ಬಾಲಿವುಡ್ ಮೊದಲ ಕ್ಯಾಬರೆ ಕ್ವೀನ್ ಕುಕೂ ಖ್ಯಾತಿ ಪಡೆದು ಅನಾಮಿಕಳಾಗಿ ಸಾವನ್ನಪ್ಪಿದ್ದಳು!

ಬಾಲಿವುಡ್ ನಲ್ಲಿ ಅಂದು ಮಿಂಚಿದ್ದ ಕ್ಯಾಬರೆ ಡ್ಯಾನ್ಸರ್ ಹೆಲೆನಾರನ್ನು ಪರಿಚಯಿಸಿದ್ದೇ ಕುಕೂ

ನಾಗೇಂದ್ರ ತ್ರಾಸಿ, May 2, 2019, 4:41 PM IST

ನಟಿ ಹೆಲನ್ ಜೊತೆ ಕುಕೂ ಮೋರೇ

ಸರಳ ಜೀವನ ಹಾಗೂ ಶ್ರೀಮಂತಿಕೆಯ ಬದುಕು ಹೇಗಿರುತ್ತೆ…ಮುಂದೆ ಹೇಗಾಗುತ್ತೆ ಎಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಆದರೆ ಭವಿಷ್ಯದ ಚಿಂತೆಯೇ ಇಲ್ಲದೇ..ಇರುವಷ್ಟು ದಿನ ಐಶಾರಾಮದಿಂದ ಬದುಕು ಸಾಗಿದರೆ ಸಾಕು ಎಂದು ಬದುಕಿದ ಸ್ಟಾರ್ ಡ್ಯಾನ್ಸರ್ ಒಬ್ಬಳ ಕಥಾನಕ ಇದು. ಬಾಲಿವುಡ್ ನಲ್ಲಿ ಹೆಲೆನ್ ತುಂಬಾ ಜನಪ್ರಿಯತೆ ಪಡೆದಿದ್ದ ಕ್ಯಾಬರೆ ಡ್ಯಾನ್ಸರ್. ತುಂಬಾ ಸೋಜಿಗ ಮತ್ತು ಕುತೂಹಲಕಾರಿ ವಿಷಯ ಏನೆಂದರೆ ಈ ಹೆಲೆನ್ ಎಂಬಾಕೆಯನ್ನು ಬಾಲಿವುಡ್ ಜಗತ್ತಿಗೆ ಪರಿಚಯಿಸಿದವಳೇ ಕುಕೂ ಎಂಬ ಫೇಮಸ್ ನಟಿ!

1940 ಮತ್ತು 1950 ದಶಕದಲ್ಲಿ ಬಾಲಿವುಡ್ ನ ಮೊತ್ತ ಮೊದಲ ಕ್ಯಾಬರೆ ಡ್ಯಾನ್ಸರ್ ಆಗಿ ಅಪಾರ ಜನಪ್ರಿಯತೆ ಪಡೆದಿದ್ದ ನಟಿ ಕುಕೂ ಮೋರೇ . 1928ರಂದು ಜನಿಸಿದ್ದ ಈಕೆ ಹಿಂದಿ ಸಿನಿಮಾರಂಗದಲ್ಲಿ “ರಬ್ಬರ್ ಗರ್ಲ್” ಎಂದೇ ಖ್ಯಾತಿ ಪಡೆದಿದ್ದಳು. ಐಟಂ ಸಾಂಗ್ಸ್ ನಲ್ಲಿ ತನ್ನ ದೇಹವನ್ನು ರಬ್ಬರ್ ನಂತೆ ಬಾಗಿಸಿ ಡ್ಯಾನ್ಸ್ ಮಾಡುವ ಮೂಲಕ ಯುವ ಪ್ರೇಕ್ಷಕ ಸಮೂಹವನ್ನು ಆಕರ್ಷಿಸಿದ್ದ ನಟಿ ಕುಕೂ. ಈಕೆಯ ನಿಜವಾದ ಪೂರ್ಣ ಹೆಸರು ಎಲ್ಲಿಯೂ ಖಚಿತವಾಗಿಲ್ಲ. ಕೂಕೂ ಮೋರೆ ಎಂದು ಹೇಳಲಾಗುತ್ತಿದೆ. ಆದರೆ ಅದರ ಬಗ್ಗೆ ಯಾವ ದಾಖಲೆಯೂ ಇಲ್ಲ.

1940 ದಶಕದಲ್ಲಿ ಬಾಲಿವುಡ್ ಗೆ ಎಂಟ್ರಿ:

ಕೂಕೂ 1943ರಲ್ಲಿ ಪ್ರಥ್ವಿ ವಲ್ಲಭ್ ಎಂಬ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 1946ರಲ್ಲಿ ತೆರೆ ಕಂಡಿದ್ದ ಅರಬ್ ಕಾ ಸಿತಾರಾ ಸಿನಿಮಾದಲ್ಲಿನ ಐಟಂ ಡ್ಯಾನ್ಸ್ ಮೂಲಕ ಕುಕೂ ಎಲ್ಲರ ಗಮನ ಸೆಳೆದುಬಿಟ್ಟಿದ್ದಳು. ಇದು ಆಕೆಯ ಬದುಕಿನ ಟರ್ನಿಂಗ್ ಪಾಯಿಂಟ್ ಗೆ ಕಾರಣವಾಯ್ತು. ಬಳಿಕ ಮೆಹಬೂಬ್ ಖಾನ್ ಅವರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅನೋಖಿ ಆದಾ (1948), ಅಂದಾಜ್, ಮುಜ್ರಿಮ್, ಅಂದಾಜ್, ಬರ್ಸಾತ್, ಬಝಾರ್, ಚಾರ್ ದಿನ್, ಚಾಂದಿನಿ ರಾತ್, ಏಕ್ ತೇರಿ ನಿಶಾನಿ, ಪಾಯಲ್ ಹೀಗೆ 49 ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್ ನ ಬೇಡಿಕೆಯ ಕ್ಯಾಬರೆ ಡ್ಯಾನ್ಸರ್ ಆಗಿ ಬೆಳೆದು ಬಿಟ್ಟಿದ್ದಳು ಕೂಕೂ.

ಒಂದು ಐಟಂ ಡ್ಯಾನ್ಸ್ ಗೆ 6 ಸಾವಿರ ರೂ.!

ಬಾಲಿವುಡ್ ನಲ್ಲಿ ಕ್ಯಾಬರೆ ಡ್ಯಾನ್ಸರ್ ಗೆ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಕೂಕೂ ಒಂದು ಸಿನಿಮಾದ ಹಾಡಿನಲ್ಲಿ ಡ್ಯಾನ್ಸ್ ಮಾಡಲು 40ರ ದಶಕದಲ್ಲಿಯೇ ಆರು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಳಂತೆ! ಐಶಾರಾಮಿ ಜೀವನ ನಡೆಸುತ್ತಿದ್ದ ಕುಕೂ ಬಳಿ ಮೂರು ಕಾರುಗಳಿದ್ದವಂತೆ.  ಹೌದು ಒಂದು ಕಾರು ನಾಯಿಗಳನ್ನು ಸುತ್ತಾಡಿಸಲು, ಮತ್ತೊಂದು ಕಾರು ಕುಕೂ ಗೆ ಸಿನಿಮಾ ಶೂಟಿಂಗ್ ಗೆ ಹೋಗಲು, ಮೂರನೇ ಕಾರು ಅತಿಥಿಗಳನ್ನು ಕರೆತರಲು! ಭವಿಷ್ಯದ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದ ಕುಕೂ ಉದಾರಿಯಾಗಿದ್ದಳು.

ಸಾಯೋ ವೇಳೆ ಕೈಯಲ್ಲಿ ಹಣವೇ ಇರಲಿಲ್ಲ!

ಒಂದೂವರೆ ದಶಕಗಳ ಕಾಲ ಬಾಲಿವುಡ್ ನಲ್ಲಿ ಮಿಂಚಿದ್ದ ಕೂಕೂ ಅಷ್ಟೇ ವೇಗದಲ್ಲಿ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗಿಬಿಟ್ಟಿದ್ದಳು. ದಿಲ್ ದಾರ್ ಜೀವನದಿಂದಾಗಿ ತೆರಿಗೆ ಕಟ್ಟಲು ಹಣವಿಲ್ಲದ ಪರಿಣಾಮ ಸರ್ಕಾರ ಆಕೆಯ ಫ್ಲ್ಯಾಟ್ ಹಾಗೂ ಅಪಾರ ಪ್ರಮಾಣದ ಚಿನ್ನವನ್ನು ಜಪ್ತಿ ಮಾಡಿಕೊಂಡಿತ್ತು. ಇದರಿಂದಾಗಿ ಕೂಕೂಗೆ ಔಷಧ ತರಲು ಕೂಡಾ ಹಣವಿಲ್ಲದಂತಾಗಿತ್ತು. ಏತನ್ಮಧ್ಯೆ ಹಲವು ನಟರು ಸಹಾಯ ಹಸ್ತ ನೀಡಿದ್ದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿತ್ತು 52ನೇ ವಯಸ್ಸಿನಲ್ಲಿ ಕೂಕೂ 1981ರ ಸೆಪ್ಟೆಂಬರ್ 30ರಂದು ಇಹಲೋಕ ತ್ಯಜಿಸಿದ್ದಳು.

1950ರಲ್ಲಿ ಬಾಲಕಿ ಹೆಲೆನ್ ಳನ್ನು ಬಾಲಿವುಡ್ ಗೆ ಪರಿಚಯಿಸಿದ್ದಳು!

ಬಾಲಿವುಡ್ ನಲ್ಲಿ ಸ್ಟಾರ್ ಡ್ಯಾನ್ಸರ್ ಆಗಿ ಹೆಸರು ಪಡೆದಿದ್ದ ವೇಳೆ ಹೆಲೆನ್ ಶಾಲೆಗೆ ಹೋಗುತ್ತಿದ್ದಳು. ಒಮ್ಮೆ ತಾಯಿ ಹೆಲೆನ್ ಳನ್ನು ಕೂಕೂ ಮನೆಗೆ ಕರೆದುಕೊಂಡು ಬಂದು ತನ್ನ ಮಗಳಿಗೂ ಸಿನಿಮಾದಲ್ಲಿ ಅವಕಾಶ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದರು. ಹೀಗೆ ಬರ್ಮೀಸ್-ಆ್ಯಂಗ್ಲೋ ಇಂಡಿಯನ್ ಮೂಲದ ಹೆಲೆನ್ ಎಂಬ 13 ವರ್ಷದ ಬಾಲಕಿಯನ್ನು ಕುಕೂ ಹಿಂದಿ ಸಿನಿಮಾರಂಗಕ್ಕೆ ಪರಿಚಯಿಸಿದ್ದಳು. ಐಟಂ ಡ್ಯಾನ್ಸ್ ನಲ್ಲಿ ಸಹ ಡ್ಯಾನ್ಸರ್ ಆಗಿ ಹೆಲೆನ್ ನಟಿಸುತ್ತಿದ್ದಳು. ನೋಡ, ನೋಡುತ್ತಲೇ ಹೆಲೆನ್ ಭಾರೀ ಜನಪ್ರಿಯತೆ ಪಡೆದುಕೊಂಡು ಬಿಟ್ಟಿದ್ದಳು. ಬಾಲಿವುಡ್ ನ ಐಟಂ ಡ್ಯಾನ್ಸರ್ ಸಾಲಿಗೆ ಕೂಕೂ ಬದಲು ಮತ್ತೊಬ್ಬ ಸ್ಟಾರ್ ಡ್ಯಾನ್ಸರ್ ಸೇರ್ಪಡೆಯಾದಂತಾಗಿತ್ತು. ವಿಪರ್ಯಾಸ ಎಂಬಂತೆ ಕುಕೂ ಸ್ಟಾರ್ ಡ್ಯಾನ್ಸರ್ ಆಗಿದ್ದಾಗ ಹೆಲೆನ್ ಕೋರಸ್ ಡ್ಯಾನ್ಸರ್ ಆಗಿದ್ದಳು. ನಂತರ ಹೆಲೆನ್ ಸ್ಟಾರ್ ಡ್ಯಾನ್ಸರ್ ಆದ ವೇಳೆ ಕುಕೂ ಕೋರಸ್ ಡ್ಯಾನ್ಸರ್ ಆಗುವಂತಾಗಿತ್ತು!

ಆಕೆಯ ಜೀವನ ನಿಗೂಢವಾಗಿತ್ತಾ?

ಕುಕೂ ನಿಜಕ್ಕೂ ಮದುವೆಯಾಗಿದ್ದಾಳಾ ಅಥವಾ ಇಲ್ಲವೇ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಕೆಲವು ಊಹಾಪೋಹ ವರದಿ ಪ್ರಕಾರ ಮೋರೇ ಕೋರಿಯೋಗ್ರಾಫರ್ ಕೆಎಸ್ ಮೋರೇ ಅವರ ಜೊತೆ ವಿವಾಹವಾಗಿರುವುದಾಗಿ ತಿಳಿಸಿವೆ. ಮುಝೇ ಜೀನೆ ದೋ ಕುಕೂ ನಟಿಸಿದ್ದ ಕೊನೆಯ ಸಿನಿಮಾ. 1963ರ ನಂತರ ಆಕೆಯನ್ನು ಬಾಲಿವುಡ್ ಜಗತ್ತು ಬಹುತೇಕ ಮರೆತೇಬಿಟ್ಟಿತ್ತು! 1981ರಲ್ಲಿ ಕುಕೂ ತೀರಿಕೊಂಡಾಗ ಬಾಲಿವುಡ್ ನ ಯಾವ ನಟ, ನಟಿಯರು ಆಕೆಯ ಅಂತಿಮ ದರ್ಶನ ಪಡೆಯಲು ಹೋಗಿರಲಿಲ್ಲವಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ