ಎಂಟು ವರ್ಷಗಳ ಹಿಂದಿನ ಸ.ರೆ.ಗ.ಮ.ಪ. ಲಿಟ್ಲ್ ಚಾಂಪ್ ಡ್ರಗ್ ಅಡಿಕ್ಟ್ ಆಗಿದ್ದು ಹೇಗೆ?

ಸಣ್ಣ ಪ್ರಾಯದಲ್ಲೇ ಕೀರ್ತಿಯ ಶಿಖರವೇರಿದ ಅಝ್ಮತ್ ಹುಸೈನ್ ಮತ್ತೆ ಲೈಮ್ ಲೈಟಿನತ್ತ...

Team Udayavani, Oct 14, 2019, 10:33 PM IST

ನವದೆಹಲಿ: ಸ.ರೆ.ಗ.ಮ.ಪ ಲಿಟ್ಲ್ ಚಾಂಪ್ ಸಂಗೀತ ಸ್ಪರ್ಧೆಯ 2011ರ ಚಾಂಪಿಯನ್ ಅಝ್ಮತ್ ಹುಸೈನ್ ಇದೀಗ ಎಂಟು ವರ್ಷಗಳ ಬಳಿಕ ಇಂಡಿಯನ್ ಐಡಲ್ ಆಡಿಷನ್ ಗೆ ಆಯ್ಕೆಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಹುಸೈನ್ ಬದುಕು ಯಾವೆಲ್ಲಾ ರೀತಿಯಲ್ಲಿ ಏರಿಳಿತಗಳನ್ನು ಕಂಡಿತು ಎಂಬುದನ್ನು ಈ ಆಡಿಷನ್ ಸಂದರ್ಭದಲ್ಲಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

2011ರಲ್ಲಿ ಸ.ರೆ.ಗ.ಮ.ಪ. ಲಿಟ್ಲ್ ಚಾಂಪ್ ಪ್ರಶಸ್ತಿಯನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರಿಂದ ಸ್ವೀಕರಿಸಿದ ಕ್ಷಣದಿಂದ ಅಝ್ಮತ್ ಬದುಕು ಒಂದು ತಿರುವನ್ನು ಪಡೆದುಕೊಂಡಿತು. ಈ ಪುಟ್ಟ ಹುಡುಗನ ಧ್ವನಿಗೆ ಅಪಾರ ಬೇಡಿಕೆ ಬಂತು. ಹೀಗಾಗಿ ಅಝ್ಮತ್ ಈ ಸಮಯದಲ್ಲಿ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಹೋಗುತ್ತಾರೆ. ಇದರಿಂದ ಒಂದು ಮಟ್ಟದ ಸಂಪಾದನೆಯೂ ಆಗುತ್ತಾ ಅಝ್ಮತ್ ಕುಟುಂಬದ ಬದುಕು ಒಂದು ಹಂತಕ್ಕೆ ಸಾಗುತ್ತಿತ್ತು.

ಆದರೆ ಅಝ್ಮತ್ ಪ್ರಾಯಪ್ರಬುದ್ಧನಾಗುತ್ತಾ ಹೋದಂತೆ ಆತನ ಧ್ವನಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಾರಂಭಿಸಿತು. ಯಾವ ಸಿಹಿ ಧ್ವನಿಗೆ ಜನರು ಫಿದಾ ಆಗುತ್ತಿದ್ದರೋ ಆ ಧ್ವನಿ ಅಝ್ಮತ್ ನಿಂದ ದೂರವಾಗುತ್ತಾ ಹೊಯಿತು. ‘ಆತನ ಧ್ವನಿ ಕೆಟ್ಟದಾಗಿದೆ’ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಮೂಡುತ್ತಾ ಹೋದಂತೆ ಅಝ್ಮತ್ ಧ್ವನಿಗೆ ಬೇಡಿಕೆ ಕಡಿಮೆಯಾಯಿತು ಹಾಗೂ ಇದರಿಂದ ಆತನ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿತು. ಈ ಎಲ್ಲಾ ಬೆಳವಣಿಗೆಗಳು ಅಝ್ಮತ್ ನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತು ಮತ್ತು ಈತ ನಿಧಾನವಾಗಿ ಖಿನ್ನತೆಗೆ ಜಾರತೊಡಗಿದ.

ಮಾತ್ರವಲ್ಲದೇ ಇದೇ ಸಮಯದಲ್ಲಿ ಅಝ್ಮತ್ ಅದು ಹೇಗೋ ಕೆಟ್ಟ ಜನರ ಸಹವಾಸಕ್ಕೆ ಬಿದ್ದ. ಮತ್ತು ಇದರಿಂದಾಗಿ ಆತನಿಗೆ ಮಾದಕ ದ್ರವ್ಯ ಸೇವನೆಯ ಚಟವೂ ಅಂಟಿಕೊಂಡಿತು. ಈ ಎಲ್ಲಾ ವಿಚಾರವನ್ನು ಸ್ವತಃ ಅಝ್ಮತ್ ಹುಸೈನ್ ಅವರೇ ಇಂಡಿಯನ್ ಐಡಲ್ ಆಡಿಷನ್ ಸಂದರ್ಭದಲ್ಲಿ ತೀರ್ಪುಗಾರರಾದ ನೇಹಾ ಮತ್ತು ವಿಶಾಲ್ ದಡ್ಲಾನಿ ಅವರ ಮುಂದೆ ಬಹಿರಂಗಪಡಿಸಿದ್ದಾನೆ.

‘ಕೆಟ್ಟ ಜನರ ಸಂಗ ನನಗೆ ದೊರೆಯುತ್ತಿದ್ದಂತೆ ನಾನು ಡ್ರಗ್ ಅಡಿಕ್ಟ್ ಆದೆ. ನನ್ನ ಜೀವನವನ್ನೇ ಹಾಳು ಮಾಡಬೇಕೆಂದು ಬಯಸಿದ್ದವರು ಸದ್ದಿಲ್ಲದೇ ತಮ್ಮ ಉದ್ದೇಶವನ್ನು ಸಾಧಿಸಿಕೊಂಡು ಬಿಟ್ಟಿದ್ದರು’ ಎಂದು ಅಝ್ಮತ್ ಈ ಸಂದರ್ಭದಲ್ಲಿ ನೋವಿನಿಂದ ನುಡಿದಿದ್ದಾನೆ.

ಜೈಪುರ ಮೂಲದ ಅಝ್ಮತ್ ಹುಸೈನ್ 2011ರ ಸ.ರೆ.ಗ.ಮ.ಪ. ಸೀಸನ್ ನ ಜನಪ್ರಿಯ ಸ್ಪರ್ಧಿಗಳಲ್ಲಿ ಒಬ್ಬನಾಗಿದ್ದ. ಮತ್ತು ಈ ಪುಟ್ಟ ಬಾಲಕನ ಸ್ವರ ಆ ಸಮಯದಲ್ಲಿ ಕೇಳುಗರಿಗೆ ಮೋಡಿ ಮಾಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ