ಅಭಿಮಾನಿಯೊಬ್ಬಳ ಭಾವಲಹರಿ

ಚಿತ್ರ ವಿಮರ್ಶೆ

Team Udayavani, Aug 24, 2019, 3:01 AM IST

“ಅವನು ಧಾರಾವಾಹಿ ಹೀರೋ. ಹೆಸರು ದೃಶ್ಯ. ಅವಳು ಅವನ ಅಪ್ಪಟ ಅಭಿಮಾನಿ. ಹೆಸರು ಶಾಯರಿ. ಅವನ ವಾಸ ಬೆಂಗಳೂರು. ಆಕೆಯ ವಾಸ ಹೊನ್ನಾವರ ಸಮೀಪದ ಊರು. ಇವರಿಬ್ಬರಿಗೆ “ಫೇಸ್‌ಬುಕ್‌’ ಸೇತುವೆ. ಆ ಮೂಲಕ ಗೆಳೆತನ, ಮಾತುಕತೆ, ಭೇಟಿ ಇತ್ಯಾದಿ…’ ಮುಂದಾ…? ಎಲ್ಲವನ್ನೂ ಇಲ್ಲೇ ಹೇಳಿದರೆ, ಮಜಾ ಇರಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ, “ಫ್ಯಾನ್‌’ ರೆಗ್ಯುಲರ್‌ ಸಿನಿಮಾಗಳಿಗಿಂತ ಭಿನ್ನ. ಹೌದು, ಇಲ್ಲಿ ರೆಗ್ಯುಲರ್‌ ಕಥೆ ಇಲ್ಲ, ರೆಗ್ಯುಲರ್‌ ಫಾರ್ಮುಲಾವಿಲ್ಲ.

ರೆಗ್ಯುಲರ್‌ ನಟ, ನಟಿಯೂ ಇಲ್ಲ. ಎಲ್ಲದರಲ್ಲೂ ಫ್ರೆಶ್‌ ಎನಿಸುವ, ಬರೀ ಯೂಥ್ಸ್ ಅಷ್ಟೇ ಅಲ್ಲ, ಕುಟುಂಬ ಸಮೇತ ನೋಡಬಹುದಾದ ಅಪ್ಪಟ ಅಭಿಮಾನಿಯ ಅಭಿಮಾನದ ಸಿನಿಮಾ ಎಂದು ಮುಲಾಜಿಲ್ಲದೆ ಹೇಳಬಹುದು.ಮೊದಲೇ ಹೇಳಿದಂತೆ, ಇಲ್ಲಿ ಗಾಂಧಿನಗರದ ಸಿದ್ಧಸೂತ್ರಗಳಿಲ್ಲ. ಬದಲಾಗಿ ನಮ್ಮ ನಡುವೆ ನಡೆಯೋ ಕಥೆ ಎನಿಸುವಷ್ಟರ ಮಟ್ಟಿಗೆ ನಿರೂಪಿಸಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ.

ಸಾಮಾನ್ಯವಾಗಿ ಒಂದು ಲವ್‌ಸ್ಟೋರಿ ಅಂದಾಗ, ಮೊದಲ ನೋಟ, ಭೇಟಿ, ಮಾತುಕತೆ, ಆಕೆಗಾಗಿ ರೌಡಿಗಳನ್ನು ಹಿಗ್ಗಾಮುಗ್ಗಾ ಥಳಿಸುವ ಹೀರೋ, ಕೊನೆಗೆ ನಾಯಕಿ ಮನೆಯವರೇ ಅವರ ಲವ್‌ಗೆ ವಿಲನ್‌ ಎಂಬ ಕಥೆ ಕಾಮನ್‌. ಆದರೆ, “ಫ್ಯಾನ್‌’ ಇದ್ಯಾವುದೂ ಇಲ್ಲದೆ, ಒಂದು ನವಿರಾದ ಪ್ರೇಮಕಥೆಯೊಂದಿಗೆ ಭಾವನೆ, ಭಾವುಕತೆ ಜೊತೆಗೆ ಸಣ್ಣದ್ದೊಂದು ಸಂದೇಶ ಸಾರುವ ಚಿತ್ರವಾಗಿ ಆಪ್ತವೆನಿಸುತ್ತೆ. ಯಾಕೆ ಆಪ್ತ ಎಂಬುದಕ್ಕೆ “ಫ್ಯಾನ್‌’ ಭಾವಲಹರಿಯನ್ನೊಮ್ಮೆ ಕೇಳಿಬರಲ್ಲಡ್ಡಿಯಿಲ್ಲ.

ಇಲ್ಲೂ ಒಂದಷ್ಟು ತಪ್ಪುಗಳಿವೆ. ಹೆಲ್ಮೆಟ್‌ ಹಾಕ್ಕೊಂಡು, ಹುಡುಗಿಯೊಬ್ಬಳ ಸ್ಕೂಟಿ ಹಿಂಬದಿ ಕೂರುವ ಹುಡುಗನನ್ನು ಆಕೆ ಕೆಳಗಿಳಿಸದೆ, ಒಂದಷ್ಟು ಜಗಳವಾಡಿ ಕೊನೆಗೆ ಅವನನ್ನು ಕೂರಿಸಿಕೊಂಡೇ ನೇರ ತನ್ನ ಕಾಲೇಜ್‌ಗೆ ಕರೆದೊಯ್ಯುವ ದೃಶ್ಯ ಸ್ವಲ್ಪ ಅರಗಿಸಿಕೊಳ್ಳಲಾಗಲ್ಲ. ಅದು ಹೀರೋ ಬಿಲ್ಡಪ್‌ ಸೀನ್‌. ಅದನ್ನು ಬೇರೆ ರೀತಿಯೂ ತೋರಿಸಬಹುದಿತ್ತು. ಹಾಗಂತ, ಅರಗಿಸಿಕೊಳ್ಳಲಾಗದಷ್ಟು ತಪ್ಪುಗಳೇನಿಲ್ಲ. ಮೊದಲರ್ಧ ತಕ್ಕಮಟ್ಟಿಗೆ ತಾಳ್ಮೆ ಕೆಡುತ್ತದೆಯಾದರೂ, ಮಧ್ಯಂತರ ಬರುವ ಹೊತ್ತಿಗೆ ಅಲ್ಲೊಂದಷ್ಟು ತಿರುವುಗಳು ಎದುರಾಗಿ, ಕುತೂಹಲ ಮೂಡಿಸುತ್ತದೆ.

ದ್ವಿತಿಯಾರ್ಧ ಸಮಯ ಸಾಗುವುದೇ ಗೊತ್ತಾಗದ ರೀತಿ ಚಿತ್ರದಲ್ಲಿ ಲವಲವಿಕೆಯ ದೃಶ್ಯಗಳನ್ನಿಟ್ಟು, ನೋಡುಗರಲ್ಲಿ ಚಿಟಿಕೆಯಷ್ಟಿನ ಮಂದಹಾಸಕ್ಕೆ ಆ ಲೊಕೇಶನ್ಸ್‌ ಮತ್ತು ಅದನ್ನು ಅಷ್ಟೇ ಚೆನ್ನಾಗಿ ಕಟ್ಟಿಕೊಟ್ಟಿರುವ ಛಾಯಾಗ್ರಾಹಕರ ಶ್ರಮ ಕಾರಣವಾಗುತ್ತೆ. ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಇನ್ನಷ್ಟು ಪರಿಣಾಮಕಾರಿ ಎನಿಸುತ್ತಿತ್ತು. ಸಿನಿಮಾ ಅಂದಮೇಲೆ, ಕಮರ್ಷಿಯಲ್‌ ಅಂಶ ಬೇಕು. ಹಾಗಂತ, ವಿನಾಕಾರಣ ಬಿಲ್ಡಪ್ಸ್‌ ಇಟ್ಟು, ಹೀರೋಗೆ ಹೊಡೆದಾಡುವ ದೃಶ್ಯಗಳು ಅನಗತ್ಯವಾಗಿಲ್ಲ.

ಯಾರನ್ನೋ ಮೆಚ್ಚಿಸಬೇಕೆಂಬ ಕಾರಣಕ್ಕೆ ಐಟಂ ಡ್ಯಾನ್ಸ್‌, ನಂಬರ್‌ ಒನ್‌ ಸಾಂಗ್‌ ಕೂಡ ಬಯಸಲ್ಲ. ಇಲ್ಲೂ ಹಾಡುಗಳಿವೆ. ಆ ಪೈಕಿ ಎರಡು ಕೇಳಬೇಕೆನಿಸುತ್ತದೆ. ಒಂದು ಫೈಟೂ ಇದೆ. ಅದು ಕಥೆಗೆ ಪೂರಕ ಎನಿಸುತ್ತದೆ. ಉಳಿದಂತೆ ಬೇಕು ಅಂತಾನೇ ಹಾಸ್ಯ ದೃಶ್ಯವಾಗಲಿ, ಸಂಭಾಷಣೆಯಾಗಲಿ ಇಲ್ಲ. ಎಲ್ಲವೂ ದೃಶ್ಯಕ್ಕನುಗುಣವಾಗಿಯೇ ನಗಿಸುತ್ತಲೇ ಹೋಗುವ ಗುಣ ಚಿತ್ರದಲ್ಲಿದೆ. ಈ ಕಾರಣಕ್ಕೆ ಅಭಿಮಾನಿಯೊಬ್ಬಳ ಕಥೆ ಮತ್ತು ವ್ಯಥೆ ಇಷ್ಟವಾಗದೇ ಇರದು.

ಮೊದಲೇ ಹೇಳಿದಂತೆ ಇದು ಸೀರಿಯಲ್‌ ಹೀರೋ ಅಭಿಮಾನಿಯೊಬ್ಬಳ ಅಭಿಮಾನದ ಕಥೆ. ಧಾರಾವಾಹಿ ಹೀರೋನನ್ನು ಅತಿಯಾಗಿ ಇಷ್ಟಪಡುವ ಕಾಲೇಜು ಹುಡುಗಿಗೆ ಅವನಂದ್ರೆ ಅಚ್ಚುಮೆಚ್ಚು. ಧಾರಾವಾಹಿ ಶುರುವಾಗುವ ಮೊದಲೇ ಟಿವಿ ಮುಂದೆ ಕೂರುವ ಹುಚ್ಚು ಅಭಿಮಾನ ಆಕೆಯದು. ಹೇಗೋ ಆ ಹೀರೋನ ಫೇಸ್‌ಬುಕ್‌ ಫ್ರೆಂಡ್‌ ಆಗಿ, ಚಾಟಿಂಗ್‌ ಶುರುಮಾಡಿ, ವಾಟ್ಸಾಪ್‌ನಲ್ಲೂ ಮಾತುಕತೆ ಬೆಳೆಸುವ ಹಂತಕ್ಕೆ ಹೋಗುವ ಆಕೆಯ ಖುಷಿಗೆ ಪಾರವೇ ಇರಲ್ಲ.

ಅತ್ತ, ಆ ಧಾರಾವಾಹಿ ಚಿತ್ರೀಕರಣ ಹಳ್ಳಿಯೊಂದಕ್ಕೆ ಅದರಲ್ಲೂ ಕರಾವಳಿ ಭಾಗದಲ್ಲಿ ಚಿತ್ರೀಕರಿಸುವ ಹಂತ ತಲುಪಿದಾಗ, ಅವಳ ಕರಾವಳಿ ಊರು, ಅಲ್ಲಿನ ಪರಿಸರ, ಆಕೆಯ ದೊಡ್ಡ ಮನೆಯನ್ನೇ ಧಾರಾವಾಹಿ ತಂಡ ಆಯ್ಕೆ ಮಾಡುತ್ತೆ. ತಾನು ಇಷ್ಟಪಡುವ ಹೀರೋನ ಧಾರಾವಾಹಿ ತನ್ನ ಮನೆಯಲ್ಲೇ ಚಿತ್ರೀಕರಣ ಆಗುತ್ತೆ ಅಂದಾಗ, ಆಕೆಗೆ ಸ್ವರ್ಗ ಮೂರೇ ಗೇಣು. ಇಂತಿಪ್ಪ, ಆಕೆಗೂ ಆ ಹೀರೋ ಮೇಲೆ ಮೆಲ್ಲನೆ ಪ್ರೀತಿ ಶುರುವಾಗುತ್ತೆ. ಅವನಿಗೂ ಲವ್‌ ಆಗುತ್ತೆ. ಈ ನಡುವೆ ಅಲ್ಲಲ್ಲಿ ಟ್ವಿಸ್ಟ್‌ಗಳು ಬರುತ್ತವೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರದ ಸಾರಾಂಶ.

ಆರ್ಯನ್‌ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಬಾಡಿ ಲಾಂಗ್ವೇಜ್‌ನತ್ತ ಸ್ವಲ್ಪ ಗಮನಿಸಿದರೆ, ಒಳ್ಳೆಯ ಭವಿಷ್ಯವಿದೆ. ಇನ್ನು ಅದ್ವೀತಿ ಶೆಟ್ಟಿ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಇಡೀ ಚಿತ್ರದ ಕಥೆಯನ್ನೇ ತನ್ನ ಮೇಲೆ ಹೊತ್ತಿಕೊಂಡಿದ್ದರೂ, ಎಲ್ಲೂ ಭಾರ ಎನಿಸದಂತೆ ಲವಲವಿಕೆಯಲ್ಲೇ ಕೊಟ್ಟ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸಮೀಕ್ಷಾ, ವಿಜಯ ಕಾಶಿ, ರವಿಭಟ್‌, ಮಂಡ್ಯ ರಮೇಶ್‌, ಸ್ವಾತಿ, ನವೀನ್‌ ಡಿ. ಪಡೀಲ್‌ ಪಾತ್ರಗಳಿಗೆ ಮೋಸ ಮಾಡಿಲ್ಲ. ವಿಕ್ರಮ್‌, ಚಂದನ ಸಂಗೀತದ ಎರಡು ಹಾಡು ಚೆನ್ನಾಗಿವೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಚಿತ್ರದ ಇನ್ನೊಂದು ಪ್ಲಸ್‌. ಪವನ್‌ಕುಮಾರ್‌ ಛಾಯಾಗ್ರಹಣದಲ್ಲಿ ಕರಾವಳಿ ಸೊಬಗಿದೆ.

ಚಿತ್ರ: ಫ್ಯಾನ್‌
ನಿರ್ಮಾಣ: ಸವಿತ ಈಶ್ವರ್‌, ಶಶಿಕಿರಣ್‌, ರಾಜಮುಡಿ ದತ್ತ
ನಿರ್ದೇಶನ: ದರ್ಶಿತ್‌ ಭಟ್‌
ತಾರಾಗಣ: ಆರ್ಯನ್‌, ಅದ್ವೀತಿ ಶೆಟ್ಟಿ, ಸಮೀಕ್ಷಾ, ವಿಜಯ ಕಾಶಿ, ರವಿಭಟ್‌, ಮಂಡ್ಯ ರಮೇಶ್‌, ಸ್ವಾತಿ, ನವೀನ್‌ ಡಿ. ಪಡೀಲ್‌ ಇತರರು.

* ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ