ಅಕ್ಷಯ್ ಕುಮಾರ್ ಗಳಿಸುವ ಸಂಭಾವನೆಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನ!

ಬಾಲಿವುಡ್ ಸೂಪರ್ ಕಿಲಾಡಿಯ ವಾರ್ಷಿಕ ಸಂಭಾವನೆ ಗಳಿಕೆ ಎಷ್ಟು ಗೊತ್ತಾ?

Team Udayavani, Aug 22, 2019, 5:20 PM IST

ಬಾಲಿವುಡ್ ನ ಸೂಪರ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಸದ್ಯಕ್ಕೆ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ನಟ. ಹಾಗೆಯೇ ಜಗತ್ತಿನಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟರ ಪೈಕಿ ಅಕ್ಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ ಇಂದು ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರು ಡ್ವೈನೆ ಜಾನ್ಸನ್, ಕ್ರಿಸ್ ಹೆಮ್ಸ್ ವರ್ತ್ ಮತ್ತು ಜೂ. ರಾಬರ್ಟ್ ಡ್ವೈನೆ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವರದಿಯ ಪ್ರಕಾರ ಅಕ್ಷಯ್ ಕುಮಾರ್ ಅವರು 2018ರ ಜೂನ್ 1ರಿಂದ 2019ರ ಜೂನ್ 1ರ ಅವಧಿಯಲ್ಲಿ ಸರಿಸುಮಾರು 466 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ಅಕ್ಷಯ್ ಕುಮಾರ್ ಅವರ ‘ಮಿಶನ್ ಮಂಗಲ್’ ಚಿತ್ರ ಉತ್ತಮ ಗಳಿಕೆಯೊಂದಿಗೆ ಪ್ರದರ್ಶನಗೊಳ್ಳುತ್ತಿದೆ. ಇದರ ಮೊದಲು ಬಿಡುಗಡೆಗೊಂಡ ‘ಕೇಸರಿ’ ಚಿತ್ರವೂ ಸಹ ಸೂಪರ್ ಹಿಟ್ ಪಟ್ಟಿಗೆ ಸೇರ್ಪಡೆಗೊಂಡಿತ್ತು. ಹೌಸ್ ಫುಲ್ 4, ಗುಡ್ ನ್ಯೂಸ್, ಲಕ್ಷ್ಮೀ ಬಾಂಬ್, ಸೂರ್ಯವಂಶಿ ಮತ್ತು ಬಚ್ಚನ್ ಪಾಂಡೆ ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

ಚಿತ್ರಗಳ ಸಂಭಾವನೆ ಮತ್ತು ಜಾಹೀರಾತು ನಟನೆಯಲ್ಲಿನ ಸಂಭಾವನೆಗಳು ಇದರಲ್ಲಿ ಸೇರಿವೆ. ಸದ್ಯಕ್ಕೆ ಅಕ್ಷಯ್ ಕುಮಾರ್ ಅವರು ಸುಮಾರು 20 ಪ್ರಮುಖ ಬ್ರ್ಯಾಂಡ್ ಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರು 33ನೇ ಸ್ಥಾನದಲ್ಲಿದ್ದರು.

‘ನನಗೆ ಹಣ ಒಂದು ಹಂತದವರೆಗೆ ಮಾತ್ರವೇ ಮುಖ್ಯವಾಗುತ್ತದೆ. ನಾನು ಗಳಿಸುವ ಪ್ರತೀ ಪೈಸೆಯಲ್ಲೂ ನನ್ನ ಬೆವರಿನ ಶ್ರಮವಿರುತ್ತದೆ. ಇದಕ್ಕಾಗಿ ನಾನು ಕಠಿಣ ಪರಿಶ್ರಮಪಡುತ್ತೇನೆ. ಹಣ ನಿಮ್ಮ ಬಳಿಗೆ ಸುಲಭದಲ್ಲಿ ಬರುವುದಿಲ್ಲ. ನಾನು ಗಳಿಸುವ ಹಣದಲ್ಲಿ ನನ್ನ ಬೆವರು ಮತ್ತು ರಕ್ತದ ಶ್ರಮ ಇರುವುದರಿಂದ ನನ್ನ ಗಳಿಕೆ ನನಗೆ ಯಾವಾಗಲೂ ಅಮೂಲ್ಯವಾಗಿರುತ್ತದೆ’ ಎಂದು ಈ ಹಿಂದೆ ವೆಬ್ ಸೈಟ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೆಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಳೆದ ಮೂರು ದಶಕಗಳಿಂದ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಕ್ಷಯ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. ಆ್ಯಕ್ಷನ್ ಹೀರೋ ಆಗಿ ಬಳಿಕ ಲವ್ವರ್ ಬಾಯ್ ಆಗಿ ಬ್ರ್ಯಾಂಡ್ ಆಗಿದ್ದ ಅಕ್ಕಿ ಬಳಿಕ ಹೇರಾ ಪೆರಿ, ಫಿರ್ ಹೆರಾ ಪೆರಿ, ವೆಲ್ ಕಂ, ಸಿಂಗ್ ಇಸ್ ಕಿಂಗ್ ಮೊದಲಾದ ಚಿತ್ರಗಳಲ್ಲಿ ಕಾಮಿಡಿ ಹೀರೋ ಆಗಿ ಮಿಂಚಲಾರಂಭಿಸಿದರು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಅಕ್ಷಯ್ ಕುಮಾರ್ ಅವರು ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಅದರಲ್ಲಿ ಏರ್ ಲಿಫ್ಟ್, ಪ್ಯಾಡ್ ಮ್ಯಾನ್, ಕೇಸರಿ, ಮಿಶನ್ ಮಂಗಲ್ ಮುಂತಾದ ಚಿತ್ರಗಳನ್ನು ಪ್ರಮುಖವಾಗಿ ಹೆಸರಿಸಬಹುದಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ