ಕಮರೊಟ್ಟು ಮನೆಯಲ್ಲೊಂದು ಆತ್ಮಚರಿತ್ರೆ!

ಚಿತ್ರ ವಿಮರ್ಶೆ

Team Udayavani, Jun 2, 2019, 3:00 AM IST

“ನನಗೆ ಮೋಸ ಮಾಡಿರುವ ಯಾರೊಬ್ಬರನ್ನೂ ಬಿಡೋದಿಲ್ಲ…’ ಹೀಗೆ ರೋಷಾವೇಶಗೊಂಡ ಆತ್ಮವೊಂದು ಭಯಾನಕವಾಗಿ ವರ್ತಿಸುತ್ತ ಹೇಳುವ ಹೊತ್ತಿಗೆ, ಆ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆದು ಹೋಗಿರುತ್ತವೆ. ಆ ಮನೆಗೆ ಕಾಲಿಟ್ಟವರೆಲ್ಲರನ್ನೂ ಆ ಆತ್ಮ ಅಂತ್ಯ ಹಾಡಲು ಸ್ಕೆಚ್‌ ಹಾಕಿರುತ್ತೆ. ಆದರೆ, ಆ ಮನೆ ಒಳಹೊಕ್ಕವರು ಆತ್ಮದಿಂದ ತಪ್ಪಿಸಿಕೊಂಡು ಹೊರಬರುತ್ತಾರೋ, ಇಲ್ಲವೋ ಅನ್ನೋದೇ ಈ ಚಿತ್ರದ “ಆತ್ಮಕಥೆ!

ಅಸಲಿಗೆ ಇದು ಹಾರರ್‌ ಸ್ಪರ್ಶವಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರ. ಕನ್ನಡದಲ್ಲಿ ಆತ್ಮ ಕಥನವುಳ್ಳ ಚಿತ್ರಗಳು ಬಂದಿದ್ದರೂ, ಆ ಸಾಲಿಗೆ ಸೇರದ ಚಿತ್ರವಿದು ಎನ್ನಬಹುದು. ಕಾರಣ, ಹಾರರ್‌ ಚಿತ್ರದ ಗ್ರಾಮರ್‌ ಹೊರತುಪಡಿಸಿದ ಅಂಶಗಳಿಲ್ಲಿವೆ. ಆ ಬಗ್ಗೆ ಕುತೂಹಲವಿದ್ದರೆ, “ಕಮರೊಟ್ಟು’ ಊರಲ್ಲಿರುವ ಆ ಮನೆಯ ಘಟನಾವಳಿಗಳನ್ನು ವೀಕ್ಷಿಸಬಹುದು.

ಆರಂಭದಲ್ಲಿ ಎಲ್ಲೂ ಇದೊಂದು ಹಾರರ್‌ ಚಿತ್ರ ಎನಿಸದಷ್ಟರ ಮಟ್ಟಿಗೆ ನೋಡಿಸಿಕೊಂಡು ಹೋಗುವ ಸಿನಿಮಾದಲ್ಲಿ ಹಲವು ಏರಿಳಿತಗಳಿವೆ. ಆ ಎಲ್ಲಾ ಏರಿಳಿತಗಳಲ್ಲೂ ಒಂದೊಂದು ತಿರುವುಗಳನ್ನು ನಿರೀಕ್ಷಿಸಬಹುದು. ಹೀಗೇ ಆಗುತ್ತೆ, ಅಂದುಕೊಂಡರೆ, ಅಲ್ಲಿ ಇನ್ನೇನೋ ನಡೆದು ಹೋಗುತ್ತೆ. ಮುಖ್ಯವಾಗಿ ಗಮನಿಸುವುದಾದರೆ ಕಥೆ ಸರಳವಾಗಿದ್ದರೂ, ಚಿತ್ರಕಥೆ, ನಿರೂಪಣೆಯಲ್ಲಿ ಬಿಗಿ ಹಿಡಿತವಿದೆ. ಹೊಸತನವೂ ತುಂಬಿದೆ.

ಕಥೆ ಎಲ್ಲೋ ಟ್ರ್ಯಾಕ್‌ ಬಿಟ್ಟು ಹೋಗುತ್ತಿದೆಯಾ ಎಂಬ ಪ್ರಶ್ನೆ ಕಾಡುವ ಮಧ್ಯೆ, ಆ ಎಲ್ಲಾ ಗೊಂದಲಗಳಿಗೂ “ಲಿಂಕ್‌’ ಕಲ್ಪಿಸುವ ಮೂಲಕ ಅನುಮಾನ ಬಗೆಹರಿಸುತ್ತಾ ಹೋಗುವ ನಿರ್ದೇಶಕರಿಲ್ಲಿ ಹಲವು ಚಾಲೆಂಜ್‌ಗಳನ್ನು ಎದುರಿಸಿರುವುದು ಸ್ಪಷ್ಟವಾಗಿ ಕಾಣುತ್ತೆ. ಈ ರೀತಿಯ ಚಿತ್ರಕ್ಕೆ ತಾಂತ್ರಿಕತೆ ಪ್ರಧಾನವಾಗಿರಬೇಕು. ಅದರ ಜಾಣತನ ಕಾಣಬಹುದು.

ಕಣ್ಣ ಮುಂದೆ ನಡೆಯುತ್ತಿರುವ “ಆತ್ಮ’ದ ಆರ್ಭಟವೇನೋ ಎಂಬಷ್ಟರ ಮಟ್ಟಿಗೆ, ಅಳವಡಿಸಿರುವ ಗ್ರಾಫಿಕ್ಸ್‌, ಎಫೆಕ್ಟ್ ತಂತ್ರಜ್ಞಾನ ನೋಡುಗರಲ್ಲಿ ಹೊಸ ಫೀಲ್‌ ತುಂಬುತ್ತದೆ. ಹಾರರ್‌ ಅಂದಾಕ್ಷಣ, ಚೀರಾಟ, ಹಾರಾಟ ಜೊತೆಗೆ ಭೀಕರತೆಯ ಶಬ್ಧ-ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಇಲ್ಲೂ ಹಾರರ್‌ ಕಥೆ ಇದೆ. ಹಾಗಂತ, ಇಲ್ಲಿರುವ ಆತ್ಮ ಚೀರಲ್ಲ, ಆರ್ಭಟಿಸಲ್ಲ.

ನೋಡುಗರನ್ನು ಎಷ್ಟು ಹೆದರಿಸಬೇಕೋ, ಹೇಗೆ ಬೆಚ್ಚಿಬೀಳಿಸಬೇಕೋ ಅಷ್ಟನ್ನೇ ಮಾಡಿದೆ. ಹಾರರ್‌ ಚಿತ್ರದಲ್ಲಿ ಭಯ ಇಲ್ಲವೆಂದರೆ ಅದು ಪರಿಣಾಮಕಾರಿ ಎನಿಸಲ್ಲ ಎಂಬ ಸತ್ಯ ಅರಿತಿರುವ ಚಿತ್ರತಂಡ, ದ್ವಿತಿಯಾರ್ಧದಲ್ಲಿ ಅಂಥದ್ದೊಂದು “ಭಯಾನಕ ಫೀಲ್‌’ ಅನುಭವಿಸುವಂತೆ ಮಾಡಿದೆ. ಹಾಗಂತ, ಇಡೀ ಸಿನಿಮಾದುದ್ದಕ್ಕೂ ಅದೇ ಭಯದ ವಾತಾವರಣ ಇದೆಯಂದಲ್ಲ.

ಮೊದಲರ್ಧ ಸಾಂಗೋಪವಾಗಿ ನಡೆಯುವ ಕಥೆ, ಮೆಲ್ಲನೆ ಬೇರೆ ರೂಪ ಪಡೆದು, ನೋಡುಗರಲ್ಲಿ ಅಲ್ಲೇನೋ ಸಮಸ್ಯೆ ಇದೆ ಎನಿಸುವಂತೆ ಹತ್ತಿರವಾಗುತ್ತೆ. ಇಲ್ಲಿ ಗೆಳೆತನದ ಆಳವಿದೆ, ಪ್ರೀತಿಯ ಸೆಳೆತವಿದೆ, ಹೀಗಾಯ್ತಲ್ಲ ಎಂಬ ನೋವಿನ ಛಾಯೆ ಆವರಿಸಿದೆ. ಆತ್ಮದ ಸಂಕಟ-ರೋಷಾಗ್ನಿಯೂ ತುಂಬಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಆತ್ಮದ ಅಂತರಾಳ ಜೊತೆ ಮಾತನಾಡುವ ವ್ಯಕ್ತಿಯ ಶಕ್ತಿಯೂ ಇದೆ.

ಹಾಗಂತ, ದೆವ್ವವನ್ನು ಹೆದರಿಸುವ ದೇವರಾಗಲಿ, ಆತ್ಮವನ್ನು ಓಡಿಸುವ ಸ್ವಾಮೀಜಿಯಾಗಲಿ ಇಲ್ಲಿಲ್ಲ. ಅದಕ್ಕೂ ಮೀರಿದ ವ್ಯಕ್ತಿಯ ಶಕ್ತಿಯೊಂದು ಆತ್ಮವನ್ನು ಬಂಧನದಲ್ಲಿರಿಸಿ, ಆ ಆತಂಕಕ್ಕೊಂದು ಅಂತ್ಯ ಹಾಡುತ್ತೆ. ಆ ಶಕ್ತಿಯೇ ಚಿತ್ರದ ಹೈಲೈಟ್‌. ಆ ಬಗ್ಗೆ ತಿಳಿಯುವ, ನೋಡುವ ಸಣ್ಣ ಕುತೂಹಲ ಬಂದರೆ, “ಚೆಕ್‌ಪೋಸ್ಟ್‌’ ದಾಟಿ ಹೋಗಲ್ಲಡ್ಡಿಯಿಲ್ಲ.

ಇನ್ನು, ಇಲ್ಲಿ ಕರಾವಳಿ ಸೊಗಡಿದೆ. ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಭೂತಕೋಲ, ದೈವ , ತುಳುನಾಡಿನ ಸಂಭ್ರಮ, ತುಳು ಭಾಷೆಯ ಹಾಡು ಇದೆ. ಕಥೆಗೆ ಪೂರಕವಾಗಿಯೇ ಇವೆಲ್ಲವನ್ನೂ ಕಾಣಬಹುದು. ಎಲ್ಲವನ್ನು ಅಷ್ಟೇ ನೈಜವಾಗಿರಿಸಿರುವ ಪ್ರಯತ್ನ ಸಾರ್ಥಕವೆನಿಸಿದೆ. ಆಗಾಗ ಒಂದಷ್ಟು ಕುತೂಹಲದ ಅಂಶಗಳೂ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತವೆ.

ಊಸರವಳ್ಳಿಯ ಅನಿಮೇಷನ್‌ ಪಾತ್ರವೊಂದು ದೃಶ್ಯಗಳ ಸರದಿಯಲ್ಲಿ ಇಣುಕಿ ನೋಡುತ್ತದೆ. ಆ ಪ್ರಾಣಿ ಯಾಕಿದೆ ಅನ್ನೋದನ್ನು ಚಿತ್ರದಲ್ಲೇ ಕಾಣಬೇಕು. ಬೆಂಗಳೂರಿನಿಂದ ಮಲೆನಾಡಿನ “ಕಮರೊಟ್ಟು’ ಊರಲ್ಲಿರುವ ಗೆಳೆಯನ ಮನೆಗೆಂದು ತನ್ನ ಗೆಳೆಯರ ಜೊತೆ ಹೊರಡುವ ಕುಟುಂಬಕ್ಕೆ ಆ ಮನೆಯಲ್ಲಿ ಚಿತ್ರ ವಿಚಿತ್ರ ಘಟನೆಗಳು ಎದುರಾಗುತ್ತವೆ.

ಆ ಮನೆಯಲ್ಲೊಂದು ಸಮಸ್ಯೆ ಇದೆ ಎಂದು ಗೊತ್ತಾಗುವ ಹೊತ್ತಿಗೆ, ತನ್ನ ಜೊತೆ ಮಾತನಾಡಿದವರು, ಎದುರು ಕಂಡವರ್ಯಾರೂ ಬದುಕಿಲ್ಲ ಎಂಬುದು ಅರಿವಾಗುತ್ತದೆ. ಅಲ್ಲೊಂದು ಆತ್ಮ ಇದೆ ಅಂತ ತಿಳಿಯುತ್ತಿದ್ದಂತೆಯೇ, ಆ ಮನೆಗೆ ಪ್ಯಾರನಾರ್ಮಲ್‌ ಸಂಶೋಧಕಿಯೊಬ್ಬರು ತಂಡ ಜೊತೆ ಎಂಟ್ರಿಯಾಗುತ್ತಾರೆ.

ಪ್ಯಾರನಾರ್ಮಲ್‌ ಚಟುವಟಿಕೆ ಮೂಲಕ ಆತ್ಮ ಜೊತೆ ಮಾತನಾಡುವ, ಹಿಂದಿನ ರಹಸ್ಯ ತಿಳಿಯುವ ಅವರಿಗೆ, ಇಲ್ಲಿ ಒಂದು ಆತ್ಮವವಲ್ಲ, ನಾಲ್ಕು ಆತ್ಮಗಳಿರುವುದು ಗೊತ್ತಾಗುತ್ತೆ. ಆ ಆತ್ಮಗಳೇಕೆ, ಅವರನ್ನು ಕಾಡುತ್ತವೆ ಎಂಬ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು. ಸನತ್‌ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಇನ್ನಷ್ಟು ಫೀಲ್‌ ಕಟ್ಟಿಕೊಡಬಹುದಿತ್ತು.

ಉತ್ಪಲ್‌ ನಟನೆಯಲ್ಲಿ ಲವಲವಿಕೆ ಇದೆ. ಕ್ಲೈಮ್ಯಾಕ್ಸ್‌ ಮುನ್ನ “ಆತ್ಮ’ವೇ ತಾನಾಗಿ ಆರ್ಭಟಿಸಿರುವ ರೀತಿ ಮತ್ತು ಅವರ ಬಾಡಿಲಾಂಗ್ವೇಜ್‌ ಎಲ್ಲವೂ ಗಮನಸೆಳೆಯುತ್ತದೆ. ಉಳಿದಂತೆ ಅಹಲ್ಯಾ, ಸ್ವಾತಿಕೊಂಡೆ, ಗಡ್ಡಪ್ಪ, ಆಕಾಶ್‌, ಇಶಾಶರ್ಮ, ಬೇಬಿ ಸಮಿಹ ಎಲ್ಲರೂ ಪಾತ್ರಗಳಿಗೆ ಸ್ಪಂದಿಸಿದ್ದಾರೆ. ಎ.ಟಿ.ರವೀಶ್‌ ಸಂಗೀತದ ಹಾಡಿಗಿಂತ ಹಿನ್ನೆಲೆ ಸಂಗೀತ ಚಿತ್ರ ವೇಗ ಹೆಚ್ಚಿಸಿದೆ. ಇನ್ನು, ದೀಪು ಅರಸೀಕೆರೆ ಮತ್ತು ಪರಮೇಶ್‌ ಛಾಯಾಗ್ರಹಣದಲ್ಲಿ ಕಮರೊಟ್ಟು ಮನೆಯ “ಫೀಲ್‌’ ಹೆಚ್ಚಿಸಿದೆ.

ಚಿತ್ರ: ಕಮರೊಟ್ಟು ಚೆಕ್‌ಪೋಸ್ಟ್‌
ನಿರ್ಮಾಣ: ಚೇತನ್‌ರಾಜ್‌
ನಿರ್ದೇಶನ: ಎ.ಪರಮೇಶ್‌
ತಾರಾಗಣ: ಉತ್ಪಲ್‌, ಅಹಲ್ಯಾ, ಸನತ್‌, ಸ್ವಾತಿಕೊಂಡೆ, ಆಕಾಶ್‌, ಗಡ್ಡಪ್ಪ, ನಿಶಾಶರ್ಮ, ಬೇಬಿ ಸಮಿಹ ಇತರರು.

* ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ