ರಾಜಮೌಳಿಯ RRR ಚಿತ್ರಕ್ಕೆ ಮೂವರು ಫಾರಿನ್ ನಟ-ನಟಿಯರು ಎಂಟ್ರಿ

ನಾಯಕಿಯಾಗಿ ಒಲಿವಿಯಾ ಮೋರಿಸ್ ; ಪ್ರಮುಖ ಖಳಪಾತ್ರಕ್ಕೆ ರೇ ಸ್ಟಿವನ್ಸನ್ ಮತ್ತು ಅಲಿಸನ್ ಡೂಡಿ ಎಂಟ್ರಿ

Team Udayavani, Nov 20, 2019, 7:45 PM IST

ಹೈದ್ರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಆರ್.ಆರ್.ಆರ್.ನಲ್ಲಿ ಜ್ಯೂನಿಯರ್ ಎನ್.ಟಿ.ಆರ್. ಪಾತ್ರಕ್ಕೆ ನಾಯಕಿಯಾಗಿ ಈ ಮೊದಲು ಆಯ್ಕೆಯಾಗಿದ್ದ ಡೈಸಿ ಎಡ್ಗರ್ ಜೋನ್ಸ್ ಜಾಗಕ್ಕೆ ಇನ್ನೊಬ್ಬ ಬ್ರಿಟಿಷ್ ನಟಿ ಒಲಿವಿಯಾ ಮೋರಿಸ್ ಅವರು ಬಂದಿದ್ದಾರೆ.

ಇದೇ ವೇಳೆ ಐರಿಷ್ ನಟ ರೇ ಸ್ಟೀವನ್ಸನ್ ಮುಖ್ಯ ಖಳ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ‘ಎ ವ್ಯೂ ಟು ಕಿಲ್’ನಂತಹ ಬಾಂಡ್ ಚಿತ್ರಗಳಲ್ಲಿ ಮತ್ತು ಇಂಡಿಯಾನ ಜೋನ್ಸ್ ಮತ್ತು ದಿ ಲಾಸ್ಟ್ ಕ್ರುಸೇಡ್ ಗಳಂತಹ ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಐರಿಶ್ ನಟಿ ಅಲಿಸನ್ ಡೂಡಿ ಅವರು ಈ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ಒಲಿವಿಯಾ ಮೋರಿಸ್ ಅವರು ರಂಗಭೂಮಿ ಕಲಾವಿದೆ ಮತ್ತು ಬ್ರಿಟಿಷ್ ಚಿತ್ರನಟಿಯಾಗಿದ್ದಾರೆ. ಇನ್ನು ಸ್ಟಿವನ್ಸನ್ ಅವರು ಹಲವಾರು ಚಿತ್ರಗಳ ಮೂಲಕ ಈಗಾಗಲೇ ತನ್ನ ನಟನಾ ಚಾತರ್ಯವನ್ನು ಪ್ರದರ್ಶಿಸಿದ್ದಾರೆ.

ನಿರ್ದೇಶಕ ರಾಜಮೌಳಿ ಮತ್ತು ಆರ್.ಆರ್.ಆರ್. ಚಿತ್ರತಂಡ ಟ್ಟಿಟ್ಟರ್ ಮೂಲಕ ಈ ಅಧಿಕೃತ ಘೋಷಣೆಯನ್ನು ಇಂದು ಮಾಡಿದೆ. ಈ ಚಿತ್ರದಲ್ಲಿ ಒಲಿವಿಯಾ ಮೋರಿಸ್ ಅವರು ಜೆನಿಫರ್ ಪಾತ್ರವನ್ನು ನಿಭಾಯಿಸಲಿದ್ದಾರೆ, ರೇ ಸ್ವೀವನ್ಸನ್ ಸ್ಕಾಟ್ ಪಾತ್ರಕ್ಕೆ ಜೀವ ತುಂಬಿದರೆ, ಅಲಿಸನ್ ಡೂಡಿ ಲೇಡಿ ಸ್ಕಾಟ್ ಪಾತ್ರವನ್ನು ನಿಭಾಯಿಸಲಿದ್ದಾರೆ.

ಸ್ವಾತಂತ್ರ್ಯಪೂರ್ವದ ಸಂಗ್ರಾಮ ಹಿನ್ನಲೆಯನ್ನು ಹೊಂದಿರುವ ಚಿತ್ರವಾಗಿ ಆರ್.ಆರ್.ಆರ್. ಮೂಡಿಬರುತ್ತಿದೆ. ಈ ಚಿತ್ರವು ಆ ಕಾಲದ ಇಬ್ಬರು ಮಹಾನ್ ವೀರರಾದ ಅಲ್ಲುರಿ ಸೀತಾರಾಂ ರಾಜು ಮತ್ತು ಕೊಮರಂ ಭೀಮ್ ಪಾತ್ರಗಳ ಮೇಲೆ ಚಿತ್ರಿತವಾಗುತ್ತಿದೆ. ಜ್ಯೂನಿಯರ್ ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜ ಅವರು ಈ ಇಬ್ಬರು ಐತಿಹಾಸಿಕ ವೀರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಅಜಯ್ ದೇವಗನ್, ಅಲಿಯಾ ಭಟ್ ಮತ್ತು ಸಮುಥಿರಕನಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುಮಾರು 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರ 2020ರ ವೇಳೆಗೆ ತೆರೆಕಾಣುವ ನಿರೀಕ್ಷೆ ಇದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ