‘ಝೋಯಾ ಫ್ಯಾಕ್ಟರ್’ ನಲ್ಲಿ ಟಿಕ್ ಟಾಕ್ ಸ್ಟಾರ್ ಜೂನಿಯರ್ ವಿರಾಟ್ ಕೊಹ್ಲಿ!

ಕ್ರಿಕೆಟಿಗರ ವಿಚಿತ್ರ ನಂಬುಗೆಯ ಸುತ್ತ ಹೆಣೆದಿರುವ ಚಿತ್ರದ ಪ್ರಮೋಶನಲ್ ವಿಡಿಯೋದಲ್ಲಿ ಗೌರವ್ ಅರೋರಾ

Team Udayavani, Sep 10, 2019, 4:30 PM IST

ಚೀನಾದ ಮೂಲದ ವಿಡಿಯೋ ಶೇರಿಂಗ್ ಆ್ಯಪ್ ಆಗಿರುವ ಟಿಕ್ ಟಾಕ್ ಹಲವಾರು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಈ ಟಿಕ್ ಟಾಕ್ ನಲ್ಲಿ ವಿಡಿಯೋ ಶೇರ್ ಮಾಡುವ ಹುಚ್ಚಿಗೆ ಬಿದ್ದ ಹಲವರು ತಮ್ಮ ಪ್ರಾಣಕ್ಕೇ ಕುತ್ತು ತಂದುಕೊಂಡಿರುವ ಘಟನೆಗಳೂ ವರದಿಯಾಗಿವೆ.

ಆದರೆ ಇದೇ ಟಿಕ್ ಟಾಕ್ ಮೂಲಕ ಇನ್ನು ಕೆಲವರು ಸ್ಟಾರ್ ಗಳಾಗಿ ಹೊರಹೊಮ್ಮಿದ್ದಾರೆ ಮಾತ್ರವಲ್ಲದೇ ನಟನಾ ಕ್ಷೇತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ಉದಾಹರಣೆಗಳಿವೆ.

ಈ ಟಿಕ್ ಟಾಕ್ ನಲ್ಲಿ ಸೆಲೆಬ್ರಿಟಿಗಳ ಚಹರೆಯನ್ನು ಹೋಲುವ ವ್ಯಕ್ತಿಗಳಿಗೆ ಭಾರೀ ಬೇಡಿಕೆ ಇದೆ. ಸಿನೇಮಾ ನಟ ನಟಿಯರ ತದ್ರೂಪುಗಳು ಮತ್ತು ಕ್ರಿಕೆಟ್ ಸ್ಟಾರ್ ಗಳ ತದ್ರೂಪಿಗಳು ಟಿಕ್ ಟಾಕ್ ನಲ್ಲಿ ಭಾರೀ ಬೆಂಬಲಿಗರನ್ನು ಹೊಂದಿದ್ದಾರೆ. ಅಂತವರಲ್ಲಿ ಒಬ್ಬರಾಗಿರುವ ಗೌರವ್ ಅರೋರಾ ಅವರು ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರ ತದ್ರೂಪಿಯಾಗಿ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದಾರೆ. ಮಾತ್ರವಲ್ಲದೇ ಗೌರವ್ ಅವರನ್ನು ಟಿಕ್ ಟಾಕ್ ನ ವಿರಾಟ್ ಕೊಹ್ಲಿ ಎಂದೇ ಕರೆಯಲಾಗುತ್ತದೆ.

ಇದೀಗ ವಿಷಯ ಏನಪ್ಪಾ ಅಂದ್ರೆ ಅಭಿಷೇಕ್ ಶರ್ಮಾ ನಿರ್ದೇಶನದ ಬಾಲಿವುಡ್ ಚಿತ್ರ ‘ಝೋಯಾ ಫ್ಯಾಕ್ಟರ್’ನ ಪ್ರಚಾರ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರವನ್ನು ನಿಭಾಯಿಸುವ ಅವಕಾಶ ಗೌರವ್ ಪಾಲಾಗಿದೆ. ಅನುಜಾ ಚೌಹಾಣ್ ಬರೆದಿರುವ ಝೋಯಾ ಫ್ಯಾಕ್ಟರ್ ಎಂಬ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ.

2011ರಲ್ಲಿ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾದ ಕಥೆಯನ್ನು ಹೊಂದಿರುವ ಈ ಚಿತ್ರದ ಪ್ರಚಾರ ವಿಡಿಯೋ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ.


ಈ ವಿಡಿಯೋದಲ್ಲಿ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿರುವ ವಿರಾಟ್ ಕೊಹ್ಲಿಯ ಪಾತ್ರವನ್ನು ಗೌರವ್ ನಿಭಾಯಿಸಿದ್ದಾರೆ. ತಾನು ಬ್ಯಾಟಿಂಗ್ ಮಾಡಲು ಹೊರಡುವ ಮುನ್ನ ಝೋಯಾ ಚಿತ್ರವಿರುವ ಪೆಂಡೆಂಟ್ ಅನ್ನು ಚುಂಬಿಸಿ ತನ್ನ ಎಂದಿನ ಶೈಲಿಯಲ್ಲಿ ಬ್ಯಾಟನ್ನು ಎರಡೂ ಕೈಗಳಿಂದ ತಿರುಗಿಸಿ ಬ್ಯಾಟಿಂಗ್ ಗೆ ಹೊರಡುವ ದೃಶ್ಯ ಇದರಲ್ಲಿದೆ.

ಕ್ರಿಕೆಟ್ ಆಟಗಾರರಲ್ಲಿ ಹೆಚ್ಚಿನವರು ತಮ್ಮದೇ ಆದ ವಿಶಿಷ್ಟ ನಂಬಿಕೆಯನ್ನು ಅನುಸರಿಸುತ್ತಾರೆ. ಇನ್ನು 2011ರ ವಿಶ್ವಕಪ್ ಕ್ರಿಕೆಟ್ ಕೂಟದ ಸಂದರ್ಭದಲ್ಲಿ ಜಾಹಿರಾತು ಎಕ್ಸಿಕ್ಯೂಟಿವ್ ಆಗಿದ್ದ ಝೋಯಾ ಸೋಲಂಕಿ ಎಂಬ ಯುವತಿಯೊಬ್ಬಳು ಹೇಗೆ ಟೀಂ ಇಂಡಿಯಾ ಪಾಲಿಗೆ ಅದೃಷ್ಟದ ವಿಷಯವಾಗಿದ್ದಳು ಎಂಬ ಹಿನ್ನಲೆಯಲ್ಲಿ ಈ ಚಿತ್ರ ತಯಾರಾಗಿದೆ.

ಈ ಚಿತ್ರದಲ್ಲಿ ಸೋನಂ ಕಪೂರ್ ಝೋಯಾ ಸೋಲಂಕಿಯ ಪಾತ್ರವನ್ನು ನಿಭಾಯಿಸಿದ್ದಾರೆ ಮತ್ತು ಮಲಯಾಲಂ ಸೂಪರ್ ಸ್ಟಾರ್ ಮಮ್ಮೂಟ್ಟಿ ಅವರ ಪುತ್ರ ದಲ್ಕ್ವೇರ್ ಸಲ್ಮಾನ್ ಝೋಯಾ ಪ್ರಿಯಕರ ಮತ್ತು ಭಾರತೀಯ ಕ್ರಿಕೆಟ್ ತಂಡದ ಕಪ್ತಾನನ ಪಾತ್ರವನ್ನು ನಿಭಾಯಿಸಿದ್ದಾರೆ.

ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಈ ವಿಡಿಯೋವನ್ನು ವಿರಾಟ್ ಕೊಹ್ಲಿ ಅವರು ನೋಡಿದ್ದಾರೆಯೇ ಎಂಬುದು…!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ