ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಉರಿ ಸಹಿತ 200 ಕ್ಕೂ ಹೆಚ್ಚು ಚಲನಚಿತ್ರಗಳ ಪ್ರದರ್ಶನ

ಗೋವಾದಲ್ಲಿ 50 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನ. 20 ರಿಂದ ಆರಂಭ

Team Udayavani, Oct 6, 2019, 5:47 PM IST

ನವದೆಹಲಿ: ಗೋವಾದಲ್ಲಿ 50 ನೇ ಭಾರತೀಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ (IFFI) ನವೆಂಬರ್‌ 20 ರಿಂದ 28, 2019ರವರೆಗೆ ಪಣಜಿಯಲ್ಲಿ ನಡೆಯಲಿದೆ.

ಈಗಾಗಲೇ ಈ ಸಂಬಂಧ ಎಲ್ಲ ಸಿದ್ಧತೆ ಆರಂಭವಾಗಿದೆ. ಈ ಉತ್ಸವದಲ್ಲಿ 76 ದೇಶಗಳ 2೦0 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇವುಗಳೊಂದಿಗೆ ಭಾರತೀಯ ಪನೋರಮಾ ಮತ್ತಿತರ ವಿಭಾಗಗಳ ಚಲನಚಿತ್ರಗಳೂ ಸೇರಿಕೊಳ್ಳಲಿವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿಯ ಉತ್ಸವಕ್ಕೆ ರಷ್ಯಾ ರಾಷ್ಟ್ರವೂ ನಮ್ಮೊಂದಿಗೆ ಸೇರಿಕೊಳ್ಳಲಿದೆ. ಭಾರತೀಯ ಪನೋರಮಾ ವಿಭಾಗದಡಿ ವಿವಿಧ ಭಾರತೀಯ ಭಾಷೆಗಳ 26 ಕಥಾ ಚಲನಚಿತ್ರಗಳು ಹಾಗೂ 15 ಕಥೇತರ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಐವತ್ತನೇ ಚಲನಚಿತ್ರೋತ್ಸವವಾದ ಕಾರಣ, 50 ವರ್ಷದ ಹಿಂದೆ ತೆರೆ ಕಂಡ ವಿವಿಧ ಭಾಷೆಗಳ 12 ಸಿನಿಮಾಗಳ ವಿಶೇಷ ಪ್ರದರ್ಶನವಿರಲಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಿನಿ ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರೊಂದಿಗೆ ನೂರಾರು ಮಂದಿ ಸಿನಿಮಾ ರಂಗದ ಪರಿಣಿತರು, ನಿರ್ದೇಶಕರು, ಕಲಾವಿದರೂ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಹಿಂದಿ ಭಾಷೆಯ ಮಹೋನ್ನತ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಈ ವರ್ಷ ಸಿನಿಮಾ ರಂಗದ ಶ್ರೇಷ್ಠ ಪ್ರಶಸ್ತಿ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಂದಿದೆ. ಅವರನ್ನು ಅಭಿನಂದಿಸುವ ಸಲುವಾಗಿ ಅಮಿತಾಬ್‌ ನಟನೆಯ 7-8 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಉರಿ – ದಿ ಸರ್ಜಿಕಲ್‌ ಸ್ಟ್ರೈಕ್‌, ಗಲ್ಲಿ ಬಾಯ್‌, ಸೂಪರ್‌ 30, ಬಧಾಯಿ ಹೋ ಮತ್ತಿತರ ಚಲನಚಿತ್ರಗಳೂ ಪ್ರದರ್ಶನಗೊಳ್ಳುವ ಚಿತ್ರಗಳ ಪಟ್ಟಿಯಲ್ಲಿವೆ ಎಂದರು.

ಭಾರತೀಯ ಪನೋರಮಾ ಗೌರವ ಗುಜರಾತಿ ಭಾಷೆ ಚಿತ್ರಕ್ಕೆ
ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಅಭಿಷೇಕ್‌ ಷಾ ನಿರ್ದೇಶಿಸಿದ ಗುಜರಾತಿ ಭಾಷೆಯ ಹೆಲ್ಲಾರೋ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ಪ್ರಿಯದರ್ಶನ್‌ ನೇತೃತ್ವದ ಆಯ್ಕೆ ಸಮಿತಿ ಈ ಸಿನಿಮಾವನ್ನು ಆಯ್ಕೆ ಮಾಡಿದೆ.

ಇದರೊಂದಿಗೆ ಆಶೀಷ್‌ ಪಾಂಡೆ ನಿರ್ದೇಶನದ ನೂರೆ ಚಿತ್ರವನ್ನು ಕಥೇತರ ವಿಭಾಗದ ಉದ್ಘಾಟನಾ ಚಿತ್ರವನ್ನಾಗಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಜಾಂಗ್ಲೇ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ