“ದೇವದಾಸ್” ಸಿನಿಮಾದ ಚೆಲುವೆ, ಸ್ಟಾರ್ ನಟಿ ಅಜ್ಞಾತವಾಗಿ ಬದುಕಿದ್ದೇಕೆ?!

ಭಾರತೀಯ ಚಿತ್ರರಂಗದ ಮಲ್ರಿನ್ ಮನ್ರೋ ಸುಚಿತ್ರಾ ಸೇನ್ ಎಂಬ ನಟಿ ವಿರಕ್ತಿ ಜೀವನ

ನಾಗೇಂದ್ರ ತ್ರಾಸಿ, Apr 11, 2019, 1:11 PM IST

ಭಾರತೀಯ ಸಿನಿಮಾರಂಗದ ದಂತಕಥೆ, ಬಾಲಿವುಡ್, ಬಂಗಾಲಿ ಸಿನಿಮಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಮಿಂಚಿದ್ದ ಈ ಮಹಾನಟಿ ಭಾರತದ ಮಲ್ರಿನ್ ಮನ್ರೋ ಎಂದೇ ಖ್ಯಾತಿಯಾಗಿದ್ದರು. ಈ ಮನಮೋಹಕ ನಟಿಯ ಹೆಸರು ಸುಚಿತ್ರಾ ಸೇನ್. ಈಕೆ ಬಾಲಿವುಡ್ ನಟಿ ಮೂನ್ ಮೂನ್ ಸೇನ್ ತಾಯಿ!

ಸುಚಿತ್ರಾಸೇನ್ ಜನಿಸಿದ್ದು(1931ರ ಏಪ್ರಿಲ್ 6) ಅಂದಿನ ಬ್ರಿಟಿಷ್ ಇಂಡಿಯಾದ ಬಾಂಗ್ಲಾದೇಶ್ ಜಿಲ್ಲೆಯ ಸಿರಾಜ್ ಗಂಜ್ ಎಂಬಲ್ಲಿ. ತಂದೆ ಕರುಣಾಮೊಯ್ ದಾಸ್ ಗುಪ್ತ್ ಸ್ಯಾನಿಟೇಶನ್ ಅಧಿಯಾರಿಯಾಗಿದ್ದರೆ, ತಾಯಿ ಇಂದಿರಾ ದೇವಿ ಗೃಹಿಣಿಯಾಗಿದ್ದರು.

1950ರಿಂದ 1970ರ ದಶಕವರೆಗೆ ಬೆಳ್ಳಿತೆರೆಯಲ್ಲಿ ಸುಮಿತ್ರಾ ಸೇನ್ ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೇವತೆಯಾಗಿಬಿಟ್ಟಿದ್ದರು. ಲಕ್ಷಾಂತರ ಯುವತಿಯರು, ಮಹಿಳೆಯರು ಆಕೆಯ ಕೇಶವಿನ್ಯಾಸಕ್ಕೆ ಮಾರುಹೋಗಿ ಆಕೆಯ ಕೇಶವಿನ್ಯಾಸದಂತೆ ಮಾಡಿಸಿಕೊಳ್ಳುತ್ತಿದ್ದರು. ಆಕೆ ಧರಿಸುತ್ತಿದ್ದ ಧಿರಿಸು, ನಟನೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು.

ವಿರಕ್ತ ಸ್ಟಾರ್ ನಟಿ…ಖ್ಯಾತಿ ಉತ್ತುಂಗದಲ್ಲೇ ಏಕಾಂತ ಅಜ್ಞಾತವಾಸ!

ಅದ್ಭುತ ನಟಿಯಾಗಿ, ರೂಪವತಿಯಾಗಿದ್ದ ಸುಮಿತ್ರಾ ಸೇನ್ ಬಂಗಾಳಿ, ಹಿಂದಿ ಸೇರಿದಂತೆ ಸುಮಾರು 61 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇದರಲ್ಲಿ 1955ರಲ್ಲಿ ತೆರೆಕಂಡಿದ್ದ ಬಿಮಲ್ ರಾಯ್ ನಿರ್ದೇಶನದ, ಶರತ್ಚಂದ್ರ ಚಟ್ಟೋಪಾಧ್ಯಾಯ ಕಾದಂಬರಿ ಆಧಾರಿತ “ದೇವದಾಸ್” ಸೇರಿದಂತೆ 22 ಸಿನಿಮಾಗಳು ಬ್ಲಾಕ್ ಬಸ್ಟರ್ಸ್ಸ್, 13 ಸೂಪರ್ ಹಿಟ್, 5 ಸಿನಿಮಾಗಳು ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ…ಉಳಿದ ಕೆಲವು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಸೋತು ಹೋಗಿದ್ದವು. ಹೀಗೆ ಮನೋಜ್ಞ ಅಭಿನಯಕ್ಕಾಗಿ 1963ರಲ್ಲಿ ಮಾಸ್ಕೋ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಉತ್ತಮ ನಟಿ ಎಂಬ(ಸಾತ್ ಪಾಕೆ ಬಂಧಾ ಬಂಗಾಲಿ ಚಿತ್ರ) ಪ್ರಶಸ್ತಿ ಪಡೆದ ಮೊತ್ತ ಮೊದಲ ಭಾರತೀಯ ನಟಿ ಸೇನ್ ಅಲಿಯಾಸ್ ರೋಮಾ ದಾಸ್ ಗುಪ್ತಾ ಅವರಾಗಿದ್ದರು!

1961ರಲ್ಲಿ ತೆರೆಕಂಡಿದ್ದ ಸಪ್ತಪದಿ ಬಂಗಾಲಿ ಸಿನಿಮಾದಲ್ಲಿನ ಮದ್ಯವ್ಯಸನಿ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಕೂಡಾ ಸೇನ್ ಮುಡಿಗೇರಿತ್ತು. ಹೀಗೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿ ಹೆಸರು, ಕೀರ್ತಿ, ಹಣ ಗಳಿಸಿದ್ದ ಸುಚಿತ್ರಾ ಸೇನ್ 1980ರ ನಂತರ ವಿರಕ್ತ ಜೀವನಕ್ಕೆ ಕಾಲಿಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇ ಇಲ್ಲ!

ಮದುವೆಯಾದ ನಂತರವೇ ಸಿನಿ ಜೀವನಕ್ಕೆ ಸೇನ್ ಕಾಲಿಟ್ಟಿದ್ದು!

ಕುತೂಹಲದ ವಿಷಯವೆಂದರೆ ಸಿನಿಮಾ ಪ್ರಪಂಚದಲ್ಲಿ ಸಾಮಾನ್ಯವಾಗಿ ನಟ, ನಟಿಯರು ಸಿನಿಮಾದಲ್ಲಿ ನಟಿಸಿ ಹೆಸರು, ಕೀರ್ತಿ, ಹಣ ಗಳಿಕೆ ನಂತರವೇ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ಕಂಡಿದ್ದೇವೆ, ಓದಿದ್ದೇವೆ. ಆದರೆ ಸುಚಿತ್ರಾ ಸೇನ್ ವಿಚಾರದಲ್ಲಿ ಅದು ಉಲ್ಟಾ..1947ರಲ್ಲಿ ಸುಚಿತ್ರಾ ಸೇನ್ ಪ್ರತಿ‍ಷ್ಠಿತ ಉದ್ಯಮಿ ದಿವಾನಾಥ್ ಸೇನ್ ಜೊತೆ ಹಸೆಮಣೆ ಏರಿದ್ದರು. ಈ ದಂಪತಿಯ ಪುತ್ರಿಯೇ ಬಾಲಿವುಡ್ ನಟಿ ಮೂನ್ ಮೂನ್ ಸೇನ್! ಏತನ್ಮಧ್ಯೆ ಸುಚಿತ್ರಾ ಸೇನ್ ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸಬೇಕೆಂಬ ಮಹತ್ವಾಕಾಂಕ್ಷೆಗೆ ಪ್ರೋತ್ಸಾಹ ಕೊಟ್ಟವರು ಆಕೆಯ ಮಾವ ಆದಿನಾಥ್ ಸೇನ್. ಆರಂಭಿಕವಾಗಿ ಆಕೆಯ ಪತಿ ಸಿನಿಮಾ ನಿರ್ಮಾಣಕ್ಕೆ ಆರ್ಥಿಕ ನೆರವಿನ ಮೂಲಕ ಬೆಂಬಲ ನೀಡಿದ್ದರು. ಹೀಗೆ ರೋಮಾ ಸೇನ್ ಬಂಗಾಲಿ ಸಿನಿಮಾರಂಗದಲ್ಲಿ ಸುಚಿತ್ರಾಸೇನ್ ಆಗಿಬಿಟ್ಟಿದ್ದರು!

ಹೀಗೆ ಸುಮಿತ್ರಾ ಸೇನ್ 53 ಬಂಗಾಲಿ ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿಯೂ ಅಂದಿನ ಖ್ಯಾತ ನಟ, ಮಹಾನಾಯಕ ಎಂದೆನಿಸಿಕೊಂಡಿದ್ದ ಉತ್ತಮ್ ಕುಮಾರ್ ಜೊತೆ ಬರೋಬ್ಬರಿ 30 ಸಿನಿಮಾಗಳಲ್ಲಿ ಸುಚಿತ್ರಾ ಸೇನ್ ಅಭಿನಯಿಸಿದ್ದರು. ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ಸಂದರ್ಭದಲ್ಲಿ 1970ರಲ್ಲಿ ಪತಿ, ಉದ್ಯಮಿ ದಿವಾನಾಥ್ ಅಮೆರಿಕದ ಬಾಲ್ಟಿಮೋರ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗಿನ್ನೂ ಸುಚಿತ್ರಾ ಸೇನ್ ಗೆ 39ರ ಹರೆಯ!

ಸೌಂದರ್ಯ ದೇವತೆಯಂತಿದ್ದ ಸುಮಿತ್ರಾ ಸೇನ್ ಮಹಾ ಮೂಡಿ(ಮೌನಿ), ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ವರ್ತಿಸುತ್ತಿದ್ದರಂತೆ. ಉತ್ತಮ್ ಕುಮಾರ್ ಪತ್ನಿ ಗೌರಿಗೆ ವಿಚ್ಛೇದನ ನೀಡಿ ಸುಪ್ರಿಯಾ ದೇವಿ ಜೊತೆ 1963ರಲ್ಲಿ ವಿವಾಹವಾಗಿಬಿಟ್ಟಿದ್ದರು! ಈ ಎಲ್ಲಾ ಹೊಯ್ದಾಟದ ಮಧ್ಯೆ ಉತ್ತಮ್ ಕುಮಾರ್ ಮತ್ತು ಸುಮಿತ್ರಾ ಸೇನ್ ಪ್ರೀತಿಸುತ್ತಿದ್ದರೆಂಬ ಊಹಾಪೋಹ ಹಬ್ಬಿತ್ತು. ಕೊನೆಯುಸಿರಿನ ತನಕ (1980) ಉತ್ತಮ್ ಕುಮಾರ್ ಸುಪ್ರಿಯಾ ಜೊತೆ ವಾಸವಾಗಿದ್ದರು.

1980ರ ಜುಲೈ 24ರಂದು ಉತ್ತಮ್ ಕುಮಾರ್ ವಿಧಿವಶರಾಗಿದ್ದಾಗ ಸುಚಿತ್ರಾ ಸೇನ್ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದು, ಉತ್ತಮ್ ಮುಖವನ್ನು ಹಣೆಗೊತ್ತಿಕೊಂಡು ಹೊರಟು ಹೋಗಿದ್ದರಂತೆ. ಈ ಘಟನೆ ನಂತರ ಸುಚಿತ್ರಾ ಸೇನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇ ಇಲ್ಲ!

ಬದುಕಿನ ಆಸೆ, ಆಕಾಂಕ್ಷೆ, ಪ್ರೀತಿಯನ್ನು ಕಳೆದುಕೊಂದ ಸುಚಿತ್ರಾ ಸೇನ್ ಎಲ್ಲಾ ವ್ಯವಹಾರ, ಸಾಮಾಜಿಕ ಕೆಲಸ ಸೇರಿದಂತೆ ಎಲ್ಲವನ್ನೂ ನಿಲ್ಲಿಸಿಬಿಟ್ಟಿದ್ದರು. ಅಷ್ಟೇ ಅಲ್ಲ ಸ್ವಂತ ಮಗಳು ಮೂನ್ ಮೂನ್ ಸೇನ್, ಅಳಿಯ, ಮೊಮ್ಮಕ್ಕಳಾದ ರಿಯಾ, ರೈಮಾ ಸೇರಿದಂತೆ ಯಾರೊಬ್ಬರನ್ನೂ ಭೇಟಿಯಾಗಲು ಬಿಡುತ್ತಿರಲಿಲ್ಲವಂತೆ. ಅಲ್ಲದೇ ಪ್ರತಿಷ್ಠಿತ ದಾದಾಸಾಹೇಬ್ ಪ್ರಶಸ್ತಿಯನ್ನೂ ಕೂಡಾ ಪಡೆಯಲು ನಿರಾಕರಿಸಿಬಿಟ್ಟಿದ್ದರು. ಸುಚಿತ್ರಾ ಸೇನ್ ಅವರನ್ನು ಬಾಲಿವುಡ್ ಸ್ಟಾರ್ ನಟಿ ಗ್ರೆಟಾ ಗಾರ್ಬೋಗೆ ಹೋಲಿಸಲಾಗುತ್ತಿತ್ತು. ಯಾಕೆಂದರೆ ಆಕೆಯ ಕೊನೆಯ ಬದುಕು ಹೀಗೆ ಇತ್ತು!

ದಿನವಿಡೀ ಮನೆಯಲ್ಲಿ ಪೂಜೆ, ಪುನಸ್ಕಾರಗಳಲ್ಲಿ ಕಾಲ ಕಳೆಯುತ್ತಿದ್ದ ಸುಚಿತ್ರಾ ಸೇನ್ ರಾಮಕೃಷ್ಣ ಮಿಷನ್ ನ ಭರತ್ ಮಹಾರಾಜ್ ಎಂಬ ಸನ್ಯಾಸಿಯೊಬ್ಬರಿಂದ ಪ್ರಭಾವಕ್ಕೊಳಗಾಗಿದ್ದರಂತೆ. ಮಿತ ಆಹಾರ ಸೇವನೆ, ಸಾಧಾರಣ ಹತ್ತಿಯ ಸೀರೆ ತೊಡಲು ಆರಂಭಿಸಿದ ಸೇನ್ ಹೆಚ್ಚಿನ ಕಾಲ ರಾಮಕೃಷ್ಣ ಆಶ್ರಮ ಹಾಗೂ ತನ್ನ ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುತ್ತಿದ್ದರು.

ಆಸ್ಕರ್ ಪ್ರಶಸ್ತಿ ವಿಜೇತ ರೇ ಕೊನೆಗೂ ಆ ಸಿನಿಮಾ ಮಾಡಲೇ ಇಲ್ಲ!

ಬಂಗಾಳದ ಪ್ರಸಿದ್ಧ, ಖ್ಯಾತ ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ ಅವರ ಚೌಧುರಾಣಿ ಕಥೆಯನ್ನು ಸಿನಿಮಾ ಮಾಡಬೇಕೆಂದು ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರು ಸುಚಿತ್ರಾ ಸೇನ್ ಗೆ ಆಫರ್ ಕೊಟ್ಟಿದ್ದರು. ಆದರೆ ದಿನಾಂಕ ಹೊಂದಾಣಿಕೆ ಸಮಸ್ಯೆಯಿಂದಾಗಿ ಸೇನ್ ಆ ಸಿನಿಮಾದಲ್ಲಿ ನಟಿಸಲು ಒಪ್ಪಲೇ ಇಲ್ಲ. ಕೊನೆಗೂ ಆಸ್ಕರ್ ಪ್ರಶಸ್ತಿ ವಿಜೇತ ರೇ ಆ ಸಿನಿಮಾವನ್ನು ನಿರ್ದೇಶಿಸಲೇ ಇಲ್ಲ. (1974ರಲ್ಲಿ ದಿನೇನ್ ಗುಪ್ತಾ ನಿರ್ದೇಶಿಸಿದ್ದ ದೇವಿ ಚೌಧುರಾಣಿ ಸಿನಿಮಾದಲ್ಲಿ ಸುಚಿತ್ರಾ ಸೇನ್, ರಂಜಿತ್ ಮಲ್ಲಿಕ್ ನಟಿಸಿದ್ದರು).

1959ರ ದೀಪ್ ಜ್ವಾಲೆ ಜಾಯ್, ಉತ್ತರ್ ಫಲ್ಗುಣಿ, ಕಾಮೋಶಿ, ಸಾತ್ ನಂಬರ್ ಕೈದಿ, ಭಗವಾನ್ ಶ್ರೀಕೃಷ್ಣ ಚೈತನ್ಯ, ಕಾಜೋರಿ, ಅಟಂ ಬಾಂಬ, ಅಗ್ನಿಪರೀಕ್ಷಾ, ಶಾಪ್ ಮೋಚನ್, ಸಾಗರಿಕಾ, ಶುಭರಾತ್ರಿ, ಏಕ್ತಿ ರಾತ್, ಶಿಲ್ಪಿ, ಅಮರ್ ಬಹು, ಸೂರ್ಯ ತೋರಣ್, ಇಂದ್ರಾಣಿ,ಸಪ್ತಪದಿ ಸೇರಿದಂತೆ ಹಲವು ಅದ್ಭುತ ಸಿನಿಮಾಗಳಲ್ಲಿ ಸೇನ್ ನಟಿಸಿದ್ದು, 1974ರಲ್ಲಿ ತೆರೆಕಂಡಿದ್ದ ಗುಲ್ಜಾರ್ ನಿರ್ದೇಶನದ ಅಂಧಿ(ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪ್ರೇರಿತ) ಸಿನಿಮಾವನ್ನು 20ಕ್ಕೂ ಹೆಚ್ಚು ವಾರಗಳ ಕಾಲ ಬಿಡುಗಡೆ ಮಾಡದಂತೆ ತಡೆಯಲಾಗಿತ್ತು. 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಏರಿದಾಗ ರಾಜ್ಯ ಸ್ವಾಮಿತ್ವದ ರಾಷ್ಟ್ರೀಯ ಟೆಲಿವಿಷನ್ ಚಾನೆಲ್ ನಲ್ಲಿ ಅಂಧಿ ಸಿನಿಮಾ ಪ್ರಸಾರವಾಗಿತ್ತು!

ತನ್ನ ಒಳಗಿನ ನೋವು, ಹತಾಶೆಯನ್ನು ಯಾರೊಂದಿಗೂ ಹಂಚಿಕೊಳ್ಳದ ಖ್ಯಾತ ನಟಿ ಸುಚಿತ್ರಾ ಸೇನ್ ವಿರಕ್ತಳಾಗಿ, ಅಜ್ಞಾತವಾಸದಲ್ಲಿ ಬದುಕಿದ್ದು ಯಾಕೆ ಎನ್ನುವುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಆದರೆ ಆಕೆಯ ನಟನೆ, ಸಿನಿಮಾ ಇಂದಿಗೂ ಮರೆಯಲು ಸಾಧ್ಯವಿಲ್ಲ….

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ