ ಪಾಡಿಗೆ ತಾವಿದ್ದರು. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಇದೀಗ ಹೊರಹಾಕಿದ್ದಾರೆ.
ಇತ್ತೀಚಿಗೆ ರೆಡಿಯೋ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಕುರಿತು ತಮಗಿರುವ ಅಭಿಪ್ರಾಯ ಹಂಚಿಕೊಂಡಿರುವ ಇಮ್ರಾನ್, ಅದೊಂದು ಮುಖವಾಡದ ಜಗತ್ತು. ನಮ್ಮೆದುರಿಗೆ ಖುಷಿಯಿಂದ ಮಾತಾಡುವ ವ್ಯಕ್ತಿಯೇ, ನಮ್ಮನ್ನು ತುಳಿಯಲು ಸಂಚು ರೂಪಿಸುತ್ತಿರುತ್ತಾನೆ. ನಾನು ಮೊದಲಿನಿಂದಲೂ ಮೌಲ್ಯವನ್ನು ನಂಬಿಕೊಂಡು ಬಂದವನು ಎಂದಿದ್ದಾರೆ.
ನನ್ನ ಕುಟುಂಬ ನನ್ನನ್ನು ಸರಿಯಾದ ದಾರಿಗೆ ತಂದಿತು. ಚಿತ್ರರಂಗದಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿದ್ದೇ ನನ್ನ ಸಂಸಾರ ಎಂದಿದ್ದಾರೆ ಹಶ್ಮಿ.
ಇದನ್ನೂ ಓದಿ :‘ಗ್ಯಾಂಗ್ ರೇಪ್’ ಬೆದರಿಕೆ ಎದುರಿಸಿದ್ದರಂತೆ ನಟಿ ಪ್ರಿಯಾಂಕಾ…!
ಇನ್ನು ಇಮ್ರಾನ್ ಹಶ್ಮಿ ಅವರು ನಟಿಸಿರುವ ‘ಮುಂಬೈ ಸಾಗಾ’ ಚಿತ್ರ ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಜಾನ್ ಅಬ್ರಾಹಂ, ಸುನೀಲ್ ಶೆಟ್ಟಿ , ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿದೆ. ಬಾಂಬೆ ಮುಂಬೈ ಆಗಿ ಬೆಳೆದ ಕಥಾವಸ್ತು ಈ ಸಿನಿಮಾದಲ್ಲಿದೆ. ಇದರ ಜತೆಗೆ ಅಮಿತಾಭ್ ಬಚ್ಚನ್ ನಟಿಸಿರುವ ಚೆಹ್ರೆ ಸಿನಿಮಾದಲ್ಲಿಯೂ ಹಶ್ಮಿ ಅಭಿನಯಿಸಿದ್ದಾರೆ. ಈ ಸಿನಿಮಾ ಕೂಡ ಇದೇ ಏಪ್ರಿಲ್ 30 ರಂದು ಬಿಡುಗಡೆಯಾಗಲಿದೆ.