ಆತ್ಮದ ಮೊಗದಲ್ಲಿ ಮಂದ ಹೊಳಪು

ಚಿತ್ರ ವಿಮರ್ಶೆ

Team Udayavani, Aug 3, 2019, 3:01 AM IST

“ಈ ಜಾಗದಲ್ಲಿ ಒಂದು ರೆಸಾರ್ಟ್‌ ಕಟ್ಟಿಸಬೇಕಂತ ಇದ್ದೀನಿ. ಸ್ವಲ್ಪ ವಾಸ್ತು ನೋಡಿ ಹೇಳಿ…’ ಚಿತ್ರದ ಆರಂಭದಲ್ಲೇ ಆ ಜಾಗದ ಮಾಲೀಕ, ಶಾಸ್ತ್ರಿಯೊಬ್ಬರಿಗೆ ಈ ಮಾತನ್ನು ಹೇಳುತ್ತಾನೆ. ಜಾಗ ಪರಿಶೀಲಿಸುವ ಆ ಶಾಸ್ತ್ರಿ, “ಮುಂದೊಂದು ದಿನ ಇಲ್ಲಿ ಲಕ್ಷ್ಮಿ ತುಂಬಿ ತುಳುಕುತ್ತಾಳೆ. ತಾಂಡವ ಆಡುತ್ತಾಳೆ..’ ಎಂದು ಹೇಳುತ್ತಿದ್ದಂತೆಯೇ, ವರ್ಷದ ಬಳಿಕ ಅಲ್ಲೊಂದು ರೆಸಾರ್ಟ್‌ ತಲೆ ಎತ್ತಿರುತ್ತೆ. ಆದರೆ, ಅಲ್ಲಿ ಲಕ್ಷ್ಮಿ ತಾಂಡವ ಆಡುತ್ತಾಳ್ಳೋ ಇಲ್ಲವೋ ಅನ್ನೋದೇ ಸಸ್ಪೆನ್ಸ್‌. ಇಷ್ಟಕ್ಕೂ ಇಲ್ಲಿ ರೆಸಾರ್ಟ್‌ ಅಂದಮೇಲೆ ಅಲ್ಲೊಂದು ಕುತೂಹಲ ಇದ್ದೇ ಇರುತ್ತೆ.

ಆ ರೆಸಾರ್ಟ್‌ಗೆ ಮೂವರು ಹುಡುಗರು, ಮೂವರು ಹುಡುಗಿಯರು ಎಂಟ್ರಿಯಾಗುತ್ತಾರೆ. ಕತ್ತಲ ರಾತ್ರಿಯಲ್ಲಿ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಚಿತ್ರದ ಹೈಲೈಟ್‌. ಅಲ್ಲಿಗೆ ಇದೊಂದು ದೆವ್ವದ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. “ವಜ್ರಮುಖಿ’ ಒಂದು ಹಾರರ್‌ ಚಿತ್ರ. ಹಾಗಂತ, ಇಲ್ಲಿ ಬೆಚ್ಚಿ ಬೀಳಿಸುವ ದೆವ್ವ, ಭೂತ, ಪಿಶಾಚಿಗಳಿಲ್ಲ. ಬದಲಾಗಿ, ಸ್ವಲ್ಪ ಹೆದರಿಸುವ, ಅಷ್ಟೇ ನಗಿಸುವ, ಅಳುವ ಮತ್ತು ಆಗಾಗ ಅಳಿಸುವ ದೆವ್ವ ಇದೆ. ಅದೊಂದು ಹೆಣ್ಣು ದೆವ್ವ ಅನ್ನೋದು ಮತ್ತೂಂದು ವಿಶೇಷ.

ಹಾಗಾದರೆ, ಆ ಹೆಣ್ಣು ದೆವ್ವ ಯಾಕೆ ಹಾಗೆಲ್ಲಾ ಮಾಡುತ್ತೆ ಎಂಬ ಪ್ರಶ್ನೆಗೆ ಉತ್ತರ, ಸೇಡು. ಯಾವುದೇ ಹಾರರ್‌ ಚಿತ್ರಗಳನ್ನು ಗಮನಿಸಿದರೂ, ಅಲ್ಲಿ ಸೇಡು ತೀರಿಸಿಕೊಳ್ಳುವ ಆತ್ಮ ಇದ್ದೇ ಇರುತ್ತೆ. ಇಲ್ಲೂ ಅದು ಮುಂದುವರೆದಿದೆ ಅನ್ನುವುದು ಬಿಟ್ಟರೆ, ಬೇರೇನೂ ವಿಶೇಷತೆಗಳಿಲ್ಲ. ಹಾಗಾಗಿ ಹಾರರ್‌ ಸಿನಿಮಾಗಳ ಸಾಲಿಗೆ ಇದೂ ಒಂದಷ್ಟೇ. ಕಥೆಯಲ್ಲಿ ಹೇಳಿಕೊಳ್ಳುವಂತಹ ಗಟ್ಟಿತನವಿಲ್ಲ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇರಬೇಕಿತ್ತು. ಆದರೆ, ಒಂದು ಹಾರರ್‌ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ.

ಗ್ರಾಫಿಕ್ಸ್‌ ಸಿನಿಮಾದ ಹೈಲೈಟ್‌ಗಳಲ್ಲೊಂದು, ಚಿತ್ರದ ಹಿನ್ನೆಲೆ ಸಂಗೀತಕ್ಕಿನ್ನೂ ಹೆದರಿಸುವ ತಾಕತ್ತು ಬೇಕಿತ್ತು. ಅದಕ್ಕೆ ತಕ್ಕಂತಹ ಎಫೆಕ್ಟ್ಸ್ ಕೂಡ ಇರಬೇಕಿತ್ತು. ರಾತ್ರಿ ಹೊತ್ತು ಸಿಂಗಾರ ಮಾಡಿಕೊಂಡು ಬಂದು ಕಾಡುವ ದೆವ್ವದಲ್ಲೂ, ಹೆದರಿಸುವ ಗುಣಗಳು ಕಮ್ಮಿ ಇದೆ ಎನಿಸುತ್ತವೆ. ಹಾಗಾಗಿ, ನೋಡುಗರಿಗೆ ಅಲ್ಲಲ್ಲಿ ಇದು ಹಾರರ್‌ ಸಿನಿಮಾನೋ, ಹಾಸ್ಯ ಸಿನಿಮಾನೋ ಎಂಬ ಸಣ್ಣದ್ದೊಂದು ಗೊಂದಲ ಕಾಡದೇ ಇರದು. ಮೊದಲರ್ಧ ಮಂದಗತಿಯಲ್ಲೇ ಸಾಗುವ ಚಿತ್ರ ದ್ವಿತಿಯಾರ್ಧದಲ್ಲೊಂದಷ್ಟು ವೇಗ ಪಡೆದುಕೊಳ್ಳುತ್ತೆ.

ಅಲ್ಲಲ್ಲಿ ಒಂದಷ್ಟು ತಿರುವುಗಳು ಎದುರಾಗಿ ಮುಂದೇನಾಗಬಹುದೋ ಎಂಬ ಸಣ್ಣ ಕುತೂಹಲಕ್ಕೆ ಕಾರಣವಾಗುವುದಂತೂ ಸತ್ಯ. ಸಿನಿಮಾ ಎಲ್ಲೋ ಒಂದು ಕಡೆ ಹಳಿ ತಪ್ಪುತ್ತಿದೆ ಅಂದುಕೊಳ್ಳುವಷ್ಟರಲ್ಲೊಂದು ಹಾಡು ಕಾಣಿಸಿಕೊಂಡು, ಚಿಕ್ಕದ್ದೊಂದು ಸಮಾಧಾನಕ್ಕೆ ಕಾರಣವಾಗುತ್ತೆ. ಆರು ಜನರ ನಡುವೆ ಇರುವ ಹಾಸ್ಯಪಾತ್ರವೊಂದು ಎಷ್ಟು ಬೇಕೋ ಅಷ್ಟು ನಗುವಿಗೆ ಕಾರಣವಾಗುವ ಮೂಲಕ ನೋಡುಗರಲ್ಲಿ ಸಣ್ಣ ನಗೆಬುಗ್ಗೆ ಎಬ್ಬಿಸುವಲ್ಲಿ ಯಶಸ್ವಿ ಎನ್ನಬಹುದು ಬಿಟ್ಟರೆ, ದೆವ್ವಕ್ಕೆ ಇನ್ನಷ್ಟು ಪವರ್‌ ತುಂಬಬಹುದಾಗಿತ್ತು.

ನೋಡುಗರನ್ನೂ ಕೂಡ ಬೆಚ್ಚಿಬೀಳಿಸಬಹುದಾದಂತಹ ಅಂಶಗಳನ್ನು ಸೇರಿಸಬಹುದಿತ್ತು. ಮೊದಲೇ ಹೇಳಿದಂತೆ ಇಲ್ಲಿರುವ ಆತ್ಮ ಅಷ್ಟಾಗಿ ಹೆದರಿಸಲ್ಲ ಎಂಬುದನ್ನು ಬಿಟ್ಟರೆ, ಒಂದು ಅಂಶ ಮಾತ್ರ, ಸಮಾಜಕ್ಕೊಂದು ಸಂದೇಶ ಕೊಡುವಂತಿದೆ. ಅದರಲ್ಲೂ ಮಾಟ, ಮಂತ್ರ, ಮೂಢನಂಬಿಕೆಗಳಿಂದ ಯಾವುದೇ ಅಪರಾಧ ಮಾಡಬೇಡಿ ಎಂಬ ಅಂಶದ ಅರಿವಾಗುವುದರ ಜೊತೆಗೆ, ಒಂದಷ್ಟು ಮರುಕ ಹುಟ್ಟಿಸುತ್ತದೆ. ಆ ಅಂಶಗಳಷ್ಟೇ “ವಜ್ರಮುಖಿ’ ಆಕರ್ಷಣೆ ಎನ್ನಬಹುದು. ಕಥೆ ಬಗ್ಗೆ ಹೇಳುವುದಾದರೆ, “ವಜ್ರಮುಖಿ’ ರೆಸಾರ್ಟ್‌ಗೆ ಸಂಬಂಧಿಸಿದ ಮೂವರು ಕೊಲೆಯಾಗಿರುತ್ತಾರೆ.

ಆ ಕೊಲೆಗೆ ಕಾರಣ ಗೊತ್ತಿಲ್ಲ. ಆದರೆ, ಅಲ್ಲಿರುವ ಎಲ್ಲರಿಗೂ ಅಲ್ಲಿ ದೆವ್ವ ಇದೆ, ಆತ್ಮವೊಂದು ಓಡಾಡುತ್ತಿದೆ, ಅಮವಾಸ್ಯೆ ದಿನವೇ ಕೊಲೆಯಾಗುತ್ತಿದೆ ಎಂಬ ಭಯ ಇರುತ್ತೆ. ಅದ್ಯಾವ ವಿಷಯ ಗೊತ್ತಿರದ ಆರು ಮಂದಿ ಯುವಕ, ಯುವತಿಯರು ಆ ರೆಸಾರ್ಟ್‌ಗೆ ಹೋಗುತ್ತಾರೆ. ಅಲ್ಲಿ ಅವರಿಗೂ ದೆವ್ವ, ಆತ್ಮದ ಕಾಟ ಶುರುವಾಗುತ್ತೆ. ಆ ಆರು ಮಂದಿ ಇರುವ ರೆಸಾರ್ಟ್‌ಗೆ ಮಹಿಳಾ ತನಿಖಾಧಿಕಾರಿ ಎಂಟ್ರಿಯಾಗುತ್ತಾಳೆ. ಆಕೆ ಯಾಕೆ ಬರುತ್ತಾಳೆ. ಆ ಕೊಲೆಯ ಹಿಂದಿನ ರಹಸ್ಯ ಏನೆಂಬುದೇ ಚಿತ್ರದ ಕಥೆ. ಕುತೂಹಲವೇನಾದರೂ ಇದ್ದರೆ, “ವಜ್ರಮುಖಿ’ಯ ಸಣ್ಣಪುಟ್ಟ ಆರ್ಭಟ ನೋಡಿಕೊಂಡು ಬರಬಹುದು.

ನೀತು ಶೆಟ್ಟಿ ತನಿಖಾಧಿಕಾರಿಯಾಗಿ ತಕ್ಕಮಟ್ಟಿಗೆ ಇಷ್ಟವಾಗುತ್ತಾರೆ. ಹಾಗೆಯೇ, ದೆವ್ವ ಪಾತ್ರದಲ್ಲೂ ತಮ್ಮ ಶಕ್ತಿ ಮೀರಿ ಅರಚಾಡಿರುವುದು ಗೊತ್ತಾಗುತ್ತದೆ. ದಿಲೀಪ್‌ ಪೈ ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ “ಆತ್ಮ’ಕ್ಕೆ ವಂಚಿಸಿಲ್ಲ. ಉಳಿದಂತೆ ಸಂಜನಾ ಸೇರಿದಂತೆ ತೆರೆ ಮೇಲೆ ಬರುವ ಇತರೆ ಪಾತ್ರಗಳೆಲ್ಲವೂ ನಿರ್ದೇಶಕರ ಅಣತಿಯಂತೆಯೇ ನಟಿಸಿದಂತಿದೆ. ಮಂಗಳೂರು ರಾಘವೇಂದ್ರ ಅವರ ಹಾಸ್ಯದಲ್ಲಿ ಒಂದಷ್ಟು ಲವಲವಿಕೆ ತುಂಬಿದೆ. ರಾಜ್‌ ಭಾಸ್ಕರ್‌ ಸಂಗೀತದಲ್ಲೇನೂ ಸ್ವಾದವಿಲ್ಲ. ಪಿ.ಕೆ.ಹೆಚ್‌. ದಾಸ್‌ ಛಾಯಾಗ್ರಹಣದಲ್ಲಿ “ವಜ್ರಮುಖಿ’ಯ ಕತ್ತಲು, ಬೆಳಕಿನ ಆಟ, ಆರ್ಭಟ ಎಲ್ಲವೂ ಆಕರ್ಷಣೆಯಾಗಿದೆ.

ಚಿತ್ರ: ವಜ್ರಮುಖಿ
ನಿರ್ಮಾಣ: ಶಶಿಕುಮಾರ್‌
ನಿರ್ದೇಶನ: ಆದಿತ್ಯ ಕುಣಿಗಲ್‌
ತಾರಾಗಣ: ನೀತು ಶೆಟ್ಟಿ, ದಿಲೀಪ್‌ ಪೈ, ಸಂಜನಾ, ಶಶಿಕುಮಾರ್‌, ಮಂಗಳೂರು ರಾಘವೇಂದ್ರ ಇತರರು.

* ವಿಜಯ್‌ ಭರಮಸಾಗರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ