ದಿ.ನಟ ಸುಶಾಂತ್ ಸಿಂಗ್ ಸ್ನೇಹಿತ ಸಿದ್ಧಾರ್ಥ್ ಬಂಧನ
Team Udayavani, May 28, 2021, 1:37 PM IST
ಮುಂಬೈ : ಬಾಲಿವುಡ್ ನಲ್ಲಿ ಕಳೆದೊಂದು ವರ್ಷದಿಂದ ತೀವ್ರ ಸಂಚಲನ ಮೂಡಿಸಿರುವ ಡ್ರಗ್ಸ್ ಪ್ರಕರಣದಡಿ ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ರೂಮೇಟ್ ಆಗಿದ್ದ ಸಿದ್ಧಾರ್ಥ್ ಪಿತಾಣಿಯನ್ನು ಎನ್ ಸಿ ಬಿ ತಂಡ ಶುಕ್ರವಾರ ( ಮೇ.28) ಬಂಧಿಸಿದೆ.
ಕಳೆದ ವರ್ಷ ಜೂನ್ 14 ರಂದು ಮುಂಬೈನ ಬಾಂದ್ರಾ ಫ್ಲ್ಯಾಟ್ ನಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನ ಮೃತದೇಹವನ್ನು ಮೊದಲು ನೋಡಿದ್ದು ಸಿದ್ಧಾರ್ಥ್.
ಕಂಟೆಂಟ್ ಮ್ಯಾನೇಜರ್ ಆಗಿರುವ ಸಿದ್ಧಾರ್ಥ್ ಹಾಗೂ ಸುಶಾಂತ್ ಸ್ನೇಹಿತರಾಗಿದ್ದರು. ಕೆಲದಿನಗಳಿಂದ ಸುಶಾಂತ್ ಸಿಂಗ್ ನ ಫ್ಲ್ಯಾಟ್ ನಲ್ಲಿ ಈತ ಜೊತೆಗಿದ್ದ. ಸುಶಾಂತ್ ಆತ್ಮಹತ್ಯಗೆ ಶರಣಾಗುವ ಹಿಂದಿನ ರಾತ್ರಿ 1 ಗಂಟೆಗೆ ಈತನನ್ನು ಭೇಟಿಯಾಗಿದ್ದ.
ಇನ್ನು ಸುಶಾಂತ್ ಸಿಂಗ್ ಸಾವಿನ ನಂತರ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ನಟನ ಸಾವಿಗೂ ಡ್ರಗ್ಸ್ ಮಾಫಿಯಾಗೂ ಸಂಬಂಧ ಇದೆ ಎನ್ನುವ ದೃಷ್ಠಿಕೋನದಲ್ಲಿ ಪೊಲೀಸ್ ತನಿಖೆ ಶುರುವಾಯಿತು. ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿರುವ ಎನ್ ಸಿ ಬಿ ತಂಡ ತನಿಖೆ ವೇಳೆ ಡ್ರಗ್ಸ್ ಪ್ರಕರಣದಲ್ಲಿ ಸಿದ್ಧಾರ್ಥ್ ಲಿಂಕ್ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಆತನನ್ನು ಹೈದರಾಬಾದಿನಲ್ಲಿ ಬಂಧಿಸಿ, ಮುಂಬೈಗೆ ಕರೆ ತರುತ್ತಿದೆ.