ನೋಡುಗರಿಗೆ ಇಲ್ಲುಂಟು ನಗುವ ಅವಕಾಶ
ಚಿತ್ರ ವಿಮರ್ಶೆ
Team Udayavani, Dec 21, 2019, 7:05 AM IST
ನಾಯಕ – “ಜಾನು ನನ್ನ ನಂಬ್ತೀಯಾ..’
ನಾಯಕಿ – “ನಿನ್ನ ನಂಬದೆ ಯಾರನ್ನ ನಂಬಲಿ..’
ನಾಯಕ – “ಇನ್ನು ಮೂರು ಗಂಟೆಯಲ್ಲಿ ಚೈನ್ ತಂದುಕೊಡ್ತೀನಿ…’
ನಾಯಕ ಮತ್ತು ನಾಯಕಿ ನಡುವೆ ಈ ಮಾತುಕತೆ ನಡೆಯುವ ಹೊತ್ತಿಗೆ, ನಾಯಕಿಯ ಬರ್ತ್‌ಡೇಗೆ ಅವಳಮ್ಮ ಕೊಟ್ಟ ಗೋಲ್ಡ್ ಚೈನ್ ಘಟನೆಯೊಂದರಲ್ಲಿ ಕಳೆದಿರುತ್ತೆ. ಅಂಥದ್ಧೇ ಚೈನ್ ತಂದು ಕೊಡ್ತೀನಿ ಅಂತ ಹೊರಡುವ ನಾಯಕ, ಒಂದಷ್ಟು ಇಕ್ಕಟ್ಟಿಗೆ ಸಿಲುಕುತ್ತಾನೆ. ಆ ಇಕ್ಕಟ್ಟಿನಲ್ಲಿರುವ “ಮಜ’ ಅನುಭವಿಸಬೇಕಾದರೆ, ಸಿನಿಮಾ ನೋಡುವ “ಅವಕಾಶ’ ಮಿಸ್ ಮಾಡಿಕೊಳ್ಳಬೇಡಿ. ಇಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ಮನರಂಜನೆ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಹೌದು, ಒಂದು ಸರಳ ಕಥೆಯನ್ನು ಎಷ್ಟು ಸೊಗಸಾಗಿ ಹೆಣೆಯಬಹುದೋ, ಎಷ್ಟು ಹಾಸ್ಯಮಯವಾಗಿ ತೋರಿಸಬಹುದೋ, ಎಷ್ಟು ಎಮೋಷನ್ಸ್‌ಗೆ ಜಾಗ ಕೊಡಬಹುದೋ ಅದೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ, ರುಚಿಕಟ್ಟಾದ ಚಿತ್ರ ಕಟ್ಟಿಕೊಡಲಾಗಿದೆ. ಚಿತ್ರಕಥೆಯೊಂದಿಗೆ ಸರಾಗವಾಗಿ ಸಾಗುವ ಚಿತ್ರದಲ್ಲಿ ಒಂದಷ್ಟು ಎಡವಟ್ಟುಗಳು ಕಾಣಸಿಗುತ್ತವೆ. ಆದರೆ, ಆಗಾಗ ಮಜವೆನಿಸುವ ಹಾಸ್ಯ ದೃಶ್ಯಗಳು, ಡೈಲಾಗ್‌ಗಳು ಮತ್ತು ಹಾಡುಗಳು ಆ ಎಡವಟ್ಟುಗಳನ್ನು ಪಕ್ಕಕ್ಕಿಡುವಂತೆ ಮಾಡುತ್ತವೆ.
ಮೊದಲರ್ಧ ಸಾಂಗೋಪವಾಗಿ ನಡೆಯುವ ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ಕ್ರಿಕೆಟ್ ಬೆಟ್ಟಿಂಗ್ ಎಪಿಸೋಡ್ ದೃಶ್ಯವನ್ನು ಸಾಧ್ಯವಾದಷ್ಟು ಮೊಟಕುಗೊಳಿಸಬಹುದಿತ್ತು. ಬೆಟ್ಟಿಂಗ್ ದೃಶ್ಯ ಒಂದಷ್ಟು ತಾಳ್ಮೆ ಪರೀಕ್ಷಿಸುತ್ತದೆ ಅನ್ನುವುದು ಬಿಟ್ಟರೆ, ಚಿತ್ರದ ಬಗ್ಗೆ ಬೇರೇನೂ ತಕರಾರಿಲ್ಲ. ಕಥೆಗೆ ತಕ್ಕಂತೆಯೇ ಪಾತ್ರಗಳಿವೆ. ಇಲ್ಲಿ ಮೊದಲರ್ಧ ಸ್ವಲ್ಪ ಅನುಸರಿಸಿಕೊಂಡು ನೋಡಿದವರಿಗೆ ದ್ವಿತಿಯಾರ್ಧ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ. ಅದಕ್ಕೆ ಕಾರಣ, ನಿರೂಪಣೆ ಹಾಗು ಸನ್ನಿವೇಶಕ್ಕೆ ತಕ್ಕಂತೆ ರೂಪುಗೊಳ್ಳುವ ಪಾತ್ರಗಳು.
ಮೊದಲೇ ಹೇಳಿದಂತೆ ಇಲ್ಲಿ ಕಥೆ ತುಂಬಾ ಸಿಂಪಲ್. ನಮ್ಮ ನಡುವೆ ನಡೆಯೋ ಘಟನೆಗಳೇನೋ ಎಂಬಂತೆ ಬಿಂಬಿಸಿರುವ ನಿರ್ದೇಶಕರು ಅಷ್ಟೇ ಕಲರ್‌ಫುಲ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕೆಲ ಸನ್ನಿವೇಶಗಳಿಗೆ ಸಣ್ಣದ್ದೊಂದು ಕತ್ತರಿ ಹಾಕುವ ಅವಕಾಶವಿತ್ತು. ಆದರೂ, ಅಲ್ಲೊಂದು ಹಾಡು, ಹಾಸ್ಯದೃಶ್ಯ ಇತ್ಯಾದಿ ಕಾಣಿಸಿಕೊಂಡು ಸಮಾಧಾನಿಸುತ್ತದೆ. ಇಲ್ಲಿ ಚಿತ್ರಕಥೆ ಎಷ್ಟೊಂದು ವೇಗವಾಗಿದೆಯೋ, ಅಷ್ಟೇ ವೇಗದಲ್ಲಿ ಪಾತ್ರಗಳೂ ಓಡಿವೆ, ಹಿನ್ನೆಲೆ ಸಂಗೀತವೂ ಆ ಓಟಕ್ಕೆ ಹೆಗಲು ಕೊಟ್ಟಿದೆ. ಛಾಯಾಗ್ರಾಹಕರು ಕೂಡ ಅಷ್ಟೇ ವೇಗವಾಗಿ “ಧಮ್’ ಕಟ್ಟಿರುವುದು ಕಾಣುತ್ತದೆ.
ಒಂದೆರೆಡು ದೃಶ್ಯಗಳನ್ನು ಹೊರತುಪಡಿಸಿದರೆ, ನೋಡುಗರಿಗೆ ಖುಷಿಪಡುವ ಅವಕಾಶವಂತೂ ಇಲ್ಲುಂಟು. ನಾಯಕನ ಅಮ್ಮನ ಆರೋಗ್ಯಕ್ಕಾಗಿ ಅಪ್ಪ ಸಾಕಷ್ಟು ಸಾಲ ಮಾಡಿದಾತ. ಅದು ಎಷ್ಟರಮಟ್ಟಿಗೆಂದರೆ, ಬೆಳಗಾಯಿತೆಂದರೆ ಸಾಲಗಾರರು ಮನೆಗೆ ಬರುವಷ್ಟು, ದಾರೀಲಿ ನಡೆದರೆ, ಸಿಕ್ಕವರೆಲ್ಲ ಸಾಲ ವಾಪಾಸ್ ಯಾವಾಗ ಕೊಡ್ತೀಯಪ್ಪ ಎಂದು ಕೇಳುವಷ್ಟು. ಅಷ್ಟಾದರೂ, ತಾಳ್ಮೆಯಿಂದಲೇ ಎಲ್ಲರನ್ನೂ ಸಮಾಧಾನಿಸಿ ಕಳುಹಿಸುವ ವ್ಯಕ್ತಿತ್ವ ನಾಯಕನ ಅಪ್ಪನದು. ಅತ್ತ ನಾಯಕ ತಾನು ಇಷ್ಟಪಡುವ ಹುಡುಗಿ ಗೋಲ್ಡ್ ಚೈನ್ ಕಳೆದುಕೊಂಡಾಗ, ಆಕೆ ಪಡುವ ಆತಂಕ,
ಅಳು ನೋಡಲಾಗದೆ, ತಾನು ಚೈನ್ ತಂದುಕೊಡ್ತೀನಿ ಎಂದು ಮಾತು ಕೊಟ್ಟು ತನ್ನ ಸ್ನೇಹಿತನ ಜೊತೆ ಒಂದು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಅಡ್ಡಕ್ಕೆ ಹೋಗುತ್ತಾನೆ. ಆ ಬೆಟ್ಟಿಂಗ್‌ನಲ್ಲಿ ಸೋತು, ಅಲ್ಲೂ ಸಾಲದ ಹೊರೆ ಹೊರುತ್ತಾನೆ. ಬೆಳಗ್ಗೆ ಆ ಸಾಲ ತೀರಿಸಲೇಬೇಕು, ಅತ್ತ ತನ್ನ ಹುಡುಗಿಯ ಚೈನ್ ತಂದುಕೊಡ ಬೇಕು, ಇಕ್ಕಟ್ಟಿನಲ್ಲೇ ಸಿಗುವ ನಾಯಕನಿಗೆ ಒಂದಷ್ಟು ಪಾತ್ರಗಳು ಜೊತೆಯಾಗುತ್ತವೆ. ಆಮೇಲೆ ಏನಾಗುತ್ತೆ ಅನ್ನೋದೇ ಮಜವಾದ ಟ್ವಿಸ್ಟು. ಅದನ್ನು ನೋಡುವ ಕುತೂಹಲವಿದ್ದರೆ, “ಸುವರ್ಣಾವಕಾಶ’ ಮಿಸ್ ಮಾಡ್ಕೊಬೇಡಿ.
ರಿಷಿ ಇಲ್ಲಿ ತನ್ನ ಲವಲವಿಕೆಯ ನಟನೆ ಜೊತೆ ಇಷ್ಟವಾಗುತ್ತಾರೆ. ಫೈಟ್‌ನಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ, ಚೇಸಿಂಗ್ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅಸಹಾಯಕ ತಂದೆಯಾಗಿ, ಸಾಲವಿದ್ದರೂ ತಲೆಕೆಡಿಸಿಕೊಳ್ಳದ ವ್ಯಕ್ತಿಯಾಗಿ ದತ್ತಣ್ಣ ಸೈ ಎನಿಸಿಕೊಂಡಿದ್ದಾರೆ. ಸಿಂಗಲ್ ಹ್ಯಾಂಡ್ ಶಿವ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದರೆ, ಯೇಸಪ್ಪ ಪಾತ್ರ ಮೂಲಕ ಮಿತ್ರ ಕಚಗುಳಿ ಇಡುತ್ತಾರೆ. ಸಿದ್ದು ಮೂಲಿಮನೆ, ಧನ್ಯಾ, ಶಾಲಿನಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತದ ಎರಡು ಹಾಡು ಚೆನ್ನಾಗಿದೆ. ವಿಘ್ನೇಶ್‌ರಾಜ್ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಸಾರ್ವಜನಿಕರಿಗೆ ಸುವರ್ಣಾವಕಾಶ
ನಿರ್ಮಾಣ: ದೇವರಾಜ, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ
ನಿರ್ದೇಶನ: ಅನೂಪ್ ರಾಮಸ್ವಾಮಿ
ತಾರಾಗಣ: ರಿಷಿ, ಧನ್ಯಾ, ರಂಗಾಯಣ ರಘು, ದತ್ತಣ್ಣ, ಮಿತ್ರ, ಸಿದ್ದು ಮೂಲಿಮನೆ, ಶಾಲಿನಿ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿತ್ರ ವಿಮರ್ಶೆ: ಫಿಸಿಕ್ಸ್ ಟೀಚರ್ ನ ಸಸ್ಪೆನ್ಸ್ ಹಾದಿ
“ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರ ವಿಮರ್ಶೆ: ಇದು ಕಾಣೆಯಾದವರ ಜಾಲಿರೈಡ್
‘ಸೀತಾಯಣ’ ಚಿತ್ರ ವಿಮರ್ಶೆ: ಥ್ರಿಲ್ಲರ್ ಟ್ರ್ಯಾಕ್ ನಲ್ಲಿ ಪ್ರೇಮಾಯಣ
‘ವೀಲ್ ಚೇರ್ ರೋಮಿಯೋ’ ಚಿತ್ರ ವಿಮರ್ಶೆ; ವೀಲ್ಚೇರ್ನಿಂದ ಮೇಲೇಳುವ ಸಿನಿಮಾವಿದು…
‘ಟ್ವೆಂಟಿ ಒನ್ ಅವರ್’ ಚಿತ್ರ ವಿಮರ್ಶೆ: ನಿಗೂಢ ಇಪ್ಪತ್ತೂಂದು ಗಂಟೆ