ಸ್ನೇಹದ ನೆಪದಲ್ಲಿ ಆ್ಯಕ್ಷನ್‌ ಜಪ

ಚಿತ್ರ ವಿಮರ್ಶೆ

Team Udayavani, Jun 29, 2019, 3:01 AM IST

ಆತ ಖಡಕ್‌ ಪೊಲೀಸ್‌ ಆಫೀಸರ್‌. ಬಿಹಾರದ ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌. ಗೂಂಡಾಗಳಿಗೆ ಗುಂಡೇಟು ಮದ್ದು ಎಂದು ಭಾವಿಸಿದ ಅಧಿಕಾರಿ. ಇಂತಹ ಅಧಿಕಾರಿ ಇನ್ನಷ್ಟು ಕೆರಳುತ್ತಾನೆ. ಅದಕ್ಕೆ ಕಾರಣ ತನ್ನ ಸ್ನೇಹಿತನ ಜೀವನದಲ್ಲಾದ ಘಟನೆ. ಅಲ್ಲಿಂದ ಆತನ ಕೆರಳಿದ ಸಿಂಹ. ಮುಂದೆ ಪ್ರೇಕ್ಷಕ ನೋಡೋದು ರಣಕಾಳಗವನ್ನು.

ಇಷ್ಟು ಹೇಳಿದ ಮೇಲೆ ಇದೊಂದು ಆ್ಯಕ್ಷನ್‌ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಜೊತೆಗೆ “ರುಸ್ತುಂ’ ಚಿತ್ರವನ್ನು ನಿರ್ದೇಶಿಸಿರೋದು ಸಾಹಸ ನಿರ್ದೇಶಕ ರವಿವರ್ಮ. ಹಾಗಾಗಿ, ಅವರ ಮೂಲಶಕ್ತಿಯನ್ನು ಯಥೇತ್ಛವಾಗಿ ಬಳಸಿಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಹಾಗಾಗಿಯೇ “ರುಸ್ತುಂ’ ಇತ್ತೀಚೆಗೆ ಬಂದ ಆ್ಯಕ್ಷನ್‌ ಸಿನಿಮಾಗಳಲ್ಲಿ ಒಂದು ಮೆಟ್ಟಿ ಮೇಲೆ ನಿಲ್ಲುತ್ತದೆ.

ತಲೆತುಂಬಾ ಕೆದರಿದ ಕೂದಲು, ವಿಚಿತ್ರ ಗಡ್ಡ, ಭಯಾನಕ ಲುಕ್‌ ಇರುವ ವಿಲನ್‌ಗಳು, ಅವರನ್ನು ಅಟ್ಟಾಡಿಸಿ ಹೊಡೆಯುವ ಹೀರೋ … ಈ ತರಹದ ಸಿನಿಮಾಗಳನ್ನು ನೀವು ಇಷ್ಟಪಡುವವರಾಗಿದ್ದಾರೆ ನಿಮಗೆ ಖಂಡಿತಾ “ರುಸ್ತುಂ’ ಚಿತ್ರ ಇಷ್ಟವಾಗುತ್ತದೆ. ಹೈವೋಲ್ಟೆಜ್‌ ಆ್ಯಕ್ಷನ್‌ ಮೂಲಕ ಸಾಗುವ ಸಿನಿಮಾ, ನಿಮ್ಮನ್ನು ಸದಾ ಕುತೂಹಲದಲ್ಲಿಡುತ್ತದೆ ಮತ್ತು ಮಾಸ್‌ ಪ್ರಿಯರ ರಕ್ತ ಬಿಸಿಯಾಗುವಂತೆ ಮಾಡುತ್ತದೆ.

ಹಾಗಂತ ಚಿತ್ರದಲ್ಲಿ ಕಥೆ ಇಲ್ಲವೇ ಎಂದರೆ ಖಂಡಿತಾ ಇದೆ. ಆ ಕಥೆಯಲ್ಲಿ ಸ್ನೇಹ, ಸೆಂಟಿಮೆಂಟ್‌, ಹಾಸ್ಯ ಎಲ್ಲವೂ ಇದೆ. ಆದರೆ, ಅದರಾಚೆಗೂ ಒಂದು ರಿವೆಂಜ್‌ ಸ್ಟೋರಿ ಇದೆ. ಆ್ಯಕ್ಷನ್‌ ಸಿನಿಮಾ ರಂಗೇರಲು ಕಥೆಯಲ್ಲಿ ಒಂದು ಬಲವಾದ ಕಾರಣ ಬೇಕು. ಆ ಕಾರಣ ಇಲ್ಲಿದೆ. ಹಾಗಂತ ಕಥೆ ತೀರಾ ಹೊಸದು ಎಂದು ಹೇಳುವಂತಿಲ್ಲ.

ಕಳ್ಳ-ಪೊಲೀಸ್‌ ಆಟದಲ್ಲಿ ಈ ತರಹದ ಸಾಕಷ್ಟು ಕಥೆಗಳು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಂದು ಹೋಗಿವೆ. ಆದರೆ, “ರುಸ್ತುಂ’ನ ಸಮಯ, ಸಂದರ್ಭ, ಆಶಯ ಭಿನ್ನವಾಗಿವೆಯಷ್ಟೇ. ಇಲ್ಲಿ ಕಥೆಗಿಂತ ಎದ್ದು ಕಾಣುವುದು ನಿರೂಪಣೆ. ಮೊದಲ ಬಾರಿಗೆ ನಿರ್ದೇಶನ ಮಾಡಿರುವ ರವಿವರ್ಮ, ಇಡೀ ಸಿನಿಮಾವನ್ನು ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದಾರೆ.

ಯಾವುದೇ ಕನ್‌ಫ್ಯೂಶನ್‌ ಆಗಲೀ, ಅನಾವಶ್ಯಕ ಅಂಶಗಳನ್ನಾಗಲೀ ಸೇರಿಸದೇ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಕಥೆಗೆ ವೇದಿಕೆ ಕಲ್ಪಿಸುವ ಚಿತ್ರದ ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ, ಚಿತ್ರದ ದ್ವಿತೀಯಾರ್ಧ ವೇಗ ಪಡೆದುಕೊಳ್ಳುವ ಸಿನಿಮಾದಲ್ಲಿ ರವಿವರ್ಮ, ತಮ್ಮ ಮೂಲವೃತ್ತಿಯ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಆ ಮೂಲಕ ದ್ವಿತೀಯಾರ್ಧ ಆ್ಯಕ್ಷನ್‌ಮಯವಾಗಿದೆ. ಚಿತ್ರ ಮುಖ್ಯವಾಗಿ ಕರ್ನಾಟಕ ಹಾಗೂ ಬಿಹಾರದಲ್ಲಿ ನಡೆಯುತ್ತದೆ. ಬಿಹಾರ ದೃಶ್ಯಗಳನ್ನು ಅಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಈ ಸಿನಿಮಾದ ಮುಖ್ಯ ಶಕ್ತಿ ಎಂದರೆ ಅದು ಶಿವರಾಜಕುಮಾರ್‌. ಅದು ಫ್ಯಾಮಿಲಿ ಮ್ಯಾನ್‌ ಆಗಿ, ಫ್ರೆಂಡ್‌ ಆಗಿ, ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಶಿವಣ್ಣ ಇಷ್ಟವಾಗುತ್ತಾರೆ.

ಅದರಲ್ಲೂ ಪೊಲೀಸ್‌ ಆಫೀಸರ್‌ ಆಗಿ ಆ್ಯಕ್ಷನ್‌ ದೃಶ್ಯಗಳಲ್ಲಿ ಶಿವಣ್ಣ ಅವರನ್ನು ನೋಡೋದೇ ಅವರ ಅಭಿಮಾನಿಗಳಿಗೆ ಹಬ್ಬ. ಇಡೀ ಚಿತ್ರವನ್ನು ಹೊತ್ತುಕೊಂಡು ಸಾಗಿರುವ ಶಿವರಾಜಕುಮಾರ್‌ ಅವರ ಎನರ್ಜಿಯನ್ನು ಮೆಚ್ಚಲೇಬೇಕು. ಇನ್ನು ಚಿತ್ರದಲ್ಲಿ ವಿವೇಕ್‌ ಒಬೆರಾಯ್‌ ನಟಿಸಿದ್ದು, ತೆರೆಮೇಲೆ ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. ಉಳಿದಂತೆ ಶ್ರದ್ಧಾ ಶ್ರೀನಾಥ್‌, ಮಯೂರಿ, ಮಹೇದ್ರನ್‌, ಶಿವಮಣಿ, ಶ್ರೀಧರ್‌ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಹೈಲೈಟ್‌ಗಳಲ್ಲಿ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕೂಡಾ ಒಂದು. ಸಂಗೀತ ನಿರ್ದೇಶಕ ಅನೂಪ್‌ ಸೀಳೀನ್‌ ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಚಿತ್ರಕ್ಕೆ, ಅದರಲ್ಲೂ ಆ್ಯಕ್ಷನ್‌ ಸಿನಿಮಾದ ಮೂಡ್‌ಗೆ ತಕ್ಕಂತೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜೊತೆಗೆ ಹಾಡುಗಳು ಕೂಡಾ ಇಷ್ಟವಾಗುತ್ತವೆ. ಮಹೇನ್‌ ಸಿಂಹ ಅವರ ಛಾಯಾಗ್ರಹಣದಲ್ಲಿ “ರುಸ್ತುಂ’ ಖದರ್‌ ಹೆಚ್ಚಿದೆ.

ಚಿತ್ರ: ರುಸ್ತುಂ
ನಿರ್ಮಾಣ: ಜಯಣ್ಣ-ಭೋಗೇಂದ್ರ
ನಿರ್ದೇಶನ: ರವಿವರ್ಮ
ತಾರಾಗಣ: ಶಿವರಾಜಕುಮಾರ್‌, ವಿವೇಕ್‌ ಒಬೆರಾಯ್‌, ಶ್ರದ್ಧಾ ಶ್ರೀನಾಥ್‌, ಮಯೂರಿ, ಮಹೇಂದ್ರನ್‌ ಮತ್ತಿತರರು.

* ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ಕೊಡಲೇಬಾರದು ಎಂದು ಸಿಬಿಐ ದಿಲ್ಲಿ ಹೈಕೋರ್ಟ್‌ ನಲ್ಲಿ ಒತ್ತಾಯಿಸಿದೆ. ಇದೊಂದು...

  • ಉಡುಪಿ: ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ "ಉದಯವಾಣಿ'ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ...

  • ಹೊಸದಿಲ್ಲಿ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ...

  • ಕೋಲ್ಕತಾ: ಪಶ್ಚಿಮ ಬಂಗಾಲದ ಜಾಧವ್‌ಪುರ ವಿವಿಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ....

  • ಹ್ಯೂಸ್ಟನ್‌: ಅಮೆರಿಕದ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೃಹತ್‌ ಕಾರ್ಯಕ್ರಮ ಹೌಡಿ ಮೋದಿ ತಯಾರಿಗೆ ಭಾರಿ ಮಳೆ ಅಡ್ಡಿ ಯಾಗಿದೆ. ಈ ಭಾಗದಲ್ಲಿ ಬಿರು ಗಾಳಿ...